ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನೇಪಾಳಿ ಸುಂದರಿ ಮನೀಶಾ ಕೊಯಿರಾಲಾಗೆ ಸ್ವದೇಶಕ್ಕೆ ಮರಳುವ ತವಕ. ಕ್ಯಾನ್ಸರ್‌ನಿಂದ ಚೇತರಿಸಿಕೊಳ್ಳುತ್ತಿರುವ ಆಕೆ ಇನ್ನೂ ಕೆಲ ಸಮಯ ವಿಶ್ರಾಂತಿಯಲ್ಲಿರಬೇಕು ಎಂದು ವೈದ್ಯರು ಹೇಳಿದ್ದಾರಂತೆ. ಆದರೆ ಅವಳಿಗೆ ಆದಷ್ಟು ಬೇಗ ಮುಂಬೈಗೆ ಸೇರಿಕೊಳ್ಳುವ ಬಯಕೆ. ಸದ್ಯ ಆಕೆ ಫೋನ್‌ನಲ್ಲಿಯೂ ಮಾತನಾಡುವಂತಿಲ್ಲ. ಇತ್ತೀಚೆಗೆ ಮನೀಶಾಳನ್ನು ಭೇಟಿ ಮಾಡಿದ್ದ ನಿರ್ದೇಶಕಿ ದೀಪ್ತಿ ನಾವಲ್, 'ಬಹುಶಃ ಜೂನ್‌ನಲ್ಲಿ ಆಕೆ ಮುಂಬೈಗೆ ಬರಬಹುದು' ಎಂದಿದ್ದಾರೆ. ದೀಪ್ತಿ ನಿರ್ದೇಶನದ, ಮನೀಶಾ ಮತ್ತು ರಜತ್ ಕಪೂರ್ ಅಭಿನಯದ 'ದೋ ಪೈಸೆ ಕೀ ಧೂಪ್, ಚಾರ್ ಆನೆ ಕೀ ಬಾರಿಶ್' ಚಿತ್ರೀಕರಣ ಮುಗಿಸಿ ಮೂರು ವರ್ಷವಾದರೂ ತೆರೆ ಕಂಡಿಲ್ಲ. ಈ ವರ್ಷಾಂತ್ಯದೊಳಗಾದರೂ ಬಿಡುಗಡೆ ಮಾಡಬೇಕು, ಮನೀಶಾ ಬಂದ ನಂತರ ಪ್ರಚಾರ ಶುರು ಹಚ್ಚಿಕೊಳ್ಳಬೇಕು ಎನ್ನುವುದು ದೀಪ್ತಿ ಆಸೆ.