ಗುಡ್‌ನ್ಯೂಸ್: ಪೆಟ್ರೋಲ್, ಡೀಸೆಲ್, ATF ಮೇಲಿನ ತೆರಿಗೆ ಇಳಿಕೆ

ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED)ವನ್ನು ಪ್ರತಿ ಲೀಟರ್‌ಗೆ ₹25.50ರಿಂದ ₹24ಕ್ಕೆ ಇಳಿಸಲಾಗಿದೆ. ಅದೇ ರೀತಿ, ATF ರಫ್ತಿನ ಮೇಲಿನ SAED ಅನ್ನು ₹22ರಿಂದ ₹19.50ಕ್ಕೆ ಕಡಿತಗೊಳಿಸಲಾಗಿದೆ.
Govt cuts windfall gains tax on petrol, diesel, ATF exports
ಪೆಟ್ರೋಲ್, ಡೀಸೆಲ್, ATF ಮೇಲಿನ ತೆರಿಗೆ ಇಳಿಕೆ
Updated on

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ATF) ರಫ್ತು ಮೇಲಿನ ವಿಂಡ್‌ಫಾಲ್ ಗೇನ್ಸ್ ತೆರಿಗೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.

ಆಗಸ್ಟ್ 14ರಿಂದ ಆರಂಭವಾಗುವ ಮುಂದಿನ 15 ದಿನಗಳ ಅವಧಿಗೆ ಪರಿಷ್ಕೃತ ತೆರಿಗೆ ದರಗಳು ಅನ್ವಯವಾಗಲಿವೆ.

ಡೀಸೆಲ್ ರಫ್ತಿನ ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (SAED)ವನ್ನು ಪ್ರತಿ ಲೀಟರ್‌ಗೆ ₹25.50ರಿಂದ ₹24ಕ್ಕೆ ಇಳಿಸಲಾಗಿದೆ. ಅದೇ ರೀತಿ, ATF ರಫ್ತಿನ ಮೇಲಿನ SAED ಅನ್ನು ₹22ರಿಂದ ₹19.50ಕ್ಕೆ ಕಡಿತಗೊಳಿಸಲಾಗಿದೆ.

ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದ್ದು, ಆಗಸ್ಟ್ 14ರಿಂದ ಅದರ ದರ ಶೂನ್ಯವಾಗಲಿದೆ. ಆಗಸ್ಟ್ 3ರಂದು ಪೆಟ್ರೋಲ್ ರಫ್ತಿಗೆ ಪ್ರತಿ ಲೀಟರ್‌ಗೆ ₹3.50 ತೆರಿಗೆ ವಿಧಿಸಲಾಗಿತ್ತು. ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಪರಿಷ್ಕೃತ ದರಗಳು ಆಗಸ್ಟ್ 14ರಿಂದ ಜಾರಿಗೆ ಬರಲಿವೆ ಎಂದು ತಿಳಿಸಲಾಗಿದೆ.

Govt cuts windfall gains tax on petrol, diesel, ATF exports
ಡಾಲರ್ ಬೇಡವೇ ಬೇಡ; ಭಾರತದ ಕರೆನ್ಸಿಯನ್ನೇ ನೇರವಾಗಿ ಸ್ವೀಕರಿಸುವ ರಾಷ್ಟ್ರಗಳಿವು!

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ನಡುವೆ ತೆರಿಗೆ

ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆಯಲ್ಲಿ, ದೇಶೀಯ ಮಾರುಕಟ್ಟೆಯಲ್ಲಿ ಇಂಧನದ ಲಭ್ಯತೆ ಖಚಿತಪಡಿಸುವ ಉದ್ದೇಶದಿಂದ ಮಾರ್ಚ್ 27ರಂದು ಡೀಸೆಲ್ ಮತ್ತು ATF ರಫ್ತಿನ ಮೇಲೆ ಕೇಂದ್ರ ಸರ್ಕಾರ ವಿಂಡ್‌ಫಾಲ್ ತೆರಿಗೆ ವಿಧಿಸಿತ್ತು. ಬಳಿಕ ಪ್ರತಿ 15 ದಿನಗಳಿಗೊಮ್ಮೆ ತೆರಿಗೆ ದರವನ್ನು ಪರಿಷ್ಕರಿಸಲಾಗುತ್ತಿತ್ತು.

ಮೇ 16ರಿಂದ ಪೆಟ್ರೋಲ್ ರಫ್ತಿಗೂ ಈ ತೆರಿಗೆಯನ್ನು ವಿಧಿಸಲಾಗಿತ್ತು. ಆದಾಗ್ಯೂ, ದೇಶೀಯ ಬಳಕೆಗೆ ತೆರವುಗೊಳಿಸಲಾಗುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಪ್ರಸ್ತುತ ತೆರಿಗೆ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.

ಏಕೆ ವಿಧಿಸಲಾಗಿತ್ತು ವಿಂಡ್‌ಫಾಲ್ ತೆರಿಗೆ?

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಉಂಟಾದ ಬಳಿಕ ಜಾಗತಿಕ ಕಚ್ಚಾ ತೈಲ ಬೆಲೆಗಳಲ್ಲಿ ಏರಿಕೆ ಕಂಡುಬಂದಿತ್ತು. ಇದರಿಂದ ಭಾರತೀಯ ರಫ್ತುದಾರರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೆಚ್ಚಿನ ಬೆಲೆಗಳ ಲಾಭ ಪಡೆಯುವ ಸಾಧ್ಯತೆ ಇತ್ತು.

ಈ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಲಭ್ಯತೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಮತ್ತು ಹೆಚ್ಚಿನ ಲಾಭಕ್ಕಾಗಿ ಇಂಧನವನ್ನು ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡುವುದನ್ನು ನಿರುತ್ಸಾಹಗೊಳಿಸುವುದು ವಿಂಡ್‌ಫಾಲ್ ತೆರಿಗೆಯ ಪ್ರಮುಖ ಉದ್ದೇಶವಾಗಿತ್ತು.

ಆಗಸ್ಟ್ 14ರಿಂದ ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆ ಶೂನ್ಯವಾಗಿರುವುದು ಇಂಧನ ರಫ್ತು ಕ್ಷೇತ್ರಕ್ಕೆ ಮಹತ್ವದ ಬದಲಾವಣೆಯಾಗಿದೆ.

X
Kannada Prabha
www.kannadaprabha.com