ಮುಸ್ಸಂಜೆ ಶೀರ್ಷಿಕೆ ಪ್ರಸಂಗ

ಮಸ್ತ್ ಮಜಾ ಮಾಡಿ ಥರದ ಮಲ್ಟಿಸ್ಟಾರ್ ಸಿನಿಮಾಗಳಲ್ಲಿ ಗೆಲುವು ಕಂಡರೂ, ಸೋಲೋ ಹೀರೋ ಆಗಿ ಸೋಲೇ ಕಂಡಿದ್ದ ನಾಗಕಿರಣ್, ಈಗ ಸೋಲೋ ಹೀರೋ ಆಗಿ ಗೆಲ್ಲಲೇಬೇಕೆಂದು ಮತ್ತೆ ಬಂದಿದ್ದಾರೆ, ಅವರ ಹೊಸ ಟೈಟಲ್ಲಿನ ಹಳೆಯ ಚಿತ್ರದ ಮೂಲಕ.
ಹಳೇ ಟೈಟಲ್: ಲಹರಿ
ಹೊಸಾ ಟೈಟಲ್: ಕದ್ದಳು ಮನಸನ್ನಾ
'ಮುಸ್ಸಂಜೆ ಮಾತು' ಚಿತ್ರದ ಹಾಡಿನ ಮೊದಲ ಸಾಲಿನ ಈ ತುಣುಕನ್ನು ಟೈಟಲ್ ಮಾಡುವಂತೆ ಸಲಹೆ ನೀಡಿದ್ದು ಗಾಂಧಿನಗರದ ಜ್ಯೋತಿಷಿಗಳು. ಲಹರಿ ಟೈಟಲ್ ಬದಲಾಗಲು ಲಹರಿ ವೇಲು ಕಾರಣ ಎಂಬುದು ಶುದ್ಧ ತರಲೆಯಂತೆ. ನಿಜ ಏನಂದ್ರೆ, ಚಿತ್ರಕ್ಕೆ ಹಲವು ವಿಘ್ನಗಳು ಬಾಧಿಸಲೂ ಲಹರಿ ಎಂಬ ಶೀರ್ಷಿಕೆಯೇ ಕಾರಣವೆಂದೂ, ಲಹರಿ ಎಂಬ ಶೀರ್ಷಿಕೆ ಕ್ಯಾಚಿ ಆಗಿಲ್ಲವೆಂದೂ, ಈ ಜ್ಯೋತಿಷಿಗಳು ಭವಿಷ್ಯ ನುಡಿದ ಕಾರಣ ಹೊಸ ಶೀರ್ಷಿಕೆಯನ್ನು ಕ್ಯಾಚ್ ಹಾಕಿಕೊಳ್ಳಲಾಗಿದೆಯಂತೆ. ಚಿತ್ರ ಶುರುಮಾಡಿ ಅರ್ಧ ಪೂರೈಸುವ ಹೊತ್ತಿಗೆ ಆರ್ಥಿಕವಾಗಿ ಹೈರಾಣಾಗಿದ್ದ ನಿರ್ಮಾಪಕ ಗಿರೀಶ್ಗೆ ಮಾನಸಿಕವಾಗಿಯೂ, ಆರ್ಥಿಕವಾಗಿಯೂ, ಧೈರ್ಯ ತುಂಬಿದ್ದು ಚಾರ್ಮಿನಾಖ ಚಂದ್ರು ಮತ್ತು ವಿತರಕ ತಿಮ್ಮೇಗೌಡ. ಅವರಿಂದಾಗಿಯೇ ಪ್ಯಾಚ್ ಶೂಟ್ ಮತ್ತು ಕ್ಲೈಮಾಕ್ಸಿನ ಸ್ವಲ್ಪ ಭಾಗಗಳನ್ನು ಹೊರತು ಪಡಿಸಿದರೆ ಸಿನಿಮಾ ಸಂಪೂರ್ಣವಾಗಿದೆಯಂತೆ. ಚಿತ್ರವನ್ನು ವೀಕ್ಷಿಸಿದ ಚಂದ್ರು ಮತ್ತು ತಿಮ್ಮೇಗೌಡರು ಲಹರಿಗೆ ಬದಲಿ ಟೈಟಲ್ ಸೂಚಿಸಿದರಂತೆ.
ಕಥೆಯ ಬಗೆಗಿನ ಗೌಪ್ಯ ಕಾಯ್ದುಕೊಂಡ ನಿರ್ದೇಶಕ ಸೂರ್ಯ, ತಮ್ಮ ಚೊಚ್ಚಲ ಪ್ರಯತ್ನಕ್ಕೆ ಬೆಂಬಲ ಕೋರಿದರು. ದಯಾಳ್ ಮತ್ತು ಸಾಧುಕೋಕಿಲಾ ಅವರಿಗೆ ಅಸೋಸಿಯೇಟ್ ಆಗಿ ಅನುಭವ ಪಡೆದಿರುವ ಸೂರ್ಯ ತಮಿಳು ಮೂಲದವರಾದರೂ ಅಚ್ಚುಕಟ್ಟಾದ ಕನ್ನಡ ಮಾತನಾಡಿದರು. 'ಕದ್ದಳು ಮನಸನ್ನಾ' ತಮ್ಮದೇ ಕತೆ-ಚಿತ್ರಕತೆ-ಸಂಭಾಷಣೆ ಹೊಂದಿದೆ ಎಂದ ಅವರನ್ನು, ಚಿತ್ರಕ್ಕೆ ಬೇರೆಭಾಷೆಯ ಚಿತ್ರದ ಸ್ಪೂರ್ತಿ ಇದೆಯೇ ಅಂತ ಕೇಳಿದಾಗ, ಖಡಾಖಂಡಿತವಾಗಿ ಸ್ಪಷ್ಟೀಕರಿಸಿ, 'ಕದ್ದನು ಕತೆಯನ್ನಾ' ಅನ್ನೋ ಹಾಗೇ ಇಲ್ಲ ಸಾರ್. ಇದು ಸ್ವಂತ ಕಥೆ. ಮೂಲತಃ ನಾನೊಬ್ಬ ಬರಹಗಾರ ಎಂದರು. ರಿಯಲ್ ಎಸ್ಟೇಟ್ ಬಿಸಿನೆಸ್ ಮಾಡೋ ಹೀರೋಗೆ ಡಾಕ್ಟರಿಕೆ ಮಾಡೋ ಹೀರೋಯಿನ್ ಜೊತೆ ಲವ್ ಆಗೋದ್ರಿಂದ ಇದು 'ಸೈಂಟಿಫಿಕ್ ಲವ್ ಸ್ಟೋರಿ' ಅಂತ ಈ ನಿರ್ಮಾಪಕರು ಹೇಳಿದರು. ಹಾಗಾಗಿ ಹೀರೋ ಹೀರೋಯಿನ್ ಕೆಮಿಸ್ಟ್ರಿ ಬಗ್ಗೆ ಯಾರೂ ಕೆಮ್ಮಂಗಿಲ್ವಂತೆ.
ಡಾರ್ಲಿಂಗ್ ಚಿತ್ರದ ಭಾನು(ಮುಕ್ತಾ) ನಾಯಕಿಯ ಪಾತ್ರದಲ್ಲಿದ್ದು, ಸೆಲ್ವ ಛಾಯಾಗ್ರಹಣ, ರವಿರಾಜ್ ಸಂಗೀತ ಚಿತ್ರಕ್ಕಿದೆ. ಎಲ್ಲವೂ ಅಂದುಕೊಂಡಂತಾದರೆ ಹೊಸವರ್ಷಕ್ಕೆ 'ಕದ್ದಳು ಮನಸ್ಸನ್ನಾ' ಅಂತ ತೆರೆಮೇಲೆ ಬಂದು 'ಗೆದ್ದಳು ಮನಸನ್ನಾ' ಅನ್ನಿಸಿಕೊಳ್ಳುವ ಇರಾದೆಯಿದೆಯಂತೆ.
- ನವೀನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


