

ನವದೆಹಲಿ: ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಚೇರಿ ಮೇಲಿನ ಸಿಬಿಐ ದಾಳಿ ಹಾಗೂ ಡಿಡಿಸಿಎ ಹಗರಣ ಸಂಬಂಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಡುವಿನ ವಾಕ್ಸಮರ ಮುಂದುವರೆದಿದೆ.
ಈ ಸಂಬಂಧ ಇಂದು ದೆಹಲಿ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅರುಣ್ ಜೇಟ್ಲಿ, ಕೇಜ್ರಿವಾಲ್ ಅವರು ಸತ್ಯವನ್ನು ಮರೆ ಮಾಚುತ್ತಿದ್ದು, ಅವರಿಗೆ ಸುಳ್ಳು ಮತ್ತು ಮಾನಹಾನಿಯಲ್ಲಿ ಹೆಚ್ಚು ನಂಬಿಕೆ ಅಂತ ಕಾಣುತ್ತೆ ಎಂದಿದ್ದಾರೆ.
ತಮ್ಮ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ರಕ್ಷಣೆಗೆ ನಿಂತಿರುವ ಕೇಜ್ರಿವಾಲ್ ಅವರು, ಸಿಬಿಐ ದಾಳಿ ವಿಷಯವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಜೇಟ್ಲಿ ವಿರುದ್ಧ ಮತ್ತೆ ಟ್ವೀಟ್ ಮಾಡಿರುವ ಕೇಜ್ರಿವಾಲ್, ನಿಷ್ಪಕ್ಷಪಾತ ತನಿಖೆಗೆ ಕೇಂದ್ರ ಸಚಿವ ಅರುಣ್ ಜೇಟ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೆ ಜೇಟ್ಲಿ ಅವರು ತನಿಖೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.