
ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಕಳೆದುಕೊಂಡ ಅಥ್ಲೀಟ್ ಎಂಬ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿದ ಆಲಿಯಾ ಭಟ್ "ಹಾಗೇ ಆಗಬೇಕು ಅವನಿಗೆ. ಓಡುವಾಗ ಚಿನ್ನಾನ ಮನೇಲಿ ಇಟ್ಟು ಹೋಗೋ ಬದಲು ತಗೊಂಡ್ ಯಾಕೆ ಹೋಗಿದ್ದ?" ಅಂತ ಗೊಣಗಿಕೊಂಡಿದ್ಳಂತೆ. ಇದು ಜೋಕು. ಆದರೆ ಚಿತ್ರ ನಟಿಯೊಬ್ಬಳು ಕುಣಿಯುವಾಗ ಎರಡು ಲಕ್ಷ ಕಳೆದುಕೊಂಡ ಸೀರಿಯಸ್ ಸುದ್ದಿ ಬಾಲಿವುಡ್ಡಿನಿಂದ ಬಂದಿದೆ. ಕಿಕ್ ಏರಿಸೋ ಸುಂದರಿ ಜಾಕ್ವೆಲಿನ್ ಈ ನತದೃಷ್ಟೆ. ಭೂಷಣ್ ಕುಮಾರ್ ನಿರ್ದೇಶನದ 'ರಾಯ್' ಚಿತ್ರಕ್ಕಾಗಿ ರಣಬೀರ್ ಜೊತೆ ಟ್ಯಾಂಗೋ ಡ್ಯಾನ್ಸ್ ಮಾಡುತ್ತಿದ್ದ ಜಾಕ್ವೆಲಿನ್, ಚಿತ್ರತಂಡ ಒದಗಿಸಿದ ಚಪ್ಪಲಿಗಳ ಬದಲು ತಾನೇ ತಂದಿದ್ದ ಬೆಲೆಬಾಳುವ ಹೀಲ್ಸ್ ಧರಿಸಿದ್ದಳಂತೆ. ಹೀಲ್ಸ್ ಹಾಕ್ಕೊಂಡು ಕುಣಿಯೋದೇ ಸಿಕ್ಕಾಪಟ್ಟೆ ರಿಸ್ಕಿ. ಅಂಥಾದ್ರಲ್ಲಿ ಈ ಹುಡುಗೀದು ಹೆವಿ ಇನ್ವಾಲ್ವ್ಮೆಂಟು! ಕಾಲು ಕೀಲು ಮುರಿಯೋ ಬದಲು ಚಪ್ಪಲಿಯ ಹೀಲು ಮುರಿದಿದೆ. ಅದೆಷ್ಟೋ ನಿಜವೋ ಸುಳ್ಳೋ ಆಕೆ ಧರಿಸಿದ್ದ ಚಪ್ಪಲಿಯ ಬೆಲೆ ಎರಡು ಲಕ್ಷವಂತೆ! ಸಿಂಡ್ರೆಲಾ ಹರಾಜಿಗಿಟ್ಟಿದ್ದ ಚಪ್ಪಲಿಯಾ ಅದು ಅಂತ ಕೇಳಂಗಿಲ್ಲ. ಒಟ್ಟಾರೆ ಈ ಬ್ರೇಕಿಂಗ್ ಘಟನೆಯಿಂದ ಅಪ್ಸೆಟ್ ಆದ ಜಾಕ್ವೆಲಿನ್ ಒಂದು ಗಂಟೆ ಬ್ರೇಕ್ ತಗೊಂಡು ನಂತರ ಡ್ಯೂಪ್ ಚಪ್ಪಲಿ ಧರಿಸಿ ಶೂಟ್ ಮುಗಿಸಿದಳಂತೆ. ಮೂಗು ಮೂತಿಗೆಲ್ಲ ವಿಮೆ ಮಾಡಿಸೋ ನಟಿಯರಿಗೆ ಈ ಘಟನೆ ನೋಡಿದ ನಂತರ ತಮ್ಮ ಬಟ್ಟೆ ಮತ್ತು ಪಾದರಕ್ಷೆ ಇತ್ಯಾದಿಗಳಿಗೂ ಇನ್ಶೂರೆನ್ಸ್ ಮಾಡಿಸಬೇಕು ಅನಿಸಿರಲಿಕ್ಕೆ ಸಾಕು!
Advertisement