

ಈ ಚಿತ್ರದ ಹಾಡುಗಳು ಕೇಳುಗರನ್ನು ಪದೆಪದೆ ಕಾಡುತ್ತವೆ. ನೆರಳಿನಂತೆ ಹಿಂಬಾಲಿಸುತ್ತವೆ ಎಂದು ಹೇಳಿಕೊಂಡ ಆ ಚಿತ್ರದ ಹೆಸರು 'ನೆರಳು'. ಇತ್ತೀಚೆಗಷ್ಟೆ ಚಿತ್ರದ ಹಾಡುಗಳ ಆಡಿಯೋ ಬಿಡುಗಡೆ ನಡೆಯಿತು. ಜೈಂಕಾರ್ ಆಡಿಯೋ ಸಂಸ್ಥೆ ಚಿತ್ರದ ಮಾರುಕಟ್ಟೆ ಹಕ್ಕು ತೆಗೆದುಕೊಂಡಿದೆ. ಅತುಲ್ ಕುಲಕರ್ಣಿ ಚಿತ್ರದ ನಿರ್ಮಾಪಕರು, ಪತ್ರಕರ್ತ ವಿನೋದ್ ಕೆ. ಚಿತ್ರದ ನಿರ್ದೇಶಕರು. ಇವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ. ಸಂಜೀವ್ ಹಾಗೂ ಶೃತಿರಾಜ್ ಚಿತ್ರದ ಜೋಡಿ. ಶಶಿಕುಮಾರ್, ಅವಿನಾಶ್, ಶಂಕರ್ ಅಶ್ವತ್ಥ್ ಮತ್ತಿತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿವೆ. ಶ್ರೀಧರ್ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದು, ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ.
ಆಡಿಯೋ ಬಿಡುಗಡೆ ಸಮಾರಂಭಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಉಮೇಶ್ ಬಣಕಾರ್ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. 'ಹೊಸಬರ ಚಿತ್ರಗಳು ಗೆಲ್ಲಬೇಕು. ಒಳ್ಳೆಯ ಕನ್ನಡ ಸಿನಿಮಾಗಳು ಬರಬೇಕು' ಎಂದು ಅವರು ಆಶಿಸಿದರು.
ಈ ಸಿನಿಮಾದ ಮತ್ತೊಂದು ವಿಶೇಷ ಎಂದರೆ ಚಿತ್ರದ ಕ್ಲೈಮ್ಯಾಕ್ಸ್ 48 ನಿಮಿಷ ಇದೆ. ಪತ್ತೇದಾರಿಕೆ ಹಿನ್ನೆಲೆಯಲ್ಲಿ ಸಾಗುವ ಈ ಚಿತ್ರದ ಕಥೆಗೆ ಸೂಕ್ತವಾಗುವ ಶೀರ್ಷಿಕೆ 'ನೆರಳು'. 'ಚಿತ್ರಕ್ಕೆ ಕಥೆ ತುಂಬಾ ಚೆನ್ನಾಗಿದೆ. ಮೊದಲ ನಿರ್ದೇಶನವಾದರೂ ಚೆನ್ನಾಗಿ ನಿರೂಪಣೆ ಮಾಡಿದ್ದಾರೆ. ಹೊಸಬರ ಚಿತ್ರವಾದರೂ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ಮೆಚ್ಚುಗೆಯಾಗುತ್ತದೆ' ಎನ್ನುವುದು ಚಿತ್ರತಂಡದ ನಂಬಿಕೆ.
ಉದ್ಯಮಿಯಾಗಿರುವ ನಿರ್ಮಾಪಕ ಅತುಲ್ ಕುಲಕರ್ಣಿಗೆ ಚಿತ್ರದ ಬಗ್ಗೆ ತುಂಬಾ ಸಂತಸವಿದೆ. ಸಿನಿಮಾ ಅವರು ಅಂದುಕೊಂಡಂತೆ ಮೂಡಿ ಬಂದಿರುವುದೇ ಅವರ ಖುಷಿಗೆ ಕಾರಣ. ನಿರ್ದೇಶಕ ವಿನೋದ್‌ರಿಗೆ ಇದು ಮೊದಲ ಚಿತ್ರವಾಗಿರುವ ಕಾರಣ ಚಿತ್ರದ ಬಗ್ಗೆ ತುಂಬಾ ಶ್ರದ್ಧೆ ಇಟ್ಟುಕೊಂಡು ಅಂದುಕೊಂಡ ಬಜೆಟ್‌ನಲ್ಲಿ, ಅಂದುಕೊಂಡ ಸಮಯಕ್ಕೆ ಚಿತ್ರ ಮುಗಿಸಿದ್ದಾರೆ. ಪ್ರೀತಿ, ಪ್ರೇಮ, ಸೆಂಟಿಮೆಂಟ್... ಹೀಗೆ ಚಿತ್ರಕ್ಕೆ ಬೇಕಾದ ಎಲ್ಲ ಅಂಶಗಳು ಇಲ್ಲಿವೆ. ಹೀಗಾಗಿ 'ನೆರಳು' ಸಿನಿಮಾ ಇಂಥವರಿಗೆ ಸೀಮಿತ ಎಂದು ಹೇಳುವ ಹಾಗಿಲ್ಲ.
ಟಿಪ್ಪು ಹಾಡಿರುವ '90 ಅನ್‌ಡ್ರೆಂಡ್ ಸಾಕು...' ಹಾಡು ಈಗಾಗಲೇ ತುಂಬಾ ಪಾಪ್ಯೂಲರ್ ಆಗಿದೆಯಂತೆ. ನಾಯಕ ಸಂಜೀವ್‌ಗೆ ಇದು ಮೊದಲ ಚಿತ್ರ. ಇನ್ನೂ ನಾಯಕಿ ಶೃತಿರಾಜ್‌ಗೆ 'ನೆರಳು' ನಾಲ್ಕನೇ ಸಿನಿಮಾ. ಈ ಹಿಂದೆ 'ನಿನ್ಯಾರೆ', 'ವಾರೆವ್ಹಾ', 'ಟೇಕ್ ಇಟ್ ಈಸಿ' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕಥೆ ಮತ್ತು ಪಾತ್ರ ತುಂಬಾ ಚೆನ್ನಾಗಿದ್ದ ಕಾರಣಕ್ಕೆ 'ನೆರಳು'ಗೆ ಶೃತಿರಾಜ್ ನಾಯಕಿಯಾಗಿದ್ದಾರೆ. ಸಂಗೀತ ನಿರ್ದೇಶಕ ಹರ್ಷಗೂ ಇದು ಮೊದಲ ಚಿತ್ರ. ಆದರೆ ಈ ಹಿಂದೆ ಅವರು 'ಸಿಕ್ರೇಟ್' ಎಂಬ ಕಿರುಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಚಿತ್ರದ ಎಲ್ಲ ಹಾಡುಗಳನ್ನು ಬರೆದಿರುವ ಶ್ರೀಧರ್ ಬಗ್ಗೆ ಚಿತ್ರತಂಡ ಮೆಚ್ಚುಗೆ ವ್ಯಕ್ತಪಡಿಸಿತು. ಎಂದು ನಿರ್ಮಾಪಕ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್ ಚಿತ್ರತಂಡಕ್ಕೆ ಶುಭ ಹಾರೈಸಿದರು.