

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ವಿತ್ತ ಸಚಿವಾಲಯ ಮಹಿಳಾ ಬ್ಯಾಂಕ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದೆ.
ಸೋಮವಾರ ನಡೆದ ವಿತ್ತ ಸಚಿವಾಲಯದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಎಸ್ ಬಿಐ ಸಮೂಹ ಈಗಾಗಲೇ ಮಹಿಳೆಯರಿಂದಲೇ ಕಾರ್ಯ ನಿರ್ವಹಿಸಲ್ಪಡುವ 126 ಶಾಖೆಗಳನ್ನು ಹೊಂದಿದೆ. ಆದರೆ, ಭಾರತೀಯ ಮಹಿಳಾ ಬ್ಯಾಂಕ್ ಕೇವಲ 7 ಶಾಖೆಗಳನ್ನು ಹೊಂದಿದೆ. ಇದೇ ಕಾರಣಕ್ಕೆ ಮಹಿಳಾ ಬ್ಯಾಂಕ್ ಅನ್ನು ಎಸ್ ಬಿಐ ನೊಂದಿಗೆ ವಿಲೀನ ಮಾಡಲಾಗುತ್ತಿದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
ಭಾರತೀಯ ಮಹಿಳಾ ಬ್ಯಾಂಕ್ ನ ಆಡಳಿತ ಮತ್ತು ನಿರ್ವಹಣಾ ವೆಚ್ಚ ಇತರೆ ಬ್ಯಾಂಕುಗಳಿಗಿಂತ ಹೆಚ್ಚಿದ್ದು, ಬ್ಯಾಂಕ್ ಅನ್ನು ಎಸ್ ಬಿಐನೊಂದಿಗೆ ವಿಲೀನಗೊಳಿಸುವುದರಿಂದ ಈ ವೆಚ್ಚ ಇಳಿಕೆಯಾಗಲಿದೆ. ಆ ಮೂಲಕ ಹೆಚ್ಚಿನ ಸಾಲಗಳನ್ನು ಮತ್ತು ಉತ್ತಮ ಸೇವೆಯನ್ನು ಮಹಿಳೆಯರಿಗೆ ಒದಗಿಸಬಹುದು. ಅತೀ ಹೆಚ್ಚು ಮಹಿಳೆಯರನ್ನು ಸೇವೆ ತಲುಬೇಕು ಎನ್ನುವ ಉದ್ದೇಶದಿಂದ ಮಹಿಳಾ ಬ್ಯಾಂಕ್ ಅನ್ನು ವಿಲೀನಗೊಳಿಸಲಾಗುತ್ತಿದೆ ಎಂದು ವಿತ್ತ ಸಚಿವಾಲಯ ಸ್ಪಷ್ಟಪಡಿಸಿದೆ.
ಭಾರತೀಯ ಮಹಿಳಾ ಬ್ಯಾಂಕ್ 2013ರಲ್ಲಿ ಸ್ಥಾಪನೆಯಾಗಿದ್ದು, ಕಳೆದ ಮೂರು ವರ್ಷದಲ್ಲಿ ಮಹಿಳೆಯರಿಗೆ 192 ಕೋಟಿ ಸಾಲ ನೀಡಿದೆ. ಅಂತೆಯೇ ಎಸ್ ಬಿಐ ಮಹಿಳಾ ಶಾಖಾ ಬ್ಯಾಂಕ್ 46 ಸಾವಿರ ಕೋಟಿ ಸಾಲ ನೀಡಿದೆ. ಎಸ್ ಬಿಐನಲ್ಲಿ 2 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿದ್ದು, ಈ ಪೈಕಿ ಶೇ.22ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ.