

ಇತ್ತೀಚೆಗೆ ತಾನೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿರುವ 'ಟೋಪಿವಾಲಾ' ಚಿತ್ರದ ನಿರ್ದೇಶಕ ಎಂಜಿ.ಶ್ರೀನಿವಾಸ್ ಆಲಿಯಾಸ್ ಫೇಮಸ್ ಆರ್.ಜೆ 'ಬ್ಲೇಡ್ ಶ್ರೀನಿ' ಈಗ ತಮಗೆ ತಾವೇ ಮರುಹುಟ್ಟು ನೀಡುವ ಕಾಯಕದಲ್ಲಿದ್ದಾರೆ. ಅವರ ಈ ಕಾಯಕದ ಹೆಸರು 'ಶ್ರೀನಿವಾಸ ಕಲ್ಯಾಣ'. ಹಾಗಂತ ಇದು ಅವರ ಮದುವೆಯ ವಿಷಯ ಅಲ್ಲ. ಅವರ ಹೊಸ ಚಿತ್ರದ ಹೆಸರಿದು. ಹೌದು, 'ಟೋಪಿವಾಲಾ' ಚಿತ್ರದ ನಂತರದ ಕೆಲವು ದಿನಗಳ ವನವಾಸದ ನಂತರ ಈಗ 'ಶ್ರೀನಿವಾಸ ಕಲ್ಯಾಣ' ಆರಂಭವಾಗಲಿದೆ.
'ಟೋಪಿವಾಲಾ ಚಿತ್ರದ ಸೋಲಿನ ನಂತರ ನಾನು ತುಂಬಾ ಅಪ್‌ಸೆಟ್ ಆಗಿದ್ದೆ. ಕೆಲಸ ಇಲ್ಲ, ದುಡ್ಡಿಲ್ಲ. ಎರಡು ವರ್ಷ ಹೊಡೆದಾಡಿದ ನಂತರ ನಾನು ಕನಿಷ್ಠ ಪಕ್ಷ ಸೊನ್ನೆಯಲ್ಲೂ ಇರಲಿಲ್ಲ. ಅದಕ್ಕಿಂತಲೂ ಕೆಳಗಿಳಿದಿದ್ದೆ. ರೇಡಿಯೋಗೆ ವಾಪಸ್ ಹೋಗಲೂ ಮನಸ್ಸಿರಲಿಲ್ಲ. ನಾನು ಮತ್ತೆ ಸಿನಿಮಾವನ್ನೇ ಮಾಡಬೇಕಿತ್ತು. ನನ್ನ ನಿಜವಾದ ಸ್ನೇಹಿತರು ಯಾರು ಎಂಬುದು ಈಗ ಅರ್ಥವಾಗುತ್ತಿತ್ತು. ಫೇಸ್‌ಬುಕ್‌ನಲ್ಲಿ ಹೊಸ ಸ್ನೇಹಿತರು ಸಿಕ್ಕರು. ಅವರು ಕೊಟ್ಟ ಹೊಸ ಪುಸ್ತಕಗಳನ್ನು ಓದಿದೆ. ಹೊಸ ಕಥೆಗಳನ್ನು ಯೋಚಿಸಿದೆ. ಕೊನೆಗೊಂದು ಕಥೆ ಫೈನಲ್ ಮಾಡಿದೆ. ಈಗ ಒಂದು ಸ್ಟ್ರೈಟ್ ಸಬ್ಜೆಕ್ಟ್ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದೇನೆ. ಈ ಕಥೆಯಲ್ಲಿ ಕೇವಲ ಸೀನ್‌ಗಳಿಲ್ಲ, ಸೋಲ್ ಕೂಡ ಇದೆ. ಸಂಪೂರ್ಣ ಹೊಸ ತಂಡದೊಂದಿಗೆ ಕೆಲಸ ಶುರುಮಾಡಿದ್ದೇನೆ ಎಂಬುದು 'ಶ್ರೀನಿವಾಸ ಕಲ್ಯಾಣ'ಕ್ಕೆ ಶ್ರೀನಿವಾಸ ಅವರ ಮುನ್ನುಡಿ.
ಈ ಚಿತ್ರಕ್ಕೆ ನೀವೇ ಹೀರೋನಾ? ಎಂದರೆ ಹೌದು ಎನ್ನುತ್ತಾರೆ ಶ್ರೀನಿ. ನಾನು ಚಿತ್ರರಂಗಕ್ಕೆ ಬಂದಿದ್ದೇ ನಟನಾಗಬೇಕು ಅಂತ. ನನ್ನ ಟಿಪಿಕಲ್ ಕೈಲಾವ್‌ಸಮ್ ಕಿರುಚಿತ್ರದಲ್ಲೂ ಅಭಿನಯಿಸಿದ್ದೆ. ನಾನು ಇಷ್ಟು ದಿನ ಮಾಡಿದ ಕೆಲಸಗಳು ಮತ್ತು ಅದರಿಂದಾದ ಪರಿಣಾಮಗಳ ಹಿಂದೆಲ್ಲಾ ನಾನು ನಟನಾಗಬೇಕು ಎಂಬ ಉದ್ದೇಶವೇ ಇತ್ತು. ಆದರೆ ಉಪ್ಪಿ ಸಾರ್ ನನಗೆ ನಿರ್ದೇಶನದ ಅವಕಾಶ ಕೊಟ್ಟರು. ಈಗ ಈ ಚಿತ್ರದ ಮಾತುಕತೆ ನಡೆಯುವಾಗ ನನ್ನ ಸಹಾಯಕರೊಬ್ಬರು ನನ್ನ ಕಥಾ ನಿರೂಪಣೆ ಮತ್ತು ಡೈಲಾಗ್ ಹೇಳುವ ಶೈಲಿ ನೋಡಿ, ನೀವೇ ಯಾಕೆ ಅಭಿನಯಿಸಬಾರದು ಅಂತ ಕೆದಕಿದರು, ನನ್ನೊಳಗಿನ ನಟನನ್ನು ಕೆಣಕಿದರು. ಒಂದು ತಿಂಗಳು ಈ ಪಾತ್ರದಲ್ಲಿ ನಾನು ಹೇಗೆ ಕಾಣುತ್ತೇನೆ ಎಂದು ಕಲ್ಪಿಸಿಕೊಂಡ ನಂತರ, ನನಗೂ ಈ ಚಿತ್ರಕ್ಕೆ ನಾನು ಹೊಂದಿಕೊಳ್ಳುತ್ತೇನೆ ಎನಿಸಿದ್ದರ ಫಲವಾಗಿ ನಾನೀಗ ಶ್ರೀನಿವಾಸ ಕಲ್ಯಾಣದ ನಾಯಕ ಎಂಬುದು ಅವರ ಬಿಚ್ಚು ಮಾತು.
ಅಂದಹಾಗೆ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ಮಾರ್ಸ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ರಘು ಥಾಣೆ ಸಂಗೀತ, ಅಶ್ವಿನ್ ಛಾಯಾಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನ ಈ ಚಿತ್ರದ್ದು. ಈ ಎಲ್ಲರೂ ಹೊಸಬರೇ ಎನ್ನುವುದು ವಿಶೇಷ. ಇದನ್ನು ಎರಡು ಭಾಷೆಗಳಲ್ಲಿ ನಿರ್ಮಿಸುವ ಆಸೆ ಶ್ರೀನಿವಾಸ್ ಅವರದ್ದು. ಇದೊಂದು ರೊಮ್ಯಾಂಟಿಕ್ ಕಾಮಿಡಿ ಎನ್ನುವ ಶ್ರೀನಿವಾಸ್‌ರ ಹೊಸ ಚಿತ್ರಕ್ಕೆ ನಟನಾ ತಂಡದ ನಿಖಿಲಾ ರಾವ್ ನಾಯಕಿಯಾಗಿದ್ದು, ಇನ್ನೊಬ್ಬ ನಾಯಕಿಯ ಹುಡುಕಾಟ ನಡೆದಿದೆಯಂತೆ. ಇದಲ್ಲದೆ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಸುರೇಶ್ ಶಾಸ್ತ್ರಿ ಕೂಡ ಇದ್ದಾರೆ.
ಮೋಕ್ಷವನ್ನು ಪಡೆಯಬೇಕು ಎಂಬ ಮನುಷ್ಯನ ಹಪಾಹಪಿಯನ್ನು ಕಮರ್ಷಿಯಲ್ ಆಗಿ ಹೇಳಲು ಯತ್ನಿಸುತ್ತಿದ್ದಾರಂತೆ ಶ್ರೀನಿ. ಮನುಷ್ಯನ ಜೀವನದ ಮೂರು ಘಟ್ಟಗಳು ಇಲ್ಲಿರುತ್ತವಂತೆ. ಉಳಿದಂತೆ ಹಾಲಿವುಡ್ ಸಿನಿಮಾಗಳಿಗೆ ಕೆಲಸ ಮಾಡಿರುವ ಕೆನಡಾದಲ್ಲಿರುವ ಕನ್ನಡಿಗ ಯಶ್ ಗೌಡ ಅವರ ಬಳಿ ವಿಶುವಲ್ ಎಫೆಕ್ಸ್ಟ್ ಮಾಡಿಸುತ್ತಿದ್ದಾರೆ ಶ್ರೀನಿವಾಸ್.
ಟೋಪಿವಾಲಾ ನಂತರ ನನಗೆ ಇದು 'ಇನ್ನೊಂದು ಮೊದಲ ಚಿತ್ರ' ಇದ್ದಂತೆ. ಈ ಚಿತ್ರ ನೋಡಿದ ಎಲ್ಲರಿಗೂ ತಮ್ಮ ಹಳೆಯ ಡವ್‌ಗಳು ನೆನಪಾಗುತ್ತಾರೆ. ಇದೊಂದು ಫಿಲಾಸಫಿಕಲ್ ಕಥೆ. ಆದರೆ ಕಮರ್ಷಿಯಲ್ ನಿರೂಪಣೆ ಎಂದು ತಮ್ಮ ಹೊಸ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತನಾಡುವ ಶ್ರೀನಿವಾಸ್ ಹೊಸ ಹುರುಪಿನಿಂದ ತಮ್ಮ ಹೊಸ ಚಿತ್ರಕ್ಕೆ ಸಜ್ಜಾಗಿದ್ದಾರೆ. ಅವರಿಂದ ಶ್ರೀನಿವಾಸ ಕಲ್ಯಾಣ ಎಂಬ ಟೈಟಲ್‌ನಷ್ಟೇ ಸೊಗಸಾದ ಒಂದು ಹೊಸರೀತಿಯ ಚಿತ್ರ ಬರುತ್ತದೆ ಎಂಬುದು ಅವರ ಮಾತುಗಳನ್ನು ಕೇಳಿದಾಗ ಮೂಡುವ ಅನಿಸಿಕೆ.
- ಹರಿ