ಚಂದ್ರಹಾಸ ಅವರ ನಿರ್ದೇಶನದ 'ಕುಂಭರಾಶಿ' ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ಪೂರ್ಣ ಕುಂಭದಂತೆ ಕಂಡು ಬಂತು. ಚೇತನ್ ಚಂದ್ರ ನಾಯಕನಾಗಿ, ರೂಪಿಕಾ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರದ ನಿರ್ಮಾಪಕರು ನಾಗಮ್ಮ ಸಿದ್ದು ಪಾಟೀಲ್. ವಿಶೇಷ ಅಂದರೆ ಚಿತ್ರದ ಆಡಿಯೋ ಬಿಡುಗಡೆಗೆ ಹಿರಿಯ ನಿರ್ಮಾಪಕ ಎಸ್.ಡಿ. ಅಂಕಲಗಿ ಆಗಮಿಸಿದ್ದರು. ಮೊದಲ ನಿರ್ದೇಶನದ ಚಿತ್ರದ ಆಡಿಯೋ ಬಿಡುಗಡೆ ಅದ್ದೂರಿಯಾಗಿ ನಡೆಯುತ್ತಿರುವುದಕ್ಕೆ ಚಂದ್ರಹಾಸ್ ತುಂಬಾ ಖುಷಿಯಲ್ಲಿದ್ದರು.
ಸಮಾರಂಭದಲ್ಲಿ ಡಾ.ವಿ. ನಾಗೇಂದ್ರ ಪ್ರಸಾದ್, ನಾಗೇಂದ್ರ ಅರಸ್, ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಸೇರಿದಂತೆ ಚಿತ್ರತಂಡವರು ಹಾಜರಿದ್ದರು. 'ಶ್ರೀವತ್ಸರ ಸಂಗೀತ ಸಂಯೋಜನೆಯಲ್ಲಿ ಚಿತ್ರದ ಎಲ್ಲ ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಮೆಲೋಡಿ, ಫೋಕ್, ಡ್ಯೂಯೇಟ್ ಸೇರಿದಂತೆ ಎಲ್ಲ ವರ್ಗದ ಹಾಡುಗಳು ಇಲ್ಲಿವೆ. ನನ್ನ ಚಿತ್ರಕ್ಕೆ ನಾನು ಎಂಥ ಹಾಡುಗಳು ಬೇಕೆಂದು ನಿರೀಕ್ಷೆ ಮಾಡಿದ್ದನೋ ಅದೇ ರೀತಿಯ ಹಾಡುಗಳನ್ನುಕೊಟ್ಟಿದ್ದಾರೆ. ಚಿತ್ರ ಮ್ಯೂಜಿಕಲಿ ಹಿಟ್ ಆಗಲಿದೆ' ಎಂಬುದು ನಿರ್ದೇಶಕರ ನಂಬಿಕೆ. ಚಿತ್ರದ ಕಥೆ ಕೂಡ ತುಂಬಾ ಚೆನ್ನಾಗಿದೆ. ಈಗಿನ ಯುವ ಪೀಳಿಗೆಯನ್ನು ಮೆಚ್ಚಿಸುವ ಚಿತ್ರ ಇದು ಎನ್ನುವುದು ನಿರ್ದೇಶಕರ ವಿವರಣೆ.
ಹಿರಿಯ ನಟ ಗುರುರಾಜ್ ಹೊಸಕೋಟೆ, ಶರತ್ ಲೋಹಿತಾಶ್ವ, ರವಿ ತೇಜ, ಸಿದ್ದುಪಾಟೀಲ್ ಮತ್ತಿತರರು ಚಿತ್ರದ ಪ್ರಮುಖ ಪಾತ್ರಧಾರಿಗಳಾಗಿ ಕಾಣಿಸಿಕೊಂಡಿದ್ದಾರೆ. ಎನ್.ಕೆ.ಸಾಹಿಲ್ ಸಂಭಾಷಣೆ, ಜೈಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ. 'ನಮ್ಮ ನಿರೀಕ್ಷೆಯಂತೆ ಚಿತ್ರ ಮೂಡಿಬಂದಿದೆ. ನಿರ್ದೇಶಕ ಚಂದ್ರಹಾಸ ಅವರು ತುಂಬಾ ಚೆನ್ನಾಗಿ ಚಿತ್ರಕಥೆ ಮಾಡಿಕೊಂಡಿದ್ದರು. ಅವರ ನಿರೀಕ್ಷೆ ಮತ್ತು ಕನಸಿಗೆ ತಕ್ಕಂತೆ ನಾವೆಲ್ಲ ಅಭಿನಯಿಸಿದ್ದೇವೆ. ಹೊಸಬರ ಚಿತ್ರಗಳು ವಿಭಿನ್ನವಾಗಿರುತ್ತವೆ ಎಂಬುದನ್ನು ಮತ್ತೊಮ್ಮೆ ನಿಜ ಮಾಡುವಂಥ ಚಿತ್ರ ಇದು. ಒಳ್ಳೆಯ ಚಿತ್ರ ಕೊಟ್ಟ ನಿರ್ದೇಶಕರಿಗೆ ಹಾಗೂ ತುಂಬಾ ಚೆನ್ನಾಗಿ ಸಂಗೀತ ನೀಡಿರುವ ಶ್ರೀವತ್ಸರಿಗೆ ಚಿತ್ರದ ಕ್ರೆಡಿಟ್ಟು ಸಲ್ಲಬೇಕು' ಎಂಬುದು ನಾಯಕ ಚೇತನ್ ಚಂದ್ರ ಅಭಿಪ್ರಾಯ. ನಿರ್ದೇಶಕರು ಹೇಳಿದಂತೆ ಚಿತ್ರದಲ್ಲಿ ಪಾತ್ರ ಮಾಡಿದ್ದೇನೆ. ಪ್ರೇಕ್ಷಕರಿಗೆ ನಮ್ಮ ಚಿತ್ರ ಇಷ್ಟವಾಗಲಿದೆ ಎಂಬುದು ರೂಪಿಕಾರ ಮಾತು. ಹಿರಿಯ ನಿರ್ಮಾಪಕ ಎಸ್.ಡಿ. ಅಂಕಲಗಿ ಹಾಗೂ ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಚಿತ್ರತಂಡಕ್ಕೆ ಶುಭ ಕೋರಿದರು. 'ಹೊಸಬರಾದರೂ ತುಂಬಾ ಉತ್ಸಾಹದಿಂದ ಚಿತ್ರ ಮಾಡಿದ್ದಾರೆ. ಹೊಸರೊಂದಿಗೆ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ' ಎಂದರು ನಾಗೇಂದ್ರ ಪ್ರಸಾದ್.