

ಚಿತ್ರ: ದಿ ಆ್ಯಪಲ್ (1998)
ಭಾಷೆ: ಪರ್ಷಿಯನ್, ಅವಧಿ: 86 ನಿಮಿಷ
ನಿರ್ದೇಶನ: ಸಮಿರ ಮಕ್ಮಲ್ ಬಫ್
ತಾರಾಗಣ: ಘೋರ್ಬನ್ ಅಲಿ ನದೇರಿ, ಅಝಿಝೆ ಮೊಹಮದಿ, ಮಸ್ಸೌಮಾ ನದೇರಿ, ಝರಾ ನದೇರಿ, ಝರಾ ಸಾಘ್ರಿಸಾ.
ಒಂದು ಬದುಕನ್ನು ತೋರಿಸುವುದಷ್ಟೇ ಸಿನಿಮಾ ಕೆಲಸವಲ್ಲ. ಎಂಥ ಪರಿಸ್ಥಿತಿಯಲ್ಲೂ ಜೀವನೋತ್ಸಾಹದ ಕನಸುಗಳನ್ನು ಬಿತ್ತಬೇಕು. ಅದರಲ್ಲೂ ಸಿನಿಮಾ ಮಾಧ್ಯಮ ತನ್ನ ದೇಶದ ಅಥವಾ ಜನರ ತಳಮಳಗಳನ್ನು ಜಗತ್ತಿಗೆ ಸಾರುವ ಮೂಲಕ ದೀಪದ ಕೆಳಗಿನ ಕತ್ತಲ ಲೋಕಕ್ಕೆ ಕನ್ನಡಿ ಹಿಡಿಯುವ ಕೆಲಸ ಮಾಡುತ್ತದೆ. ತೀರಾ ರಿಸರ್ವ್ಡ್ ಎಂದು ಗುರುತಿಸಿಕೊಂಡ ಇರಾನ್ನಂಥ ರಾಷ್ಟ್ರಗಳ ಆಡಳಿತ ವ್ಯವಸ್ಥೆಯ ಸರ್ವಾಧಿಕಾರ ದೋರಣೆ ಮತ್ತು ನೀತಿಗಳ ನಡುವೆಯೂ ಅಲ್ಲಿನ ಜನರ ಸಾಮಾಜಿಕ ಬದುಕಿಗೆ ಸಾಕಷ್ಟು ಚಿತ್ರಗಳು ಬೆಳಕಾಗಿವೆ. ಅಂಥ ಚಿತ್ರಗಳ ಸಾಲಿನಲ್ಲಿ ಕಾಣುವ 'ದಿ ಆ್ಯಪಲ್' ಚಿತ್ರ ಬತ್ತಿ ಹೋಗಿರುವ ಬರಡು ಜೋಪಡಿಗಳಲ್ಲಿ ಜೀವನದ ಪಾಠ ಹೇಳುತ್ತದೆ.
ನಿರ್ದೇಶಕಿ ಸಮಿರ ಮಕ್ಮಲ್ ಬಫ್, ಇರಾನ್ನ ಪ್ರಸಿದ್ಧ ನಿರ್ದೇಶಕ ಮೊಹ್ಸೀನ್ ಮಕ್ಮಲ್ ಬಫ್ರ ಪುತ್ರಿ. ಮಕ್ಮಲ್ ಬಫ್ನ ಇಡೀ ಕುಟುಂಬ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಸಮಿರ ಮಕ್ಮಲ್ಬಫ್ಳ ಮೊದಲ ನಿರ್ದೇಶನ ಇದು. ತಂದೆಯಿಂದಲೇ ಸಾಕಷ್ಟು ಸಿನಿಮಾ ಕೃಷಿಪಾಠ ಕಲಿತಿರುವ ಈಕೆ, ತಂದೆಯ ಜಾಡು ಹಿಡಿದು ಸಾಗುತ್ತಿದ್ದಾಳೆ. ತಂದೆ ಮೊಹ್ಸೀನ್ ಮಕ್ಮಲ್ಬಫ್ ನಿರ್ದೇಶನದ 'ದಿ ಸೈಲೆನ್ಸ್' ಚಿತ್ರದಿಂದ ಸ್ಫೂರ್ತಿಗೊಂಡು 'ದಿ ಆ್ಯಪಲ್' ನಿರ್ದೇಶನ ಮಾಡಿರುವ ಸಮಿರ ಮಕ್ಮಲ್ಬಫ್, ಇರಾನ್ನ ರಾಜಧಾನಿ ಟೆಹರಾನ್ ವ್ಯಾಪ್ತಿಯ ಪುಟ್ಟ ಗಲ್ಲಿಯಲ್ಲಿ ಬರುವ ಅತ್ಯಂತ ಬಡ ಕುಟುಂಬದ ಕಥೆ ಹೇಳಿದ್ದಾಳೆ.
ಎರಡು- ಮೂರು ಮನೆಗಳ ಪುಟ್ಟ ಗಲ್ಲಿ ಅದು. ಅಲ್ಲೊಂದು ಪಾಳು ಬಿದ್ದ ಕಟ್ಟಡ. ವಯಸ್ಸಾದ ಗಂಡ- ಹೆಂಡತಿ ಮತ್ತು ಇಬ್ಬರು ಮಕ್ಕಳು ಅಲ್ಲಿ. ಹೆಂಡತಿಗೆ ಕಣ್ಣು ಕಾಣಿಸದು. ಗಂಡನಿಗೆ ವಯಸ್ಸಾಗಿದೆ. ಇಬ್ಬರು ಹೆಣ್ಣುಗಳು ಮಾನಸಿಕ ಅಸ್ವಸ್ಥರು. ನಿತ್ಯ ಭಿಕ್ಷೆಯೆತ್ತಿದರಷ್ಟೇ ಹೊಟ್ಟೆ ತಂಪು. ಹೀಗಿದ್ದರೂ ಇವರು ಹೊರಗಿನ ಪ್ರಪಂಚಕ್ಕೆ ಅಪರಿಚಿತರು! ಮನೆಯ ಯಜಮಾನ ಭಿಕ್ಷೆಗೆ ಮಾತ್ರ ಹೊರ ಹೋಗುವಾಗ ಪತ್ನಿ ಮತ್ತು ಮಕ್ಕಳನ್ನು ಮನೆಯೊಳಗೆ ಕೂಡಿ ಹಾಕಿ ಬೀಗ ಜಡಿದು ಹೋಗುತ್ತಾನೆ. ಕುರುಡಿ ಪತ್ನಿಗೆ ಹಂದಿಗೂಡಿನಂತಿರುವ ರೂಮೇ ಬದುಕಿನ ಆಲಯ. ಇಂಥ ಕುಟುಂಬವನ್ನು ಹೊರಗಿನ ಪ್ರಪಂಚಕ್ಕೆ ಕರೆತರಬೇಕೆಂಬ ಉದ್ದೇಶದಿಂದ ಅಕ್ಕಪಕ್ಕದವರು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆದು ತಮಗೆ ತಾವೇ ಬಂಧನ ವಿಧಿಸಿಕೊಂಡಿರುವ ಕುಟುಂಬವೊಂದಕ್ಕೆ ಸಹಜ ಬದುಕು ಕಲ್ಪಿಸುವಂತೆ ಮನವಿ ಮಾಡುತ್ತಾರೆ. ಸಾರ್ವಜನಿಕರ ಈ ಮನವಿಯೊಂದಿಗೆ ಶುರುವಾಗುವ ಚಿತ್ರ, ಮುಂದೆ ಆ ಕುಟುಂಬದ ಬಿಡುಗಡೆಯ ಕಥೆಯಾಗುತ್ತದೆ.
ನೈಜ ಕಥೆ ಮತ್ತು ಆ ಕಥೆಯ ನೈಜ ವಾತಾವರಣ ಈ ಚಿತ್ರದ ಹೈಲೈಟ್. ಆದರೆ ಗಂಭೀರವಾದ ಕಥೆಯನ್ನು ಒಳಗೊಂಡಿರುವ ಹಾಗೂ 'ಸಾಮಾಜಿಕ ಸಂದೇಶ' ಚಿತ್ರಗಳು ಎನ್ನುವ ಮಾತಿನ ರೂಪದಂತಿರುವ ಈ ಚಿತ್ರ ತಾಂತ್ರಿಕವಾಗಿ ತುಂಬಾ ಅದ್ಭುತ ಎನ್ನುವಂತಿಲ್ಲ. ತೀರಾ ಸಹಜ ಮತ್ತು ಸರಳ ನಿರೂಪಣೆ. ನಾಲ್ಕೈದು ಮಂದಿ ಓಡಾ ಡುತ್ತ ಮಾತನಾಡುವಂತೆ ಭಾಸವಾಗುತ್ತದೆ. ಪ್ರತಿ ದೃಶ್ಯ, ಪ್ರತಿ ಸಂಭಾಷಣೆಯೂ ನೈಜತೆಯಿಂದ ಕೂಡಿರಬೇಕೆಂಬ ನಿರ್ದೇಶಕಿಯ ಯೋಚನೆಗೆ ತಕ್ಕಂತೆ ಈ ಚಿತ್ರ ಮೂಡಿಬಂದಿದೆ.
ಅಸಹಾಯಕತೆ, ಬಡತನ, ಅನಕ್ಷರತೆಯಿಂದ ತಮಗೆ ತಾವೇ ಬಂಧನದ ಬೇಡಿ ಹಾಕಿಕೊಂಡಿರುವ ಈ ಕುಟುಂಬದ ಜಾಗದಲ್ಲಿ ಇರಾನ್ ಸೇರಿದಂತೆ ಜಗತ್ತಿನ ಯಾವುದೇ ತೃತೀಯ ರಾಷ್ಟ್ರಗಳ ಕೌಟುಂಬಿಕ ಜೀವನ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬಹುದು. ಬಹುಶಃ ನಿರ್ದೇಶಕಿ ಸಮಿರಳ ಉದ್ದೇಶವೂ ಇದೇ ಆಗಿರಬಹುದೇನೋ? ಇಡೀ ಕುಟುಂಬಕ್ಕೆ ಹೊರಗಿನ ಪ್ರಪಂಚದ ಬದುಕಿಗೆ ತೆರೆದುಕೊಳ್ಳುವಂಥ ಮಾಡುವ ಸಾಮಾಜಿಕ ಕಾರ್ಯಕರ್ತೆಯ ಪಾತ್ರವನ್ನು ಚಿತ್ರದಲ್ಲಿ ನೋಡಿದಾಗ ಬಡತನದ ಕಾರಣಕ್ಕಾಗಿ ಮುಖ್ಯವಾಹಿನಿಯ ಬದುಕಿನಿಂದ ವಂಚಿತರಾಗಿರುವ ಕುಟುಂಬಗಳಿಗೆ ದಾರಿ ತೋರುವವರು ಎಲ್ಲ ಕಾಲಕ್ಕೂ, ಎಲ್ಲ ದೇಶಗಳಿಗೂ ಅಗತ್ಯವಿದೆ. ಹದಿನೆಂಟಕ್ಕೂ ಹೆಚ್ಚು ಚಿತ್ರೋತ್ಸವಗಳ ವಿವಿಧ ವಿಭಾಗಗಳ ಪ್ರಶಸ್ತಿಗೆ ನಾಮನಿರ್ದೇಶನಗೊಂಡ 'ದಿ ಅ್ಯಪಲ್' ಚಿತ್ರ ಒಂದು ಕುಟುಂಬದ ಕಥೆಯಲ್ಲ.
- ಆರ್. ಕೇಶವಮೂರ್ತಿ
keshavarkm1@gmail.com