
ಮುಂಬೈ: ಕಾಸ್ಟಿಂಗ್ ಕೌಚ್ ಕುರಿತ ಚರ್ಚೆ ಮುಂದುವರೆದಿರುವಂತೆಯೇ ಅಮೀರ್ ಖಾನ್ ನಟನೆಯ ದಂಗಲ್ ಚಿತ್ರದ ನಟಿ ಕೂಡ ದಕ್ಷಿಣ ಭಾರತದಲ್ಲಿ ತಮಗಾದ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಆಮಿರ್ ಖಾನ್ ಅವರ ದಂಗಲ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಫಾತಿಮಾ ಸನಾ ಶೇಖ್, ಇತ್ತೀಚೆಗೆ ದಕ್ಷಿಣ ಚಿತ್ರವೊಂದರಲ್ಲಿನ ತನ್ನ ಕಾಸ್ಟಿಂಗ್ ಕೌಚ್ ಅನುಭವದ ಬಗ್ಗೆ ಮಾತನಾಡಿದ್ದಾರೆ. ಯೂಟ್ಯೂಬ್ ಚಾನೆಲ್ ಜೊತೆ ಮಾತನಾಡಿದ ಫಾತಿಮಾ, ಕಾಸ್ಟಿಂಗ್ ಏಜೆಂಟ್ ಒಬ್ಬರು ಮಾಡಿದ್ದ ಕರೆ ಕುರಿತು ಮಾತನಾಡಿದ್ದು ತಮಗಾದ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.
ಫಾತಿಮಾ ಸನಾ ಶೇಖ್ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸುವ ಆಫರ್ ಬಂದಾಗ ಕಾಸ್ಟಿಂಗ್ ಕೌಚ್ ಅನುಭವ ಎದುರಾಗಿತ್ತು ಎಂದಿದ್ದಾರೆ. 'ಬಾಲಿವುಡ್ನಲ್ಲಿ ಒಂದು ನಂಬಿಕೆ ಇದೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಿದರೆ ಆ ನಂತರ ಬಾಲಿವುಡ್ನಲ್ಲಿ ಒಳ್ಳೆಯ ಸಿನಿಮಾ ಆಫರ್ಗಳು ಸಿಗುತ್ತವೆ ಎಂದು. ಅದೇ ಕಾರಣಕ್ಕೆ ನಾನು ಕೆಲ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುವ ಮನಸ್ಸು ಮಾಡಿದ್ದೆ. ಆದರೆ ಅಲ್ಲಿ ನನಗೆ ಒಳ್ಳೆ ಅನುಭವ ಆಗಿಲ್ಲ ' ಎಂದು ಹೇಳಿದ್ದಾರೆ.
ಹೈದರಾಬಾದ್ ಆಡಿಷನ್ ವೇಳೆ ಘಟನೆ
ಹೈದರಾಬಾದ್ನಲ್ಲಿ ಸಿನಿಮಾದ ಆಡಿಷನ್ ಒಂದು ನಡೆಯಲಿದೆ ಅದಕ್ಕಾಗಿ ಪ್ರೊಫೈಲ್ ಕಳಿಸಿ ಎಂದು ನನಗೆ ಆಪ್ತರೊಬ್ಬರು ಹೇಳಿದರು. ಅಂತೆಯೇ ನಾನು ನನ್ನ ಫೋಟೊಗಳನ್ನು ಕಳಿಸಿದ್ದೆ. ಆ ನಂತರ ಕರೆ ಮಾಡಿದ ವ್ಯಕ್ತಿಯೊಬ್ಬ ‘ಈ ಪಾತ್ರಕ್ಕಾಗಿ ನೀವು ಏನು ಬೇಕಾದರೂ ಮಾಡಲು ತಯಾರಿದ್ದೀರಾ?’ ಎಂದು ಕೇಳಿದ. ಆತನ ಉದ್ದೇಶ ನನಗೆ ಅರ್ಥವಾಯ್ತು, ಆದರೂ ನಾನು ಅದೇನೂ ಅರ್ಥವಾಗಿಲ್ಲವೇನೋ ಎಂಬಂತೆ ‘ಈ ಪಾತ್ರಕ್ಕಾಗಿ ನಾನು ಸಾಕಷ್ಟು ಶ್ರಮ ಹಾಕುತ್ತೇನೆ.
ಪಾತ್ರದ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡುತ್ತೇನೆ’ ಎಂದೆ. ಆದರೆ ಆತ ಪದೇ ಪದೇ ‘ಏನು ಬೇಕಾದರೂ ಮಾಡಲು ತಯಾರಿದ್ದೀರಾ'? ಎಂದು ಕೇಳುತ್ತಲೇ ಇದ್ದ. ನಾನೂ ಸಹ ಆತನ ಉದ್ದೇಶ ಅರ್ಥವಾಗದ ರೀತಿಯಲ್ಲಿಯೇ ಉತ್ತರಿಸುತ್ತಿದ್ದ. ಆತ ಬಾಯಿಬಿಟ್ಟು ನೇರವಾಗಿ ಕೇಳಲಿ ಎಂಬುದು ನನ್ನ ಉದ್ದೇಶವಾಗಿತ್ತು. ಆದರೆ ಕೊನೆಗೆ ಆತ ಇರಿಟೇಟ್ ಆಗಿ ಫೋನ್ ಕಟ್ ಮಾಡಿದ’ ಎಂದು ನಟಿ ಹೇಳಿದ್ದಾರೆ.
ಪಾರ್ಟಿಯಲ್ಲೂ ಕರಾಳ ಅನುಭವ
ಅದಾದ ಬಳಿಕ ಹೈದರಾಬಾದ್ನಲ್ಲಿ ನಡೆದ ಸಿನಿಮಾ ಪಾರ್ಟಿಯಲ್ಲಿ ಫಾತಿಮಾ ಭಾಗವಹಿಸಿದ್ದರಂತೆ. ಅಲ್ಲಿ ಸಾಕಷ್ಟು ಮಂದಿ ತೆಲುಗು ಸಿನಿಮಾದ ಸಣ್ಣ ಮತ್ತು ಮಧ್ಯಮ ನಿರ್ಮಾಪಕರು ಇದ್ದರಂತೆ. ಅಲ್ಲಿ ಅವರು ನೇರವಾಗಿಯೇ ತಮ್ಮೊಂದಿಗೆ ‘ಸಹಕರಿಸುವಂತೆ’ ಕೇಳುತ್ತಿದ್ದರು. ಇದು ನನಗೆ ಆಘಾತ ತಂದಿತು’ ಎಂದು ಹೇಳಿದ್ದಾರೆ.
ಅಂದಹಾಗೆ ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ತೆಲುಗಿನ "ನುವ್ವು ನೇನು ಒಕಟೌದಾಮ್' (ನೀನು ನಾನು ಒಂದಾಗೋಣ)ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಅಷ್ಟೇನೂ ಒಳ್ಳೆಯ ಪ್ರದರ್ಶನ ಕಾಣಲಿಲ್ಲ. ಆ ನಂತರ ಫಾತಿಮಾ ಯಾವುದೇ ತೆಲುಗು ಸಿನಿಮಾದಲ್ಲಿ ನಟಿಸಲಿಲ್ಲ. ಇದೀಗ ಫಾತಿಮಾ ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
Advertisement