

ಮುಂಬೈ: ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಇತ್ತೀಚೆಗೆ ತಮಗಾದ ವಿಚಿತ್ರ ಹಾಗೂ ಆತಂಕಕಾರಿ ಅನುಭವವನ್ನು ಹಂಚಿಕೊಂಡಿದ್ದು ತಮ್ಮ ಮನೆಯಲ್ಲೇ ತಮಗೆ ನಕಾರಾತ್ಮಕ ಶಕ್ತಿಗಳ ಅನುಭವವಾಗಿತ್ತು ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಕರಣ್ ಜೋಹರ್ ಅವರ 'ಕಾಫಿ ವಿತ್ ಕರಣ್' ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ತಮ್ಮ ಹಳೆಯ ಅನುಭವಗಳನ್ನು ನೆನಪಿಸಿಕೊಂಡಿದ್ದು, ಮುಂಬೈನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮನೆಯಲ್ಲಿನ ಬೆಡ್ರೂಮ್ನಲ್ಲಿ ನಿಗೂಢ ಅನುಭವಗಳು ಆಗುತ್ತಿದ್ದವು ಎಂದು ಹೇಳಿದ್ದಾರೆ.
1998ರಲ್ಲಿ 'ಕುಚ್ ಕುಚ್ ಹೋತಾ ಹೈ' ಚಿತ್ರದ ಕಥೆ ಹೇಳಲು ಸಲ್ಮಾನ್ ಮನೆಗೆ ಹೋಗಿದ್ದ ಘಟನೆಯನ್ನು ಕರಣ್ ನೆನಪಿಸಿಕೊಂಡಾಗ ಸಲ್ಮಾನ್ ಖಾನ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಲೈಟ್ ಆನ್-ಆಫ್, ತಾನಾಗಿಯೇ ತೆರೆಯುತ್ತಿದ್ದ ಕಪಾಟು!
ಆ ಸಂದರ್ಭದಲ್ಲಿ ಸಲ್ಮಾನ್ ಅವರ ಕೋಣೆ ತುಂಬಾ ಚಿಕ್ಕದಾಗಿತ್ತು. ಅದರಲ್ಲಿ ಒಂದು ಹಾಸಿಗೆ ಮತ್ತು ಕಪಾಟು ಮಾತ್ರ ಇದ್ದುದನ್ನು ಕಂಡು ತಮಗೆ ಆಶ್ಚರ್ಯವಾಗಿತ್ತು ಎಂದು ಕರಣ್ ಹೇಳಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಲ್ಮಾನ್, ಆ ಕೋಣೆಯಲ್ಲಿ ತಮಗೆ ಕೆಲವೊಮ್ಮೆ ಯಾರೋ ಇದ್ದಂತೆ ಭಾಸವಾಗುತ್ತಿತ್ತು. ಆದರೆ, ಆ ನಿಗೂಢ ಉಪಸ್ಥಿತಿಯನ್ನು ತಾವು ಎಂದಿಗೂ ಕಣ್ಣಾರೆ ನೋಡಿರಲಿಲ್ಲ ಎಂದಿದ್ದಾರೆ.
ಕೋಣೆಯಲ್ಲಿನ ಲೈಟ್ಗಳು ತಾವಾಗಿಯೇ ಆನ್ ಮತ್ತು ಆಫ್ ಆಗುತ್ತಿದ್ದವು. ಕಪಾಟುಗಳು ತಾನಾಗಿಯೇ ತೆರೆಯುತ್ತಿದ್ದವು. ಕೆಲವೊಮ್ಮೆ ಮ್ಯೂಸಿಕ್ ಸಿಸ್ಟಮ್ ಕೂಡ ಯಾರೂ ಚಾಲನೆ ಮಾಡದಿದ್ದರೂ ಸ್ವತಃ ಆನ್ ಆಗಿ ಹಾಡುಗಳನ್ನು ಪ್ಲೇ ಮಾಡುತ್ತಿತ್ತು ಎಂದು ಅವರು ವಿವರಿಸಿದ್ದಾರೆ.
ಬಾತ್ರೂಮ್ ಹೊರಗೆ ಯಾರೋ ಓಡಾಡಿದಂತೆ ಹಾಗೂ ಕಪಾಟನ್ನು ತೆರೆಯುತ್ತಿರುವಂತೆ ಅನುಭವವಾಗುತ್ತಿತ್ತು ಎಂದೂ ಸಲ್ಮಾನ್ ಖಾನ್ ನೆನಪಿಸಿಕೊಂಡಿದ್ದಾರೆ.
'ನನಗೆ ಅಷ್ಟೊಂದು ಭಯವಾಗುತ್ತಿರಲಿಲ್ಲ!'
ಆ ಕೋಣೆಯಲ್ಲಿ ತಮಗೆ ನಿಗೂಢ ಉಪಸ್ಥಿತಿಯ ಅನುಭವವಾಗುತ್ತಿದ್ದರೂ, ಅದನ್ನು ದೆವ್ವವೆಂದೇ ತಾವು ನಿರ್ಧರಿಸಿರಲಿಲ್ಲ ಎಂದು ಸಲ್ಮಾನ್ ಹೇಳಿದ್ದಾರೆ. ಆ ಅನುಭವದಿಂದ ತಮಗೆ ವಿಶೇಷ ಭಯವೂ ಆಗುತ್ತಿರಲಿಲ್ಲವಂತೆ. ತಮ್ಮನ್ನು ಆ ನಿಗೂಢ ಉಪಸ್ಥಿತಿ ಎಂದಿಗೂ ಹಾನಿಗೊಳಿಸಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೋಣೆಯಿಂದ ಹೊರಗೆ ಹೋಗುವಾಗ ಮ್ಯೂಸಿಕ್ ಸಿಸ್ಟಮ್ ಆನ್ ಮಾಡಿ ಹೋಗುತ್ತಿದ್ದುದನ್ನೂ ಸಲ್ಮಾನ್ ನೆನಪಿಸಿಕೊಂಡಿದ್ದಾರೆ. ಅಲ್ಲದೆ, ಆ ನಿಗೂಢ ಉಪಸ್ಥಿತಿ ಸುಂದರ ಮಹಿಳೆಯಾಗಿದ್ದರೆ ತನ್ನ ಮುಂದೆ ಪ್ರತ್ಯಕ್ಷವಾಗಲಿ ಎಂಬರ್ಥದಲ್ಲಿ ತಮಾಷೆಯಾಗಿ ಮಾತನಾಡಿ, ಕಾರ್ಯಕ್ರಮದಲ್ಲಿ ನಗುವಿನ ವಾತಾವರಣ ಸೃಷ್ಟಿಸಿದರು.