ಮುಂಬೈ: ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಕೇವಲ ಉದ್ಯಮಗಳಲ್ಲಿ ಮಾತ್ರವಷ್ಟೇ ಅಲ್ಲ.. ಒಮ್ಮೆ ಅವರು ಬಾಲಿವುಡ್ ಚಿತ್ರವನ್ನೂ ನಿರ್ಮಿಸಿ ಕೈ ಸುಟ್ಟುಕೊಂಡಿದ್ದರು.
ಹೌದು.. ಉದ್ಯಮಿ ರತನ್ ಟಾಟಾ ಬಹುತೇಕ ಎಲ್ಲ ರಂಗದಲ್ಲೂ ಪರಿಪೂರ್ಣತೆ ಸಾಧಿಸಿದ ಅಪರೂಪ ಮತ್ತು ಅಸಾಧಾರಣ ವ್ಯಕ್ತಿ. ರತನ್ ಟಾಟಾ ಅವರು ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರು.
ಅದರಂತೆ ಅವರು ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದರು. ಅಚ್ಚರಿ ಎಂದರೆ ಅವರು ನಿರ್ಮಿಸಿದ ಮೊದಲ ಚಿತ್ರವೇ ಅವರ ಕೊನೆಯ ಚಿತ್ರವೂ ಆಗಿತ್ತು.
ಇಷ್ಟಕ್ಕೂ ಯಾವುದು ಆ ಚಿತ್ರ?
ಉದ್ಯಮಿ ರತನ್ ನಿರ್ಮಿಸಿದ ಮೊದಲ ಮತ್ತು ಏಕೈಕ ಚಿತ್ರ 'ಏತ್‌ಬಾರ್'. ಟಾಟಾ ಇನ್ಫೋಮೀಡಿಯಾದ ಬ್ಯಾನರ್ ಅಡಿಯಲ್ಲಿ, 2004 ರಲ್ಲಿ ಈ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕಾಗಿ ರತನ್ ಟಾಟಾ ದೊಡ್ಡ ಪ್ರಮಾಣದಲ್ಲೇ ಹಣ ಸುರಿದಿದ್ದರು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್, ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ಅವರಂತಹ ದೊಡ್ಡ ತಾರೆಯರು ನಟಿಸಿದ್ದರು. ರೋಮ್ಯಾಂಟಿಕ್-ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ಈ ಚಿತ್ರವನ್ನು ಖ್ಯಾತ ನಿರ್ದೇಶಕ ವಿಕ್ರಮ್ ಭಟ್ ನಿರ್ದೇಶಿಸಿದ್ದರು.
ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದ್ದ ಚಿತ್ರ
ದೊಡ್ಡ ತಾರಾಗಣ, ಸ್ಟಾರ್ ನಿರ್ದೇಶಕ, ಟಾಟಾ ಸಮೂಹದ ಹೂಡಿಕೆಯ ಹೊರತಾಗಿಯೂ ಈ 'ಏತ್‌ಬಾರ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಮಕಾಡೆ ಮಲಗಿತ್ತು. ಅಮಿತಾಬ್ ಬಚ್ಚನ್, ಬಿಪಾಶಾ ಬಸು ಮತ್ತು ಜಾನ್ ಅಬ್ರಹಾಂ ದೊಡ್ಡ ತಾರೆಯರಿದ್ದರೂ ರತನ್ ಟಾಟಾ ನಿರ್ಮಿಸಿದ್ದ ಈ ಚಿತ್ರ ಪ್ರೇಕ್ಷಕರ ಮನ ಸೆಳೆಯಲು ವಿಫಲವಾಗಿ ಭಾರಿ ನಷ್ಟ ಕಂಡಿತ್ತು.
ಸುಮಾರು 10 ಕೋಟಿ ಹೊಡಿಕೆ ಮಾಡಿ ತಯಾರಿಸಿದ್ದ ಚಿತ್ರವು ಭಾರತದಲ್ಲಿ ಒಟ್ಟು ರೂ 4.25 ಕೋಟಿ ಗಳಿಕೆ ಮಾಡಿದೆ ಎಂದು ಕೆಲ ವರದಿಗಳು ಹೇಳಿದ್ದವು. ಆದರೆ ವಿಶ್ವಾದ್ಯಂತ ಏತ್ಬಾರ್ ಕೇವಲ ರೂ 7.96 ಕೋಟಿಗಳಷ್ಟು ಕಲೆಕ್ಷನ್ ಮಾಡಿದೆ ಎಂದು ಬಾಕ್ಸಾಫೀಸ್ ತಜ್ಞರು ಹೇಳಿದ್ದಾರೆ.
ಹೂಡಿದ ಮೊತ್ತವನ್ನು ವಸೂಲಿ ಮಾಡಲು ಸಾಧ್ಯವಾಗದೆ ಹೋದರೂ ಚಿತ್ರ ವಿಮರ್ಶಕರಿಂದ ಶ್ಲಾಘನೆಗೆ ಪಾತ್ರವಾಗಿತ್ತು. ಆದರೆ ಅಂದು ಚಿತ್ರದ ವೈಫಲ್ಯ ಸ್ವತಃ ಬಿಗ್ ಬಿ ಅಮಿತಾಬ್ ಬಚ್ಚನ್ ಗೂ ಆಘಾತ ನೀಡಿತ್ತು. ಈ ಚಿತ್ರದ ಸೋಲಿನ ಬಳಿಕ ರತನ್ ಟಾಟಾ ಇದುವರೆಗೂ ಮತ್ತೊಂದು ಸಿನಿಮಾ ಮಾಡಲಿಲ್ಲ.
Advertisement