

ಚೆನ್ನೈ: ನಟಿ ಕತ್ರೀನಾ ಕೈಫ್ (Katrina Kaif) ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಬಳಿಕ ಅವರ ದೇಹದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದ್ದು ಇದೀಗ ನಟಿ ಪರ ಹಿರಿಯ ನಟಿ ಖುಷ್ಬೂ ಬ್ಯಾಟ್ ಬೀಸಿದ್ದಾರೆ.
ಹೆರಿಗೆಯ ಬಳಿಕದ ದೇಹದ ಬದಲಾವಣೆಯನ್ನು ಮುಂದಿಟ್ಟುಕೊಂಡು ಕೆಲವರು ನಟಿ ಕತ್ರೀನಾರನ್ನು ಬಾಡಿ ಶೇಮಿಂಗ್‌ಗೆ ಗುರಿಪಡಿಸಿದ್ದು, ಅಭಿಮಾನಿಗಳು ಹಾಗೂ ಹಲವು ಸೆಲೆಬ್ರಿಟಿಗಳು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಕತ್ರೀನಾ ಕೈಫ್ ಅವರು ಪತಿ ವಿಕ್ಕಿ ಕೌಶಲ್ ಅವರೊಂದಿಗೆ ಅಂಬಾನಿ ಕುಟುಂಬ ಆಯೋಜಿಸಿದ್ದ ಗಣಪತಿ ಸಂಭ್ರಮದಲ್ಲಿ ಅಪರೂಪವಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.
ಕಾರ್ಯಕ್ರಮದ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಇದರ ಬೆನ್ನಲ್ಲೇ ಕತ್ರೀನಾ ಅವರ ಹೆರಿಗೆಯ ನಂತರದ ದೇಹದ ಬದಲಾವಣೆಯ ಕುರಿತು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ಬಾಡಿ ಶೇಮಿಂಗ್ ಮಾಡಿದ್ದರು.
ಇದೀಗ ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ ಅವರು ಕತ್ರೀನಾ ಕೈಫ್ ಪರ ನಿಂತಿದ್ದು, ಮಹಿಳೆಯರ ದೇಹ ಮತ್ತು ವಯಸ್ಸಿನ ವಿಚಾರದಲ್ಲಿ ಸಮಾಜ ಅನುಸರಿಸುವ ದ್ವಂದ್ವ ಮಾನದಂಡಗಳ ಬಗ್ಗೆ ಪ್ರಶ್ನಿಸಿದ್ದಾರೆ.
‘ಮಹಿಳೆಯ ದೇಹವೇನು ಸಾರ್ವಜನಿಕ ಜಾಹಿರಾತು ಫಲಕವೇ?’
ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಖುಷ್ಬೂ, ಮಹಿಳೆಯರ ಸೌಂದರ್ಯ, ವಯಸ್ಸು ಹಾಗೂ ದೇಹದ ಬದಲಾವಣೆಗಳ ಬಗ್ಗೆ ಸಮಾಜದ ದೃಷ್ಟಿಕೋನವನ್ನು ಪ್ರಶ್ನಿಸಿದ್ದಾರೆ.
ಕತ್ರೀನಾ ಕೈಫ್ ಅವರ ಹಿಂದಿನ ಹಾಗೂ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿರುವ ಅವರು, ಮಹಿಳೆಯ ವಯಸ್ಸನ್ನು ಯಾವಾಗಲೂ ಸಾರ್ವಜನಿಕ ಚರ್ಚೆಯ ವಿಷಯವನ್ನಾಗಿ ಮಾಡಲಾಗುತ್ತದೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯೊಬ್ಬಳು ನಿರ್ದಿಷ್ಟ ವಯಸ್ಸು ದಾಟಿದ ಕೂಡಲೇ, ‘ಆಕೆ ಇನ್ನೂ ತನ್ನ ಸೌಂದರ್ಯದ ಉತ್ತುಂಗದಲ್ಲಿದ್ದಾಳೆಯೇ?’, ‘ತನ್ನನ್ನು ಹಾಗೆಯೇ ಕಾಪಾಡಿಕೊಂಡಿದ್ದಾಳೆಯೇ?’, ‘ಆಕೆ ಏಕೆ ಬದಲಾಗಿದ್ದಾಳೆ?’, ‘ವಯಸ್ಸಾಗಿದೆಯೇ?’ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಆದರೆ ಇದೇ ರೀತಿಯ ಪ್ರಶ್ನೆಗಳು ಪುರುಷರ ವಿಚಾರದಲ್ಲಿ ಏಕೆ ಕೇಳಿಬರುವುದಿಲ್ಲ ಎಂದು ಖುಷ್ಬೂ ಪ್ರಶ್ನಿಸಿದ್ದಾರೆ.
ಪುರುಷನಿಗೆ ಕೂದಲು ಉದುರಿದರೆ ಆತನನ್ನು ‘ಗಂಭೀರ ವ್ಯಕ್ತಿತ್ವದವನು’ ಎಂದು ಕರೆಯಲಾಗುತ್ತದೆ. ಹೊಟ್ಟೆ ಬೆಳೆದರೂ ಆತನ ‘ಪ್ರೈಮ್’ ಬಗ್ಗೆ ಯಾರೂ ಪ್ರಶ್ನಿಸುವುದಿಲ್ಲ. ಕೂದಲು ಬೆಳ್ಳಗಾದರೆ ‘ಮೆಚ್ಯೂರ್’, ‘ಚಾರ್ಮಿಂಗ್’ ಎಂದು ಹೊಗಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಿಮಗೆ ಯಾರು ಕೊಟ್ಟಿದ್ದು ಅಧಿಕಾರ?
ಪುರುಷರಿಗೆ ವಯಸ್ಸಾಗುವುದನ್ನು ಅನುಭವದ ಸಂಕೇತವಾಗಿ ನೋಡಲಾಗುತ್ತದೆ. ಆದರೆ ಮಹಿಳೆಯರ ಪ್ರತಿಯೊಂದು ಸುಕ್ಕು, ತೂಕದ ಬದಲಾವಣೆ, ಬಿಳಿ ಕೂದಲು ಸೇರಿದಂತೆ ದೇಹದಲ್ಲಾಗುವ ಸಣ್ಣ ಬದಲಾವಣೆಗಳನ್ನೂ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಎಂದು ಖುಷ್ಬೂ ಹೇಳಿದ್ದಾರೆ.
ಮಹಿಳೆಯೊಬ್ಬಳಿಗೆ ‘ಪ್ರೈಮ್’ ಎಂಬ ಹಂತವನ್ನು ಯಾರು ನಿಗದಿಪಡಿಸಿದರು? ಆ ಹಂತ ಮುಗಿದಿದೆ ಎಂದು ನಿರ್ಧರಿಸುವ ಅಧಿಕಾರವನ್ನು ಸಮಾಜಕ್ಕೆ ಕೊಟ್ಟವರು ಯಾರು? ಸುಂದರವಾಗಿ ಕಾಣಿಸಿಕೊಂಡ ವಯಸ್ಸಿನಲ್ಲೇ ಮಹಿಳೆಯರು ಸದಾ ಹಾಗೆಯೇ ಇರಬೇಕೆಂಬ ನಿರೀಕ್ಷೆ ಏಕೆ? ಎಂದು ಅವರು ಪ್ರಶ್ನಿಸಿದ್ದಾರೆ.
‘ಮಗುವಿಗೆ ಜನ್ಮ ನೀಡುವಾಗ ಮಹಿಳೆ ಹೊಸ ಜನ್ಮ ಪಡೆಯುತ್ತಾಳೆ’
ಮಹಿಳೆಯೊಬ್ಬಳು ಮಗುವಿಗೆ ಜನ್ಮ ನೀಡಿದಾಗ, ಆಕೆಯ ಜೀವನದಲ್ಲಿ ಮತ್ತೊಂದು ರೀತಿಯ ಪುನರ್ಜನ್ಮವಾಗುತ್ತದೆ. ಹಾರ್ಮೋನ್, ದೈಹಿಕ, ಭಾವನಾತ್ಮಕ ಹಾಗೂ ಮಾನಸಿಕ ಬದಲಾವಣೆಗಳು ಅಪಾರವಾಗಿರುತ್ತವೆ. ಆಕೆಯ ದೇಹ ಮತ್ತೊಂದು ಜೀವವನ್ನು ಹೊತ್ತು, ಪೋಷಿಸಿ, ಈ ಜಗತ್ತಿಗೆ ತಂದಿರುತ್ತದೆ. ಆದರೆ ಆಕೆ ಅನುಭವಿಸಿದ ಈ ಎಲ್ಲ ಬದಲಾವಣೆಗಳನ್ನು ಸಂಭ್ರಮಿಸುವ ಬದಲು, ಹೆರಿಗೆಯ ಬಳಿಕ ಆಕೆ ಹೇಗೆ ಕಾಣುತ್ತಿದ್ದಾಳೆ ಎಂಬುದನ್ನೇ ಸಮಾಜ ಗಮನಿಸುತ್ತದೆ ಎಂದು ಖುಷ್ಬೂ ಹೇಳಿದ್ದಾರೆ.
‘ಕತ್ರೀನಾ ಕೈಫ್ ಆಗಿದ್ದರೂ, ಈಗಲೂ, ಮುಂದೆಯೂ ಸುಂದರವಾಗಿಯೇ ಇರುತ್ತಾರೆ. ಮಾತೃತ್ವದ ಬಳಿಕ ತಾನೂ ದೇಹದಲ್ಲಿ ಬದಲಾವಣೆಗಳನ್ನು ಅನುಭವಿಸಿರುವುದರಿಂದ ಕತ್ರೀನಾ ಅವರ ಪರಿಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಬಲ್ಲೆ ಎಂದು ಖುಷ್ಬೂ ಹೇಳಿದ್ದಾರೆ.
ತನ್ನನ್ನೂ ಗೇಲಿ ಮಾಡಲಾಗಿತ್ತು
ಇದೇ ವೇಳೆ ತಾನು ದೇಹದ ತೂಕ ಹೆಚ್ಚಿಸಿಕೊಂಡಿದ್ದ ಸಂದರ್ಭದಲ್ಲಿ ತನ್ನನ್ನು ಗೇಲಿ ಮಾಡಲಾಗಿತ್ತು ಎಂದು ಹೇಳಿದ ನಟಿ ಖುಷ್ಬೂ, ಮಹಿಳೆಯರನ್ನು ‘ಬೊಜ್ಜು ಮತ್ತು ಕುರೂಪಿ’ ಎಂದು ಬಿಂಬಿಸುವ ಸಂದರ್ಭಗಳಲ್ಲೂ ತನ್ನನ್ನು ಬಳಸಿಕೊಳ್ಳಲಾಗಿತ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಈಗ ತೂಕ ಇಳಿಸಿಕೊಂಡ ಬಳಿಕವೂ ತಾನು ಇಂಜೆಕ್ಷನ್‌ಗಳನ್ನು ತೆಗೆದುಕೊಂಡಿದ್ದೇನೆ ಎಂಬ ಮಾತುಗಳು ಕೇಳಿಬರುತ್ತಿವೆ. ‘ನನ್ನ ಇಂಜೆಕ್ಷನ್‌ಗಳಿಗೆ ಹಣ ಕೊಟ್ಟವರು ಸಮಾಜದಲ್ಲಿರುವ ಈ ಜನರಲ್ಲಿ ಎಷ್ಟು ಮಂದಿ?’ ಎಂದು ಖುಷ್ಬೂ ಪ್ರಶ್ನಿಸಿದ್ದಾರೆ.
ಕೊನೆಯಲ್ಲಿ ಕತ್ರೀನಾ ಅವರನ್ನು ಶ್ಲಾಘಿಸಿರುವ ಖುಷ್ಬೂ, ‘ಕತ್ರೀನಾ, ನೀವು ಯಾವಾಗಲೂ ನಿಮ್ಮದೇ ನಿಯಮಗಳಂತೆ, ಘನತೆ, ಸೌಜನ್ಯ ಮತ್ತು ಸ್ವಾಭಿಮಾನದಿಂದ ಬದುಕಿದ್ದೀರಿ. ಮುಂದೆಯೂ ಹಾಗೆಯೇ ಮುಂದುವರಿಯಿರಿ’ ಎಂದು ಸಲಹೆ ನೀಡಿದರು.
ಅಂದಹಾಗೆ ಕತ್ರೀನಾ ಕೈಫ್ ಮತ್ತು ವಿಕ್ಕಿ ಕೌಶಲ್ ಅವರು 2025ರ ನವೆಂಬರ್‌ನಲ್ಲಿ ತಮ್ಮ ಮೊದಲ ಮಗುವಾದ ವಿಹಾನ್ ಕೌಶಲ್ ಅವರನ್ನು ಸ್ವಾಗತಿಸಿದ್ದರು.