

ನಿರ್ಮಾಪಕ ಎನ್.ಕುಮಾರ್ ಒಂದು ಭರ್ಜರಿ ಸಿನಿಮಾ ಮಾಡಲು ಭರ್ಜಿ ಹಿಡಿದು ಬೇಟೆಗಾರನಂತೆ ಎದ್ದು ನಿಂತಿದ್ದಾರೆ. ಸಿನಿಮಾ ವಿತರಣೆ, ಪ್ರದರ್ಶನ, ನಿರ್ಮಾಣ ಸೇರಿದಂತೆ ಕನ್ನಡ ಚಿತ್ರರಂಗದಲ್ಲಿ ತೆರೆ ಹಿಂದೆ ಹಲವು ದಶಕಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ ಕುಮಾರ್, ತಮ್ಮ ಬ್ಯಾನರ್ನಲ್ಲಿ ಬಹು ಕೋಟಿ ವೆಚ್ಚದ ಚಿತ್ರ ನಿರ್ಮಾಣಕ್ಕೆ ಅಂತಿಮ ರೂಪರೇಷಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿವರೆಗೂ ಎಲ್ಲವೂ ತಾವು ಅಂದುಕೊಂಡಂತೆ ಆಗಿದ್ದು, ಇನ್ನೇನು ಚಿತ್ರಕ್ಕೆ ಪೂಜೆ ಮಾಡುವುದೊಂದೇ ಬಾಕಿ ಎನ್ನುತ್ತಾರೆ ಕುಮಾರ್. ಕನ್ನಡ ಚಿತ್ರರಂಗ ಮಾತ್ರವಲ್ಲ ದಕ್ಷಿಣ ಭಾರತ ಚಿತ್ರಕ್ಕೆ ಈ ವರ್ಷ ತಮ್ಮ ಬ್ಯಾನರ್ನಲ್ಲಿ ಅದ್ಧೂರಿ ಮತ್ತು ಅತ್ಯುತ್ತಮ ಕಮರ್ಷಿಲ್ ಚಿತ್ರ ಕೊಡುತ್ತೇನೆ ಎಂಬ ಖಡಕ್ ಭರವಸೆ ನೀಡುತ್ತಾರೆ ಎನ್.ಕುಮಾರ್.
ಅಂದಹಾಗೆ ಎನ್.ಕುಮಾರ್ರ ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣಕ್ಕೆ ಜೊತೆಯಾಗುತ್ತಿರುವವರು ನಟ ಮತ್ತು ನಿರ್ದೇಶಕ ಸುದೀಪ್, ನಿರ್ಮಾಪಕ ಹಾಗೂ ನಿರ್ದೇಶಕ ರಾಮ್ಗೋಪಾಲ್ ವರ್ಮಾ. ಹೌದು, ರಾಮ್ಗೋಪಾಲ್ ವರ್ಮ ಕನ್ನಡಕ್ಕೆ ಬರುವುದು ಖಾತರಿಯಾಗಿದೆ. ಹಾಗೆ ಅವರು ಕನ್ನಡದಲ್ಲಿ ನಿರ್ದೇಶನ ಮಾಡಲು ಹೊರಟಿರುವ ಮೊದಲ ಚಿತ್ರಕ್ಕೆ ಸುದೀಪ್ ನಾಯಕ ಎಂಬುದು ಕೂಡ ಸತ್ಯ. ಈ ಚಿತ್ರವನ್ನು ಕುಮಾರ್ ಏಕಕಾಲದಲ್ಲಿ ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಮಾಡುವ ತಯಾರಿಯಲ್ಲಿರುವುದು ಸಹ ನೂರಕ್ಕೆ ನೂರು ಭಾಗ ಖರೆ. ಒಟ್ಟಿನಲ್ಲಿ ಕುಮಾರ್, ಸುದೀಪ್, ವರ್ಮ ಈ ಮೂವರ ಕಾಂಬಿನೇಷನ್ನಲ್ಲಿ ಬಿಗ್ ಬಜೆಟ್ ಚಿತ್ರವೊಂದು ತಯಾರಾಗಲಿದೆ. ಬಾಲಿವುಡ್ನ ಸಂಚಲನಾತ್ಮಕ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕನ್ನಡಕ್ಕೆ ಬರುತ್ತಿರುವ ಮಾಹಿತಿಯನ್ನು ಸ್ವತಃ ನಿರ್ಮಾಪಕ ಕುಮಾರ್ ಅವರೇ ಅಧಿಕೃತಗೊಳಿಸಿದ್ದಾರೆ. ಆ ಮೂಲಕ ವರ್ಮಾ ಕಂಪನಿ ಬಾಂಬೆಯಿಂದ ಕನ್ನಡಕ್ಕೂ ಬರಲಿದೆಯೇ? ಎನ್ನುವ ತೆರೆಮರೆಯ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
'ಅದ್ಧೂರಿ ಚಿತ್ರ ಮಾಡಬೇಕೆಂದು ತುಂಬಾ ವರ್ಷಗಳಿಂದ ಅಂದುಕೊಳ್ಳುತ್ತಿದ್ದೆ. ಆದರೆ ಯಾವ ರೀತಿ ಚಿತ್ರ ಮಾಡಬೇಕು, ಯಾರು ನಿರ್ದೇಶನ ಮಾಡಬೇಕು, ಕಥೆ ಸೇರಿದಂತೆ ಯಾವುದರ ಬಗ್ಗೆಯೂ ಹೆಚ್ಚು ಸ್ಪಷ್ಟತೆ ಇರಲಿಲ್ಲ. ಆದರೆ ಸುದೀಪ್ ಅವರು ನನ್ನ ಚಿತ್ರದ ಹೀರೋ ಆಗಬೇಕು ಎಂದುಕೊಂಡಿದ್ದೆ ಅಷ್ಟೆ. ಸುದೀಪ್ ಮತ್ತು ನಾನು ಒಟ್ಟಿಗೆ ಚರ್ಚೆ ಮಾಡಿ ರಾಮ್ಗೋಪಾಲ್ ವರ್ಮಾ ಜೊತೆ ಸಿನಿಮಾ ಮಾಡಲು ನಿರ್ಧರಿಸಿದೆವು. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುವ ಯೋಜನೆ ನಮ್ಮದು. ಈಗಾಗಲೇ ನಿರ್ದೇಶಕ ರಾಮ್ಗೋಪಾಲ್ ವರ್ಮಾರ ಜೊತೆ ಎರಡ್ಮೂರು ಸುತ್ತಿನ ಮಾತುಕತೆ ಮಾಡಿದ್ದೇವೆ. ಪಕ್ಕಾ ಕಮರ್ಷಿಲ್ ಸಿನಿಮಾ. ಈಗಾಗಲೇ ವರ್ಮಾ ಅವರದ್ದೇ ನಿರ್ದೇಶನದಲ್ಲಿ ಬಂದಿರುವ 'ಶಿವ', 'ರಂಗೀಲಾ' ಮಾದರಿಯ ಸಿನಿಮಾ ಮಾಡಬೇಕೆಂದು ಮೂವರು ನಿರ್ಧರಿಸಿದ್ದೇವೆ. ನಾಲ್ಕು ಭಾಷೆಯಲ್ಲಿ ಈ ಸಿನಿಮಾ ತಯಾರಾಗುತ್ತಿರುವುದರಿಂದ ಬಜೆಟ್ ಲೆಕ್ಕ ಹಾಕಿಲ್ಲ. ಎರಡು ವಾರದಲ್ಲಿ ಕಥೆ ಅಂತಿಮಗೊಳ್ಳಲಿದೆ. ರಿಮೇಕ್ ಕಥೆಯಂತೂ ಅಲ್ಲ. ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ಸಿನಿಮಾ ಶುರುವಾಗುತ್ತದೆ. ಸುದೀಪ್ ಅಥವಾ ನಾನು ಕಥೆ ಬಗ್ಗೆ ಸಲಹೆ ನೀಡಿಲ್ಲ. ವರ್ಮಾ ಇಂಡಿಯನ್ ಡೈರೆಕ್ಟರ್. ನಮಗಿಂತ ಹೆಚ್ಚು ಬುದ್ಧಿವಂತ. ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವಂತಹ ಸಿನಿಮಾ ಮಾಡೋಣ ಎಂಬುದು ನಮ್ಮ ಯೋಚನೆ' ಎನ್ನುತ್ತಾರೆ ನಿರ್ಮಾಪಕ ಎನ್.ಕುಮಾರ್.
ನಟ ಸುದೀಪ್ ಕೂಡ ವರ್ಮಾ ಕನ್ನಡ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆಂದು ಹೇಳಿಕೊಂಡಿದ್ದಾರೆ. 'ಈಗ' ಚಿತ್ರದ ನಂತರ ಸುದೀಪ್ರ ಅಭಿನಯದ ಶಕ್ತಿ ದಕ್ಷಿಣ ಭಾರತೀಯ ಚಿತ್ರರಂಗಕ್ಕೂ ಪರಿಚಯವಾಗಿದ್ದು, ಅದು ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆಯಂತೆ. ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಭದ್ರ' ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ರ 'ನರಸಿಂಹ' ಚಿತ್ರಗಳ ನಂತರ ನಿರ್ಮಾಣಕ್ಕೆ ಇಳಿದಿರುವ ಎನ್.ಕುಮಾರ್ ಬ್ಯಾನರ್ನಲ್ಲಿ ಇದುವರೆಗೂ 30ಕ್ಕೂ ಹೆಚ್ಚು ಚಿತ್ರಗಳು ನಿರ್ಮಾಣಗೊಂಡಿವೆ. ಒಳ್ಳೆಯ ಚಿತ್ರ ಕೊಟ್ಟರೆ ಕನ್ನಡ ಪ್ರೇಕ್ಷಕರು ಮೆಚ್ಚುಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ರೀಮೆಕ್ನ್ನು ಬದಿಗಿಟ್ಟು ನಾಲ್ಕು ಭಾಷೆಯಲ್ಲಿ ಸ್ವಮೇಕ್ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.
-ಕೇಶು