ಸಿನಿಮಾ ಲೇಖನ

ನಾನು ಭಟ್ಟರ ಕ್ಯಾಂಪಿಗೆ ಸೇರಿದವನಲ್ಲ

ನಾನು ಭಟ್ಟರ ಕ್ಯಾಂಪಿಗೆ ಸೇರಿದವನಲ್ಲ
Published On :

ಇದು ಬೇಸರದ ಸಂಗತಿ. ಕನ್ನಡ ಚಿತ್ರರಂಗದ ದಿಗ್ಗಜ ನಿರ್ದೇಶಕರ ನಡುವೆ ಎಲ್ಲವೂ ಸರಿ ಇಲ್ಲ. ಸೂರಿ 'ಟಾಕಿ'ಸ್ ಯೋಗರಾಜ್‌ಭಟ್ 'ಮೂವೀಸ್‌' ಬಗ್ಗೆ ಅಸಮಾಧಾನಗೊಂಡಿದೆ.  
ನಾನೂ ಯೋಗರಾಜ್‌ಭಟ್ ಒಂದೇ ಅಂತ ಯಾರಾದ್ರೂ ಅಂದ್ಕೊಂಡಿದ್ರೆ ಅದು ಕೇವಲ ಕಾಲ್ಪನಿಕ ಎನ್ನುತ್ತಿರುವ ದುನಿಯಾ ಸೂರಿ, ಕಂಟ್ರಿ ಪಿಸ್ತೂಲ್ ಹಿಡಿದು ಶೂಟ್ ಮಾಡ್ಬೇಕಾ ಎನ್ನುವಷ್ಟು ಗರಂ ಆಗಿದ್ದಾರೆ.
ಹೌದು. ಸೂರಿಯ ಬಗ್ಗೆ ಯಾರೇ ಮಾತನಾಡಿದರೂ ಜೊತೆಗೆ ಭಟ್ಟರು ಇದ್ದೇ ಇರುತ್ತಾರೆ. ಎಲ್ಲರಿಗೂ ಇವರಿಬ್ಬರೂ ಒಂದೇ ಅನಿಸುತ್ತೆ. ಯಾವ ಲೆವೆಲ್‌ಗೆ ಅಂದ್ರೆ ಗೂಗಲ್‌ನಲ್ಲಿ ಸೂರಿ ಅಂತ ಇಮೇಜ್ ಸರ್ಚ್ ಮಾಡಿದರೆ ಯೋಗರಾಜಭಟ್ ಅವರ ಜೊತೆಗಿರುವ ಪೋಟೋ ಬರುತ್ತೆ. ಆದರೆ ಅವರೆಲ್ಲರನ್ನೂ ದಂಗುಬಡಿಸುವಂತೆ ಈಗ ಸೂರಿ ಅವರು ಹೇಳುತ್ತಿರುವ ವಿಷಯವೇ ಬೇರೆ.
 'ನಂಗೆ ಇದು ಸಾಕಾಗಿಬಿಟ್ಟಿದೆ. ಯಾರು ನೋಡಿದರೂ ಎಲ್ಲಿ ಹೋದರೂ ನನ್ನನ್ನೂ ಭಟ್ಟರನ್ನೂ ಸೇರಿಸಿಕೊಂಡೇ ಮಾತನಾಡುತ್ತಾರೆ. ನನಗೆ ಅದು ಇಷ್ಟವಿಲ್ಲ. ದಯವಿಟ್ಟು ನನಗೆ ಅಂತ ಒಂದು ಐಡೆಂಟಿಟಿ ಇಟ್ಟುಕೊಳ್ಳಿ. ಒಂದು ವಿಷಯ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ನನಗೂ ಅವರಿಗೂ ಯಾವ ಸಂಬಂಧವೂ ಇಲ್ಲ. ನನ್ನದೇ ಬೇರೆ ಹಾದಿ. ಅವರದ್ದೇ ಬೇರೆ ಹಾದಿ. ನಾನು ಯಾವ ಕ್ಯಾಂಪಿಗೂ ಸೇರಿದವನಲ್ಲ. ದಯವಿಟ್ಟು ನನ್ನ ಬಗ್ಗೆ ಬರೆಯುವಾಗ ಮಾತನಾಡುವಾಗ ಅವರ ಹೆಸರು ಸೇರಿಸಿ ಮಾತನಾಡಬೇಡಿ. ನನ್ನ ಸಿನಿಮಾ ಶೈಲಿಯೇ ಬೇರೆ, ಅವರ ಸಿನಿಮಾ ಶೈಲಿಯೇ ಬೇರೆ. ಸಿನಿಮಾ ಬಗೆಗೆ ಅವರ ಮತ್ತು ನನ್ನ ಅಭಿಪ್ರಾಯಗಳೂ ಬೇರೆ ಬೇರೆ. ಹಾಗಾಗಿ, ನಾನೇ ಬೇರೆ ಅವರೇ ಬೇರೆ. ಅವರು ಮಾಡುವ ಸಿನಿಮಾಗಳು ನನಗೆ ಇಷ್ಟವಾಗುವುದಿಲ್ಲ. ನಾವು ತಾಯಿ ಶಾರದೆ ಅಂತೀವಿ, ಆದರೆ, ಪರಮಾತ್ಮ ಚಿತ್ರದಲ್ಲಿ ಇವರು 'ಕಾಲೇಜು ಗೇಟಲ್ಲಿ ಫೇಲಾಗಿ ಬಂದವರ ಕಾಪಾಡು ಚೊಂಬೇಶ್ವರ' ಅಂತಾರೆ. ಮಾತಾಡಿದರೆ ಯೂತ್ಸ್‌ಗೋಸ್ಕರ ಸಿನಿಮಾ ಮಾಡಬೇಕು ಅಂತ ಭಾಷಣ ಮಾಡ್ತಾರೆ. ಆದರೆ ಇವರು ಯೂತ್ಸ್‌ಗೆ ಕೊಡ್ತಾ ಇರೋ ಸಂದೇಶ ಇದೇನಾ? ಅವರಿಗೆ ಸಿನಿಮಾ ಅಂದ್ರೆ ಬರೀ ಉಡಾಫೆ. ಆದರೆ, ಅವರ ಈ ಉಡಾಫೆಯನ್ನು ಎಷ್ಟೂಂತ ಸಹಿಸಿಕೊಳ್ಳೋಕಾಗುತ್ತೆ?' ಎಂದು ಖಡಕ್ಕಾಗಿ ಹೇಳುತ್ತಿದ್ದಾರೆ ಸೂರಿ.
ನನ್ನನ್ನು, ನನ್ನ ಸಿನಿಮಾಗಳನ್ನು ತೆಗಳುವುದು ಅವರಿಗೆ ಇಷ್ಟ. ಕಂಟ್ರಿ ಪಿಸ್ತೂಲ್ ಅಂತ ಸಿನಿಮಾ ಮಾಡ್ತಿದೀನಿ  ಅಂದ್ರೆ ಕೆಲಸಕ್ಕೆ ಬರದ ಸಿನಿಮಾಗಳನ್ನ ಮಾಡ್ತೀಯ ಅಂತ ಕಾಲೆಳೀತಾರೆ. ನನ್ನ ಕಡ್ಡಿಪುಡಿ ಸಿನಿಮಾನೂ ಕೆಟ್ಟ ಸಿನಿಮಾ ಅಂದಿದ್ರು. ತಾವೊಬ್ಬರೇ ಶ್ರೇಷ್ಠ ಅನ್ನೋ ಭ್ರಮೆ ಇದೆ ಅವರಿಗೆ, ಸಾಧನೆ ಸೀರಿಯಲ್ ಬಗ್ಗೆ ಭಟ್ಟರು ಹೇಳಿಕೊತಾರೆ. ಅದರ ಬಗ್ಗೆ ನಾನು ನಿಜ ಹೇಳ್ತೀನಿ. ಅದಕ್ಕೆ ಚಿತ್ರಕಥೆ ಬರೆದಿದ್ದು ನಾನು ಎನ್ನುವ ಸೂರಿ, ಬಹುಶಃ ಹೆಸರು, ಸಕ್ಸಸ್ ಬಂದಾಗ ಎಲ್ಲರೂ ಹೀಗೇ ಅಲ್ಲವೆ ಎಂದರೆ ಅವರಿಗೆ ಯಾವ ಸೀಮೆ ಸಕ್ಸಸ್ ಸಿಕ್ಕಿದೆ ಬಿಡಿ ಎಂದು ಗರಮ್ ಆಗುತ್ತಾರೆ.
ಹೌದು. ನಿಜಕ್ಕೂ ನಂಗೆ ತುಂಬಾ ನೋವಾಗಿದೆ. ಹೇಳಿಕೊಳ್ಳಬೇಕು ಅನ್ನಿಸಿತು ಅದಕ್ಕೆ ಹೇಳುತ್ತಿದ್ದೇನೆ. ಆದರೆ ಇದು ಆಫ್ ದಿ ರೆಕಾರ್ಡ್ ಅಲ್ಲ. ಬರೀರಿ ಎನ್ನುತ್ತಲೇ ಮಾತನಾಡಿದ ಸೂರಿ, ಯೋಗರಾಜಭಟ್ಟರ ಶಿಷ್ಯರು ಎನ್ನುವ ಕಾನ್ಸೆಪ್ಟ್ ಬಗ್ಗೆಯೂ ಕೆಂಡಕಾರುತ್ತಾರೆ.  
'ತಮ್ಮದೊಂದು ಗುರುಕುಲ, ತಾವೇನೋ ಶಂಕರಚಾರ್ಯ ಎನ್ನುವ ಭ್ರಮೆ ಯೋಗರಾಜ ಭಟ್ಟರಿಗಿದೆ. ಅದೊಂದೇ ಅಲ್ಲ ಸಾಕಷ್ಟು ಭ್ರಮೆಗಳೊಂದಿಗೇ ಅವರು ಬದುಕುತ್ತಿದ್ದಾರೆ. ಅವರ ವರ್ತನೆಯಲ್ಲಿ ಅದು ಎದ್ದು ಕಾಣಿಸುತ್ತದೆ. ಮಾತೆತ್ತಿದರೆ ನಾನು ಅಷ್ಟು ಶಿಷ್ಯಂದಿರನ್ನು ಉದ್ಧಾರ ಮಾಡಿದೀನಿ, ಇವರಿಗೆ ಅವಕಾಶ ಕೊಟ್ಟಿದೀನಿ ಅಂತಾರೆ. ಒಂದು ಮಾತು ಹೇಳ್ತೀನಿ. ಯಾರೂ ಯಾರನ್ನೂ ಉದ್ಧಾರ ಮಾಡಲ್ಲ. ನಿಮ್ಮತ್ರ ಕಲೆ ಇದ್ರೆ ನೀವು ಉದ್ಧಾರ ಆಗ್ತೀರ ಅಷ್ಟೆ. ಯಾರ್‌ದೋ ಶಿಷ್ಯ ಅಂತ ಹೇಳಿಕೊಂಡ ತಕ್ಷಣ ಯಾರೂ ಉದ್ಧಾರ ಆಗಲ್ಲ.
ಭಟ್ಟರ ಶಿಷ್ಯ, ಬ್ಯಾಡಮ್ಮ ಆ ವಿಷ್ಯ ಎನ್ನುತ್ತಲೇ ಬೇಸರದಿಂದ ಮಾತು ಮುಂದುವರಿಸುತ್ತಾರೆ ಸೂರಿ. 'ಮುಂಗಾರುಮಳೆ ಕಥೆಯನ್ನು ಪ್ರೀತಮ್ ಗುಬ್ಬಿ ನಂದು ಅಂದಿದ್ದಕ್ಕೆ ಅವನನ್ನೂ ಭಟ್ಟರು ದೂರ ಮಾಡಿದರು. ಶಿಷ್ಯಂದಿರು, ಶಿಷ್ಯಂದಿರು ಅಂತ ಬೊಬ್ಬೆ ಹೊಡೀತಾರೆ. ನಾನು ಅಷ್ಟು ಜನರನ್ನ ಬೆಳೆಸಿದೆ, ಇಷ್ಟು ಜನರನ್ನ ಬೆಳೆಸಿದೆ ಅಂತಾರೆ. ಆದರೆ ಈ ಶಿಷ್ಯಂದಿರ ನಿಜ ಏನೂಂತ ನಂಗೆ ಗೊತ್ತು. ಅಸಲಿಗೆ ಶಿಷ್ಯಂದಿರು ಅಂತ ಹೇಳಿಕೊಳ್ಳೋ ಅನೇಕರು ಶಿಷ್ಯರೇ ಅಲ್ಲ. ಈಗ 'ಚಾರ್ಲಿ' ಅನ್ನೋ ಸಿನಿಮಾ ಮಾಡ್ತಾ ಇರೋ ಶಿವು ಅದಕ್ಕೆ ಉದಾಹರಣೆ. ಆ ಶಿವು ಭಟ್ಟರ ಶಿಷ್ಯನೇ ಅಲ್ಲ. ಸುಮ್ನೆ ಅವರಿಂದ ಎರಡು ಹಾಡು ಬರೆಸಿಕೊಂಡರೆ ಸಾಕು, ಎಲ್ಲರಿಗೂ ಅವನು ನನ್ನ ಶಿಷ್ಯ ಎಂದು ಹೇಳಿಕೊಳ್ತಾರೆ ಭಟ್ಟರು. ಮತ್ತು ಸೋ ಕಾಲ್ಡ್ ಶಿಷ್ಯರಿಗೂ ಹಾಗೆ ಹೇಳಿಕೊಳ್ಳುವ ಸ್ವಾತಂತ್ರ್ಯ ಕೊಡ್ತಾರೆ. 'ದ್ಯಾವ್ರೇ' ಸಿನಿಮಾ ಮಾಡಿದ, ಆ ಗಡ್ಡ ವಿಜಿ ಭಟ್ಟರ ಶಿಷ್ಯನಾ? ಅವನು ಕೆಲಸ ಮಾಡಿದ್ದು ನನ್ನ ಜೊತೆ. ನನ್ನ ಸಿನಿಮಾಗಳಿಗೆ. ನನ್ನ ಬಳಿ 'ದ್ಯಾವ್ರೇ' ಸಿನಿಮಾದ ಬಗ್ಗೆ ಹೇಳಿದ್ದ. ಸಿನಿಮಾದಲ್ಲಿ ಒಂದೇ ಸಲಕ್ಕೆ ಅಷ್ಟೊಂದು ಕತೆಗಳನ್ನು ಹೇಳೋಕೆ ಪ್ರಯತ್ನ ಮಾಡಬೇಡ ಅಂತ ಹೇಳಿಕಳಿಸಿದ್ದೆ. ಆಮೇಲೆ ಅವನು ಭಟ್ಟರತ್ರ ಹಾಡು ಬರೆಸಿಕೊಂಡು ಸಿನಿಮಾ ಮಾಡಿದ ಮೇಲೆ ಈಗ ನಾನು ಭಟ್ಟರ ಶಿಷ್ಯ ಅಂತ ಹೇಳ್ಕೊಂಡು ಓಡಾಡ್ತಿದಾನೆ. ನಾನು ಯಾರಿಗೂ ನೆನಪೇ ಆಗೋಲ್ಲ' ಎಂಬುದು ಸೂರಿ ಅವರ ಸೀರಿಯಸ್ ಮಾತುಗಳು.
'ಅಲ್ಲದೆ, ಅಷ್ಟೊಂದು ದೊಡ್ಡ ಸಿನಿಮಾಸಕ್ತರು ಎಂದುಕೊಂಡಿರುವ ಇವರಿಗೆ, 6-52 ಸಿನಿಮಾದ ಹುಡುಗರು ಬಂದು ಒಮ್ಮೆ ಸಿನಿಮಾ ನೋಡಿ ಸರ್ ಅಂದ್ರೆ ಇವರಿಗೆ ಅದನ್ನು ನೋಡೋಕೂ ಪುರುಸೊತ್ಯಾಕೆ ಇರಲಿಲ್ಲ. ಅವರದ್ದೇ ಬ್ಯಾನರ್ ಇತ್ತಲ್ಲ? ಸಿನಿಮಾ ಕೊಂಡುಕೊಳ್ಳಬಹುದಿತ್ತು? ಭಟ್ಟರು ಸಪೋರ್ಟ್ ಮಾಡೋದೆಲ್ಲ ಬರೀ ಹೊಗಳುಭಟರಿಗೆ' ಎನ್ನುತ್ತಾ, 'ಏನೋ ಹೇಳ್ಕೊಬೇಕು ಅನ್ನಿಸಿತು' ಎಂದು ಹೇಳಿಮುಗಿಸಿದ ನಿರಾಳತೆ ಅನುಭವಿಸಿದರು ಸೂರಿ.
ಆದರೆ, ಎಲ್ಲರಿಗೂ ಗೊತ್ತು. ಎಷ್ಟೇ 'ರಾ' ಎನಿಸುವ ಸಿನಿಮಾ ಮಾಡಿದ್ರೂ ಸೂರಿ ಎಮೋಷನಲ್ ವ್ಯಕ್ತಿ. ಪ್ರೀತಿಯಿಂದ ಮಾಡಿದ 'ಇಂತಿ ನಿನ್ನ ಪ್ರೀತಿಯ' ಸಿನಿಮಾ ಸೋತಾಗ 'ನಾನು ಇನ್ಮೇಲೆ ಸಿನಿಮಾನೇ ಮಾಡಲ್ಲ' ಎಂದು ಮುನಿಸಿಕೊಂಡವರು. ಆದರೂ ಮುಂದೆ 'ಕಡ್ಡಿಪುಡಿ'ಯಂಥ ಅದ್ಭುತ ಚಿತ್ರ ಕೊಟ್ಟವರು. ಸೂರಿ ಮತ್ತು ಯೋಗರಾಜಭಟ್ಟರ ಈ ಜಗಳ್ಬಂದಿ ಚಿತ್ರೋದ್ಯಮಕ್ಕೆ ಒಳ್ಳೆಯದೇನಲ್ಲ. ಹೆಚ್ಚೆಂದರೆ ವಿರೋಧಿಗಳಿಗೆ ಒಂದಿಷ್ಟು ಖುಷಿಯಾಗಬಹುದು ಅಷ್ಟೆ ಎಂಬುದು ವಿಪರ್ಯಾಸ. ಹಾಗಾಗಿ ಸೂರಿಯವರ ಈ ಮುನಿಸು, ಟೆಂಪರ್ ಎಲ್ಲ ಕೇವಲ ಟೆಂಪರರಿ ಆಗಿರುತ್ತದೆ ಎನ್ನುವುದು ಸಿನಿಮಾಪ್ರಿಯರ ನಿರೀಕ್ಷೆ.

ನಂಗೆ ಇದು ಸಾಕಾಗಿಬಿಟ್ಟಿದೆ. ಯಾರು ನೋಡಿದರೂ ಎಲ್ಲಿ ಹೋದರೂ ನನ್ನನ್ನೂ ಭಟ್ಟರನ್ನೂ ಸೇರಿಸಿಕೊಂಡೇ ಮಾತನಾಡುತ್ತಾರೆ. ನನಗೆ ಅದು ಇಷ್ಟವಿಲ್ಲ. ದಯವಿಟ್ಟು ನನಗೆ ಅಂತ ಒಂದು ಐಡೆಂಟಿಟಿ ಇಟ್ಟುಕೊಳ್ಳಿ.'
- ದುನಿಯಾ ಸೂರಿ

- ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.