ಕಡ್ಡಿಪುಡಿಯ ಬಿಡಿ ಬಿಡಿ ಕತೆಗಳು

ಶಿವರಾಜ್ಕುಮಾರ್, ರಾಧಿಕಾ ಪಂಡಿತ್ ಅಭಿನಯದ 'ಕಡ್ಡಿಪುಡಿ' ಚಿತ್ರ ಸೆನ್ಸಾರ್ ಬಾಗಿಲು ತಟ್ಟಿದೆ. ಬಿಡುಗಡೆಯ ಎಲ್ಲ ಸಿದ್ಧತೆಗಳೂ ಆಗಿದ್ದರೂ ಸೆನ್ಸಾರ್ ಆಗಿಲ್ಲವಾದ್ದರಿಂದ ಬಿಡುಗಡೆಯ ದಿನಾಂಕ ಹೇಳುವಂತಿಲ್ಲ, ಆದರೆ ಹೇಳುವಂಥ ಕೆಲವು ಮಾತುಗಳಿವೆ ಎಂಬ ಕಾರಣಕ್ಕೆ ಒಂದು ಪತ್ರಿಕಾಗೋಷ್ಟಿ ಕರೆದಿದ್ದೇವೆ ಎಂದರು ನಿರ್ದೇಶಕ ಸೂರಿ. ಅವರ ಜೊತೆಗೆ ಚಿತ್ರದ ಅವಿಭಾಜ್ಯ ಅಂಗಗಳಾದ ಅವಿನಾಶ್, ರಂಗಾಯಣ ರಘು, ನಿರ್ಮಾಪಕ ಚಂದ್ರು, ಸಂಗೀತ ನಿರ್ದೇಶಕ ಹರಿಕೃಷ್ಣ ಅಲ್ಲದೆ, ಕಥೆ, ಚಿತ್ರಕಥೆ, ಸಂಭಾಷಣೆಯ ವಿಭಾಗದಲ್ಲಿ ಈ ಚಿತ್ರಕ್ಕೆ ಕೆಲಸ ಮಾಡಿರುವ ನಟರಂಗ ರಾಜೇಶ್ ಮತ್ತು ಬಾಲ್ಪೆನ್ ಕಥೆಗಾರ ಮಂಜುನಾಥ್ ಕೂಡ ಹಾಜರಿದ್ದರು.
ರೌಡಿಸಂ ಬಿಟ್ಟ ಒಬ್ಬ ಮನುಷ್ಯನ ಮುಂದಿರುವ ಗೊಂದಲಗಳು. ಬಿಟ್ಟು ಬದುಕುವ ಅವನ ಪ್ರಯತ್ನ ಮತ್ತು ರೌಡಿಸಂ ಬಿಟ್ಟು ಬದುಕಲು ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಗಳು ಕಡ್ಡಿಪುಡಿಯಲ್ಲಿವೆ ಎಂದರು ಸೂರಿ. ಆದರೆ ಚಿತ್ರದಲ್ಲಿ ಶಿವಣ್ಣ ರೌಡಿಸಂನಲ್ಲಿ ತೊಡಗಿಕೊಂಡ ದಿನಗಳ ಚಿತ್ರಣವೂ ಇರಲಿದೆಯಂತೆ ಎಂಬುದು ಅಭಿಮಾನಿಗಳಿಗೆ ಖುಷಿ ಕೊಡಬಲ್ಲ ವಿಷಯ.
ನಟ ಅವಿನಾಶ್ ಪ್ರಕಾರ ಕಡ್ಡಿಪುಡಿ ರಿಯಲಿಸ್ಟಿಕ್ ಅಲ್ಲದಿದ್ದರೂ ಜೀವನಕ್ಕೆ ತುಂಬಾ ಹತ್ತಿರವಾದ ಚಿತ್ರವಂತೆ.
ಇದು ಕಡ್ಡಿಪುಡಿ ಅಥವಾ ಆನಂದ್ ಎಂಬ ಒಬ್ಬ ವ್ಯಕ್ತಿಯ ಎರಡು ಪ್ರಮುಖ ಘಟ್ಟಗಳ ಕಥೆ ಹೇಳುವ ಚಿತ್ರ ಎನ್ನುವುದು ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡಿರುವ ರಾಜೇಶ್ ಅವರ ವಿವರಣೆ.
ಸಿನಿಮಾದ ಹಾಡುಗಳ ಬಗ್ಗೆ ಮಾತನಾಡುತ್ತಾ, 'ನನಗೆ ಮೊದಲಿನಿಂದಲೂ ಈ ಚಿತ್ರಕ್ಕೆ ನಿರ್ದೇಶಕ ಸೂರಿ 'ಜಾಕಿ', 'ಅಣ್ಣಾಬಾಂಡ್' ರೀತಿಯ ಹಾಡುಗಳನ್ನು ಯಾಕೆ ಕೇಳುತ್ತಿಲ್ಲ ಎಂಬ ಗೊಂದಲವಿತ್ತು. ಅಲ್ಲದೆ ಬಹಳ ವಿಭಿನ್ನವಾಗಿರುವ ಹಾಡುಗಳಿರುವ ಈ ಚಿತ್ರದ ಆಡಿಯೋ ಮಾರ್ಕೆಟ್ ಬಗ್ಗೆಯೂ ಅನುಮಾನಗಳಿದ್ದವು. ಆದರೆ, ಒಮ್ಮೆ ಸಿನಿಮಾ ನೋಡಿದ ಮೇಲೆ ನನಗೆ ಎಲ್ಲವೂ ಅರ್ಥವಾಗಿ ಹೋಯಿತು. ಇಲ್ಲಿರುವುದು ಕತೆಯನ್ನು ಡಿಸ್ಟರ್ಬ್ ಮಾಡದಂಥ ಹಾಡುಗಳು ಎಂದಿದ್ದು ಸಂಗೀತ ನಿರ್ದೇಶಕ ಹರಿಕೃಷ್ಣ. ಅಂದಹಾಗೆ, ಚಿತ್ರದ 'ಸೌಂದರ್ಯ ಸಮರ' ಹಾಡು ಕ್ಲಿಕ್ ಆಗಿದ್ದರೂ ಕಾಲರ್ ಟ್ಯೂನ್ಗಳಲ್ಲಿ 'ಹೆದರಬ್ಯಾಡ್ರಿ' ಹಾಡು ಗೆದ್ದಿದೆಯಂತೆ. ಹಾಗಾಗಿ ಸಂಗೀತ ಪ್ರಿಯರು ಆಡಿಯೋ ಮಾರ್ಕೆಟಿಂಗ್ ಮಾಡುತ್ತಿರುವ ಹರಿಕೃಷ್ಣ ಅವರಿಗೂ 'ಹೆದರಬ್ಯಾಡ್ರಿ' ಎಂದು ಧೈರ್ಯ ಕೊಟ್ಟಿದ್ದಾರೆ ಎನ್ನಬಹುದು.
ಅಂದಿನ ಪತ್ರಿಕಾಗೋಷ್ಠಿಯಲ್ಲಿ 'ಕಡ್ಡಿಪುಡಿ' ಚಿತ್ರದಲ್ಲಿ ಅನಂತ್ನಾಗ್ ಅವರು ರೌಡಿಸಂ ಬಿಟ್ಟ ಶಿವಣ್ಣನ ಜೊತೆ ಮಾತನಾಡುತ್ತ, 'ರೌಡಿಸಂ ಬಿಟ್ಟು ಸುಮ್ನೆ ಇರ್ತೀನಿ ಅಂದ್ರೆ ಆಗಲ್ಲ, ನಿನ್ನ ಕೈಯಲ್ಲಿ ಏನಾದರೂ ಅಧಿಕಾರ ಇರಬೇಕು, ಸಂಘ ಕಟ್ತೀಯಾ?, ಪತ್ರಿಕೆ ಶುರುಮಾಡ್ತೀಯಾ?' ಎಂದು ಕೇಳುವ ತುಣುಕೊಂದನ್ನು ತೋರಿಸಲಾಯಿತು. ಆ ದೃಶ್ಯವನ್ನು ಹೆಸರಿಸಿದ ಚಿತ್ರತಂಡ ಒಟ್ಟಾರೆಯಾಗಿ ಹೇಳಿದ್ದು ಒಂದೇ ಮಾತು, 'ಇಡೀ ಕಡ್ಡಿಪುಡಿ ಚಿತ್ರದ ಕಥೆಯನ್ನು ಇದೊಂದೇ ದೃಶ್ಯ ಹೇಳುತ್ತದೆ'
-ಹ್ಯಾರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


