

ಮುಂಬೈ: ನಿಜ ಜೀವನದ ಪಾತಕಿಗಳ ಜೀವನಾಧರಿತ ಚಿತ್ರ ನಿರ್ಮಾಣ ಮೂಲಕ "ಖ್ಯಾತಿ" ಗಳಿಸಿರುವ ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಬಳಿಕ ಮತ್ತೊಂದು ನೈಜ ಘಟನೆಯಾಧಾರಿತ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಕಿಲ್ಲಿಂಗ್ ವೀರಪ್ಪನ್ ಚಿತ್ರದ ಬಳಿಕ ಮತ್ತೋರ್ವ ಪಾತಕಿ ಕುರಿತ ಜೀವನಾಧರಿತ ಚಿತ್ರ ನಿರ್ಮಾಣಕ್ಕೆ ಕೈಹಾಕಿರುವ ಆರ್ ಜಿವಿ, ಪಾತಕಿಯಾಗಿ ಬಳಿಕ ಪೊಲೀಸ್ ಮಾಹಿತಿದಾರನಾಗಿದ್ದ ಮಾಜಿ ನಕ್ಸಲ್ ಹೋರಾಟಗಾರ ಮಹಮದ್ ನಯ್ಯೀಮುದ್ದೀನ್ ಆಕಾ ನಯ್ಯೀಮ್ ಕುರಿತ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿರುವ ಆರ್ ಜಿವಿ, ನಯ್ಯೀಮ್ ಕುರಿತು ಚಿತ್ರವನ್ನು ಮೂರು ಭಾಗಗಳಾಗಿ ತೆರೆಗೆ ತರುವುದಾಗಿ ಹೇಳಿದ್ದಾರೆ. "ವಿವಿಧ ಮೂಲಗಳಿಂದ ನಯ್ಯೀಮುದ್ದೀನ್ ಕುರಿತ ಮಾಹಿತಿಯನ್ನು ಕಲೆಹಾಕಿದ್ದೇನೆ. ಅತನ ಜೀವನದ ಕತೆ ನಿಜಕ್ಕೂ ರೋಮಾಂಚನಗೊಳಿಸುವಂತಿದೆ. ಹೀಗಾಗಿ ಈತನ ಕುರಿತ ಚಿತ್ರವನ್ನು ಮೂರು ಭಾಗಗಳಾಗಿ ತೆರೆಗೆ ತರುವುದಾಗಿ" ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
ನಕ್ಸಲ್ ಚಟುವಟಿಕೆಯಲ್ಲಿ ಕುಖ್ಯಾತಿ ಗಳಿಸಿದ್ದ ನಯ್ಯೀಮುದ್ದಿನ್ ಬಳಿಕ ಪೊಲೀಸ್ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಕಳೆದ ಆಗಸ್ಚ್ 8ರಂದು ಎನ್ ಕೌಂಟರ್ ನಲ್ಲಿ ಈತನನ್ನು ಕೊಲ್ಲಲಾಗಿತ್ತು.