

ಬೆಂಗಳೂರು: ಮಧ್ಯರಾತ್ರಿ ಜಿಎಸ್‌ಟಿ ಜಾರಿಯಾದ ಕೂಡಲೇ ಪೆಟ್ರೋಲ್, ಡೀಸೆಲ್ ದರ ಇಳಿಕೆಯಾಗಿದ್ದು, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 3.42 ರು, ಮತ್ತು ಡೀಸೆಲ್ ದರ 3.57 ರು ಕಡಿತವಾಗಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಂಗಳೂರಿನಲ್ಲಿ 57.80 ರು. ಇದ್ದ ಡೀಸೆಲ್ ದರ, ಶನಿವಾರ ಬೆಳಗ್ಗೆ 6 ಗಂಟೆಗೆ ಅನ್ವಯವಾಗುವಂತೆ 54.23 ರು.ಗೆ ಇಳಿಕೆಯಾಗಿದೆ. ಅಂತೆಯೇ ನಿನ್ನೆ 67.66 ರು. ಇದ್ದ ಪೆಟ್ರೋಲ್ ದರ 64.24 ರು.ಗಳಿಗೆ ಇಳಿಕೆಯಾಗಿದೆ. ಅಂದರೆ ಡೀಸೆಲ್‌ನಲ್ಲಿ 3.57 ರೂ. ಕಡಿತವಾಗಿದ್ದರೆ, ಪೆಟ್ರೋಲ್‌ನಲ್ಲಿ 3.42 ರೂ.ನಷ್ಟು ಇಳಿಕೆಯಾಗಿದೆ.
ಇದುವರೆಗೆ ಇದ್ದ ಬೇರೆ ಎಲ್ಲ ರೀತಿಯ ತೆರಿಗೆಗಳು ಹೋಗಿ, ಜಿಎಸ್‌ಟಿಯೊಂದೇ ಜಾರಿಯಾಗಿರುವ ಹಿನ್ನೆಲೆಯಲ್ಲಿ ಎರಡರಲ್ಲೂ ಈ ಪ್ರಮಾಣದ ಇಳಿಕೆಯಾಗಿದೆ ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿ ಪೆಟ್ರೋಲ್ ಉತ್ಪನ್ನಗಳ ಮೇಲಿನ ತೆರಿಗೆ ಏರಿಕೆ
ಇತ್ತ ಈ ಹಿಂದೆ ರೈತರ ಸಾಲಮನ್ನಾ ಮಾಡಿದ್ದ ರಾಜ್ಯ ಸರ್ಕಾರ, ತನ್ನ ಮೇಲಿನ ಸುಮಾರು 8300 ಕೋಟಿ ರುಗಳ ಹೊರೆಯನ್ನು ಇಳಿಕೆ ಮಾಡಿಕೊಳ್ಳಲು ತನ್ನ ಪಾಲಿನ ತೈಲೋತ್ಪನ್ನಗಳ ಮೇಲಿನ ತೆರಿಗೆ ಪ್ರಮಾಣವನ್ನು ಏರಿಕೆ ಮಾಡಲು ನಿರ್ಧರಿಸಿದೆ. ಅದರಂತೆ ಮುಂದಿನ 4 ತಿಂಗಳಲ್ಲಿ 4 ಸಾವಿರ ಕೋಟಿ ಸಂಗ್ರಹ ಮಾಡುವ ಉದ್ದೇಶದಿಂದ ಹಾಲಿ ಇರುವ ತೈಲೋತ್ಪನ್ನಗಳ ಮೇಲಿನ ತನ್ನ ಪಾಲಿನ ತೆರಿಗೆ ಪ್ರಮಾಣವನ್ನು ಮತ್ತು ಅಬಕಾರಿ ಸುಂಕವನ್ನು ಶೇ.2ಕ್ಕೆ ಏರಿಕೆ ಮಾಡಲು ರಾಜ್ಯ ಸರ್ಕಾರ ಗಂಭೀರ ಚಿಂತನೆಯಲ್ಲಿ ತೊಡಗಿದೆ ಎಂದು ಹೇಳಲಾಗುತ್ತಿದೆ.