ಸಖತ್ತಾಗವ್ನೆ ಗೆದ್ದೆ ಗೆಲ್ತಾನೆ

ಈ ಚಿತ್ರದ ನಿರ್ದೇಶಕರು ನಮ್ಮ ಮನೆಗೆ ಬಂದು ಕಾಲ್ಶೀಟ್ ಕೇಳಿದಾಗಲೇ ಗೊತ್ತಾಯ್ತು. ಇವರು ಮಾಮೂಲಿ ಸಿನಿಮಾ ಮಾಡ್ತಾ ಇಲ್ಲ ಅಂತ ಎಂದಿದ್ದು ಅವಿನಾಶ್, ಮಾಳವಿಕಾ ದಂಪತಿಗಳು. ಅದು ಕಾರ್ತಿಕ್ ಅಭಿನಯದ 'ಸಖತ್ತಾಗವ್ನೇ' ಚಿತ್ರದ ಪತ್ರಿಕಾಗೋಷ್ಠಿ.
ಸಾಕಷ್ಟು ಚಿತ್ರಗಳಲ್ಲಿ ಅವಿನಾಶ್ಗೊಂದು ಅಪ್ಪ, ಅಣ್ಣನ ಪಾತ್ರ ಇರುತ್ತದೆ. ಅವರ ಹೆಂಡತಿಯ ಪಾತ್ರ ಎಂದರೆ ಅದಕ್ಕೆ ಸ್ಕೋಪ್ ಅಷ್ಟಕ್ಕಷ್ಟೇ. ಆದರೆ, ನಿಜಜೀವನದ ದಂಪತಿಗಳು ಆನ್ಸ್ಕ್ರೀನ್ನಲ್ಲೂ ಹಾಗೇ ಕಾಣಲಿ ಎಂಬ ಆಸೆ ಹೊತ್ತ ನಿರ್ದೇಶಕ ವಿಷ್ಣುದಾಸ್ ನನಗೂ 15 ದಿನಗಳ ಕಾಲ್ಶೀಟ್ ಕೇಳಿದರು. ಅದು ಯಾಕೆ ಎಂಬುದು ನಮಗೆ ಈಗ ಶೂಟಿಂಗ್ ಸಮಯದಲ್ಲಿ ಗೊತ್ತಾಗುತ್ತಿದೆ, ಅಷ್ಟು ಪ್ರೊಫೆಷನಲ್ ಆಗಿ ಚಿತ್ರೀಕರಣ ನಡೆಯುತ್ತಿದೆ, ಮಂಜುನಾಥ್ ಅವರ ವಿನ್ಯಾಸದ ಈ ಪೋಸ್ಟರ್ಗಳಲ್ಲಷ್ಟೇ ಸುಂದರವಾಗಿ ಸಿನಿಮಾ ಕೂಡಾ ಮೂಡಿಬರುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು ಮಾಳವಿಕಾ.
ಬಾಬಾ ಚಿತ್ರದ ಮೂಲಕ ಅಪ್ರಾಪ್ತ ವಯಸ್ಕ ಹೀರೋ ಎಂದು ಹೆಸರು ಮಾಡಿದ್ದ ಕಾರ್ತಿಕ್ ಈಗ ತಮ್ಮ ಎರಡನೇ ಇನ್ನಿಂಗ್ಸ್ ಶುರುಮಾಡಿರುವ ಚಿತ್ರ ಇದು. ವಿಶೇಷ ಎಂದರೆ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಮತ್ತು ಛಾಯಾಗ್ರಾಹಕ ಎರಡೂ ಸ್ಥಾನವನ್ನು ಗಿರಿಧರ್ ದಿವಾನ್ ಅಲಂಕರಿಸಿದ್ದಾರೆ. ಬಹುಷಃ ಇದು ಭಾರತೀಯ ಚಿತ್ರರಂಗದಲ್ಲೇ ಎಲ್ಲೂ ಇಲ್ಲ ಎನ್ನಬಹುದಾದಂಥ ಉದಾಹರಣೆ. ಗಿರಿಧರ್ ದಿವಾನ್ ಒಳ್ಳೆಯ ಸಂಗೀತ ನಿರ್ದೇಶಕ ಎಂಬುದಷ್ಟೇ ಗೊತ್ತಿತ್ತು, ಆದರೆ ಚಿತ್ರೀಕರಣ ಶುರುವಾದ ಮೇಲೆ ಇದು ಖಂಡಿತ ಗಿರಿಧರ್ ಅವರ ಮೊದಲ ಛಾಯಾಗ್ರಹಣದ ಚಿತ್ರ ಎನಿಸುತ್ತಿಲ್ಲ ಎಂಬ ಸರ್ಟ್ಫಿಕೇಟ್ ಅವಿನಾಶ್ರಿಂದ ವ್ಯಕ್ತವಾಯಿತು.
ಚಿತ್ರದಲ್ಲಿ ಕಾರ್ತಿಕ್ಗೆ ನಾಯಕಿಯಾಗಿ ಅಬಿನಯಿಸುತ್ತಿರುವುದು ಇದೇ ಗಿರಿಧರ್ ಸಂಗೀತದ 'ಚಿರು' ಚಿತ್ರದ ಇಲ್ಲೆ ಇಲ್ಲೆ ಎಲ್ಲೋ ಹಾಡಿಗೆ ಹೆಜ್ಜೆ ಹಾಕಿದ್ದ ಕೃತಿ ಖರಬಂದಾ. ಮಾಳವಿಕಾ ಅವರಿಂದ 'ತೆಳ್ಳಗೆ ಬೆಳ್ಳಗಿನ ಸುಂದರಿಯರಿಗೆ ಅಭಿನಯ ಬರುವುದಿಲ್ಲ ಎಂದುಕೊಂಡಿದ್ದೆ. ಆದರೆ ಕೃತಿಯನ್ನು ನೋಡಿ ಅದು ಸುಳ್ಳಾಯಿತು' ಎಂಬ ಹೊಗಳಿಕೆ ಸಂದಾಯವಾಯಿತು.
ಚಿತ್ರದ ನಾಯಕ ಕಾರ್ತಿಕ್ ಬಾಬಾ ನಂತರ ಬಂದ ಅವಕಾಶಗಳನ್ನು ಒಪ್ಪಿಕೊಳ್ಳುವ ಮುನ್ನ ಸರಿಯಾದ ತರಬೇತಿ ಬೇಕು ಎನಿಸಿದ್ದಕ್ಕೆ, ಹೀರೋ ಆಗಲು ಬೇಕಾದ ತಯಾರಿ ಮಾಡಿಕೊಂಡಿದ್ದಾರಂತೆ. ನಾಯಕಿ ಕೃತಿ, ಅವರನ್ನು ತುಂಬಾ ಸಂಕೋಚ ಸ್ವಭಾವದ ಹುಡುಗ ಎಂದು ಕರೆದರೂ ಕಾರ್ತಿಕ್ ಮಾತ್ರ ಈ ಚಿತ್ರದಿಂದ ಖಂಡಿತಾ ಯಶಸ್ಸು ಗಳಿಸುತ್ತೇನೆ ಎಂಬ ಆತ್ಮ ವಿಶ್ವಾಸದಲ್ಲಿದ್ದಾರೆ.
ಸುಮಾರು ಆರು ತಿಂಗಳ ಹಿಂದೆ ಈ ಚಿತ್ರದ ತಯಾರಿ ಮಾಡಿಕೊಂಡಿದ್ದೆವು. ಈಗ ಎಲ್ಲವೂ ಅಂದುಕೊಂಡಂತೆ ಕಾರ್ಯಗತವಾಗುತ್ತಿದೆ ಎನ್ನುವ ಗಿರಿಧರ್ ದಿವಾನ್ಗೆ ಸಮರ್ಥವಾಗಿ ಕೈ ಜೋಡಿಸಿರುವ ಇನ್ನೊಂದು ಪ್ರತಿಭೆ ಭರತ್. ಚಿತ್ರದ ಸಂಕಲನ ಮತ್ತು ಸಹ ನಿರ್ದೇಶಕರೂ ಆಗಿರುವ ಭರತ್ಗೆ ಸಾಕಷ್ಟು ಸಿನಿಮಾ ಜ್ಞಾನ ಇದೆ, ನಾವು ಸುಮ್ಮನೆ ಒಂದೆರಡು ಇರಾನಿ ಚಿತ್ರಗಳ ಹೆಸರು ಹೇಳಿದ್ದಕ್ಕೆ ತಮ್ಮ ಇಡೀ ಸಿನಿಮಾ ಭಂಡಾರವನ್ನೇ ತೋರಿಸಿ ನಮ್ಮನ್ನು ಚಕಿತಗೊಳಿಸದರು ಎಂಬುದು ಅವಿನಾಶ್, ಮಾಳವಿಕಾ ದಂಪತಿಗಳಿಗೆ ಚಿತ್ರೀಕರಣದಲ್ಲಿ ಆದ ಇನ್ನೊಂದು ವಿಶೇಷ ಅನುಭವವಂತೆ.
ಸಖತ್ತಾಗವ್ನೇ ಒಂದು ಸಾಧಾರಣ ಕಥೆಯಾದರೂ ಅದಕ್ಕೆ ಅಸಾಧಾರಣವಾದ ಟ್ರೀಟ್ ಮೆಂಟ್ ಕೊಡುತ್ತಿದ್ದೇವೆ ಎನ್ನುವ ನಿರ್ದೇಶಕ ವಿಷ್ಣುದಾಸ್ ಸೇರಿದಂತೆ ಚಿತ್ರತಂಡದ ಎಲ್ಲರ ಕಾಮನ್ ಅಭಿಪ್ರಾಯ. ಹಾಗಾಗಿ 'ಸಖತ್ತಾಗವ್ನೇ, ಗೆದ್ದೇ ಗೆಲ್ತಾನೆ' ಎಂಬ ಮೂಡು ಅಂದು ಎಲ್ಲರಲ್ಲೂ ಇತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


