

ಮುಂಬೈ: ‘ಧುರಂಧರ್’ ಚಿತ್ರದ ನಟಿ ಆಯೇಷಾ ಖಾನ್ ಅವರು ವಿದ್ಯಾರ್ಥಿ ಪ್ರತಿಭಟನೆ ವೇಳೆ ತಮ್ಮನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಜುಲೈ 22ರಂದು ನಡೆದ ಪ್ರತಿಭಟನೆ ವೇಳೆ ತಾವು ಕೇವಲ ರಸ್ತೆ ಬದಿಯಲ್ಲಿ ಶಾಂತಿಯುತವಾಗಿ ನಿಂತಿದ್ದರೂ ಯಾವುದೇ ಕಾರಣ ತಿಳಿಸದೇ ಪೊಲೀಸ್ ವಾಹನಕ್ಕೆ ಕೂರಿಸಿ ಕರೆದೊಯ್ದರು ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ನನ್ನ ಕೈಗಳು ನಡುಗುತ್ತಿವೆ. ನಾನು ಕೇವಲ ರಸ್ತೆ ಬದಿಯಲ್ಲಿ ನಿಂತಿದ್ದಕ್ಕೆ ನನ್ನನ್ನು ಪೊಲೀಸ್ ವಾಹನದಲ್ಲಿ ವಶಕ್ಕೆ ಪಡೆದಿದ್ದಾರೆ. ನಾನು ಯಾವುದೇ ಘೋಷಣೆ ಕೂಗಿಲ್ಲ, ಪ್ರತಿಭಟನೆ ಆರಂಭಿಸಿಲ್ಲ. ನನ್ನ ಸಹೋದರ ಮತ್ತು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ ನಾನು ಅಲ್ಲೇ ನಿಂತಿದ್ದೆ ಎಂದು ಹೇಳಿದ್ದಾರೆ.
ಬಳಿಕ ಕ್ಯಾಮೆರಾವನ್ನು ತಿರುಗಿಸಿ ವಾಹನದೊಳಗೆ ಇದ್ದ ಇತರರನ್ನು ತೋರಿಸಿದ ಅವರು, "ಇಲ್ಲಿ ಹಲವರನ್ನು ಯಾವುದೇ ಸ್ಪಷ್ಟನೆ ನೀಡದೆ ಕರೆತಂದಿದ್ದಾರೆ. ಯಾರೂ ನಮಗೆ ಉತ್ತರ ನೀಡುತ್ತಿಲ್ಲ. ನಾನು ಏನನ್ನೂ ಮಾತನಾಡಿರಲಿಲ್ಲ. ಕೇವಲ ರಸ್ತೆಯಲ್ಲಿ ನಿಂತಿದ್ದಕ್ಕೆ ನಾಲ್ಕೈದು ಮಹಿಳಾ ಪೊಲೀಸರು ನನ್ನನ್ನು ಎಳೆದಾಡಿ ವಾಹನಕ್ಕೆ ಹತ್ತಿಸಿದರು" ಎಂದು ಆರೋಪಿಸಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಪೊಲೀಸ್ ಅಧಿಕಾರಿಗಳ ಚಿತ್ರಗಳನ್ನು ಹಂಚಿಕೊಂಡಿರುವ ಆಯೇಷಾ, "#AccountabilityWhere?" ಎಂಬ ಹ್ಯಾಶ್‌ಟ್ಯಾಗ್ ಬಳಸಿ, "ಶಾಂತಿಯುತವಾಗಿ ನಿಂತಿದ್ದಕ್ಕೆ ನನ್ನನ್ನು ವಶಕ್ಕೆ ಪಡೆದಿದ್ದಾರೆ" ಎಂದು ಬರೆದುಕೊಂಡಿದ್ದಾರೆ.
ಇನ್ನೊಂದು ವಿಡಿಯೊದಲ್ಲಿ ಪೊಲೀಸರು ತಮ್ಮನ್ನು ಎಳೆದು ಪೊಲೀಸ್ ವಾಹನಕ್ಕೆ ಹತ್ತಿಸುತ್ತಿರುವ ದೃಶ್ಯಗಳಿದ್ದು, "ನನ್ನನ್ನು ವಾಹನಕ್ಕೆ ಹತ್ತಿಸಲು ನಾಲ್ವರು ಮಹಿಳಾ ಪೊಲೀಸರ ಅಗತ್ಯವಾಯಿತೇ? ನಾನು ಗದ್ದಲ ಮಾಡಿದ್ದೇನಾ? ಯಾರೊಂದಿಗೂ ವಾಗ್ವಾದ ನಡೆಸಿದ್ದೇನಾ? ಐದು ಜನರ ಗುಂಪಿನಲ್ಲೂ ನಾನು ಇರಲಿಲ್ಲ. ಹಾಗಿದ್ದರೂ ನನ್ನನ್ನು ಏಕೆ ವಶಕ್ಕೆ ಪಡೆದರು?" ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದ ವಿದ್ಯಾರ್ಥಿ ಪ್ರತಿಭಟನೆಗೆ ಆಯೇಷಾ ಖಾನ್ ಬೆಂಬಲ ಸೂಚಿಸಿದ್ದರು.
ಈ ಹೋರಾಟದ ಬಗ್ಗೆ ಮಾಧ್ಯಮಗಳು ಮತ್ತು ಪಾಪರಾಜಿ ಖಾತೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದ ಅವರು, "ಗ್ಲಾಮರ್, ಸೌಂದರ್ಯ ಮತ್ತು ವಿವಾದಗಳ ನಡುವೆ ನಾವು ನಿಜವಾಗಿಯೂ ಗಮನ ಹರಿಸಬೇಕಾದ ವಿಷಯಗಳನ್ನು ಕಡೆಗಣಿಸುತ್ತಿದ್ದೇವೆ. ಈ ಪ್ರತಿಭಟನೆಯ ಬಗ್ಗೆ ನನಗೂ ತಡವಾಗಿ ಗೊತ್ತಾಯಿತು" ಎಂದು ಹೇಳಿದ್ದರು.
ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಆಯೇಷಾ ಖಾನ್ ಆರೋಪಿಸಿದ್ದು, ಈ ಬಗ್ಗೆ ಮುಂಬೈ ಪೊಲೀಸರು ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.