
ನವದೆಹಲಿ: ಕೇಂದ್ರ ಸರ್ಕಾರ ಮಧ್ಯಮ ವರ್ಗದ ತೆರಿಗೆದಾರರಿಗೆ ಬಹುದೊಡ್ಡ ರಿಲೀಫ್ ನೀಡಲು ಯೋಜಿಸುತ್ತಿದ್ದು, 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೌದು.. ಮುಂಬರುವ ಫೆಬ್ರವರಿಯ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ಮತ್ತು ಆರ್ಥಿಕತೆ ನಿಧಾನಗತಿ ತಡೆಗಾಗಿ ಬಳಕೆಯನ್ನು ಹೆಚ್ಚಿಸಲು ವರ್ಷಕ್ಕೆ 15 ಲಕ್ಷ ರೂ.ವರೆಗಿನ ವ್ಯಕ್ತಿಗಳ ಆದಾಯ ತೆರಿಗೆಯನ್ನು ಕಡಿತಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಸರ್ಕಾರಿ ಮೂಲಗಳು ತಿಳಿಸಿರುವಂತೆ ಕೇಂದ್ರ ಸರ್ಕಾರ 15 ಲಕ್ಷ ರೂ.ವರೆಗಿನ ಆದಾಯಕ್ಕೆ ತೆರಿಗೆ ಕಡಿತ ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.
ಪ್ರಮುಖವಾಗಿ ವಸತಿ ಬಾಡಿಗೆಗಳಂತಹ ವಿನಾಯಿತಿಗಳನ್ನು ತೆಗೆದುಹಾಕುವ 2020 ರ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಂಡರೆ, ಈ ಕ್ರಮವು ಹತ್ತಾರು ಮಿಲಿಯನ್ ತೆರಿಗೆದಾರರಿಗೆ, ವಿಶೇಷವಾಗಿ ಹೆಚ್ಚಿನ ಜೀವನ ವೆಚ್ಚದಿಂದ ಹೊರೆಯಾಗಿರುವ ನಗರವಾಸಿಗಳಿಗೆ ಪ್ರಯೋಜನವನ್ನು ನೀಡುತ್ತದೆ. 2020ರ ತೆರಿಗೆ ಪದ್ದತಿಯಲ್ಲಿ 3 ಲಕ್ಷ ರೂ.ಗಳಿಂದ 15 ಲಕ್ಷ ರೂ.ಗಳವರೆಗಿನ ವಾರ್ಷಿಕ ಆದಾಯಕ್ಕೆ ಶೇ. 5% ರಿಂದ ಶೇ.20% ರವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಈ ಪ್ರಮಾಣ ಗರಿಷ್ಠ 30% ರಷ್ಟಿತ್ತು.
ಇದೀಗ ಕೇಂದ್ರ ಸರ್ಕಾರ ಮುಂದಿಟ್ಟಿರುವ ನೂತನ ಪ್ರಸ್ತಾಪದಲ್ಲಿ ಭಾರತೀಯ ತೆರಿಗೆದಾರರು ಎರಡು ತೆರಿಗೆ ವ್ಯವಸ್ಥೆಗಳ ನಡುವೆ ಆಯ್ಕೆ ಮಾಡಬಹುದು. ಅದೇನೆಂದರೆ ವಸತಿ ಬಾಡಿಗೆ ಮತ್ತು ವಿಮೆಯ ಮೇಲೆ ವಿನಾಯಿತಿಯನ್ನು ಅನುಮತಿಸುವ ಒಂದು ತೆರಿಗೆ ಪದ್ದತಿ ಮತ್ತು ಮತ್ತೊಂದು 2020ರಲ್ಲಿ ಪರಿಚಯಿಸಲಾದ ತೆರಿಗೆ ಪದ್ದತಿ. ಇದು ಸ್ವಲ್ಪ ಕಡಿಮೆ ತೆರಿಗೆ ದರಗಳನ್ನು ನೀಡುತ್ತದೆಯಾದರೂ ಪ್ರಮುಖ ವಿನಾಯಿತಿಗಳನ್ನು ಅನುಮತಿಸುವುದಿಲ್ಲ ಎಂದು ವರದಿ ಹೇಳಿದೆ.
ವರದಿಯಲ್ಲಿರುವಂತೆ ಮಾಧ್ಯಮಗಳೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಈ ಮಾಹಿತಿ ನೀಡಿದ್ದು, 'ಯಾವುದೇ ಕಡಿತದ ಪ್ರಮಾಣವನ್ನು ಈ ವರೆಗೂ ನಿರ್ಧರಿಸಿಲ್ಲ. ಫೆಬ್ರವರಿ 1 ರಂದು ಬಜೆಟ್ ಗೆ ಕುರಿತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದೇ ವೇಳೆ ತೆರಿಗೆ ಕಡಿತದಿಂದ ಉಂಟಾಗುವ ಆದಾಯ ನಷ್ಟವನ್ನು ಹಂಚಿಕೊಳ್ಳಲು ನಿರಾಕರಿಸಿದ ಅಧಿಕಾರಿ, ತೆರಿಗೆ ದರಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚಿನ ಜನರು ಕಡಿಮೆ ಜಟಿಲವಾದ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂದು ಸಮರ್ಥನೆ ನೀಡಿದ್ದಾರೆ.
ಭಾರತ ಸರ್ಕಾರವು ತನ್ನ ಆದಾಯ ತೆರಿಗೆಯ ಬಹುಭಾಗವನ್ನು ಕನಿಷ್ಠ 10 ಲಕ್ಷ ರೂ. ಗಳಿಸುವ ವ್ಯಕ್ತಿ ಅಥವಾ ತೆರಿಗೆದಾರರಿಂದ ಪಡೆಯುತ್ತದೆ. ಅಂತೆಯೇ ಸರ್ಕಾರದ ಈ ನಿರ್ಧಾರವು ಮಧ್ಯಮ ವರ್ಗದ ಕೈಯಲ್ಲಿನ ಹೆಚ್ಚಿನ ಹಣದ ಹರಿವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆ ನೆರವಾಗಲಿದೆ.
ಅಂತೆಯೇ ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಏಳು ತ್ರೈಮಾಸಿಕಗಳಲ್ಲಿ ನಿಧಾನಗತಿಯಲ್ಲಿ ಬೆಳೆದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಆಹಾರ ಹಣದುಬ್ಬರವು ಸೋಪು ಮತ್ತು ಶಾಂಪೂಗಳಿಂದ ಹಿಡಿದು ಕಾರುಗಳು ಮತ್ತು ದ್ವಿಚಕ್ರ ವಾಹನಗಳವರೆಗೆ, ವಿಶೇಷವಾಗಿ ನಗರ ಪ್ರದೇಶಗಳಲ್ಲಿ ಸರಕುಗಳ ಬೇಡಿಕೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಸರ್ಕಾರ ಈಗಾಗಲೇ ಹೆಚ್ಚಿನ ತೆರಿಗೆಗಳ ವಿಚಾರವಾಗಿ ಮಧ್ಯಮ ವರ್ಗದಿಂದ ರಾಜಕೀಯ ಕೋಪ ಎದುರಿಸುತ್ತಿದ್ದು, ಪ್ರಮುಖವಾಗಿ ವೇತನದಲ್ಲಿನ ಬೆಳವಣಿಗೆಯು ಹಣದುಬ್ಬರದ ವೇಗದ ಪ್ರಮಾಣದಷ್ಟಿಲ್ಲ. ಇದೂ ಕೂಡ ತೆರಿಗೆದಾರರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.
ಅಂದಹಾಗೆ ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ, 3-15 ಲಕ್ಷ ರೂಪಾಯಿ ಆದಾಯ ಹೊಂದಿರುವವರಿಗೆ 5-20 ಪ್ರತಿಶತದಷ್ಟು ತೆರಿಗೆ ವಿಧಿಸಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಆದಾಯ ಬಂದರೆ ಆದಾಯದ ಶೇ.30ರಷ್ಟು ಹಣವನ್ನು ತೆರಿಗೆಯಾಗಿ ಕಟ್ಟಬೇಕಾಗುತ್ತದೆ.
3 ಲಕ್ಷ ರೂ ಆದಾಯದವರೆಗೆ ತೆರಿಗೆ ರಿಯಾಯಿತಿ ಇದ್ದು, 3 ರಿಂದ 7 ಲಕ್ಷ ರೂ ನಡುವಿನ ಆದಾಯ ಹೊಂದಿರುವವರಿಗೆ ಶೇ.5ರಷ್ಟು ಮತ್ತು 7 ರಿಂದ 10 ಲಕ್ಷದ ನಡುವಿನ ಆದಾಯಕ್ಕೆ ಶೇ.10ರಷ್ಟು, 10 ರಿಂದ12 ಲಕ್ಷ ರೂ ನಡುವಿನ ಆದಾಯಕ್ಕೆ ಶೇ.15ರಷ್ಟು ಮತ್ತು 12 ರಿಂದ 15 ಲಕ್ಷದ ನಡುವಿನ ಆದಾಯಕ್ಕೆ ಶೇ.20ರಷ್ಟು ಮತ್ತು ರೂ 15 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಶೇ.30ರಷ್ಟು ಆದಾಯ ತೆರಿಗೆ ವಿಧಿಸಲಾಗುತ್ತಿದೆ.
Advertisement