ಸಿನಿಮಾ ಸುದ್ದಿ

ಕಿರಾತಕ ಸೀಕ್ವೆಲ್ ಯಾವಾಗ? ಮೈ ನೇಮ್ ಇಸ್ ಕಿರಾತಕ ಸಿನಿಮಾ ಬಗ್ಗೆ ಮನದಾಸೆ ಬಿಚ್ಚಿಟ್ಟ ರಾಜಾಹುಲಿ ಯಶ್

ಕಿರಾತಕ ಸೀಕ್ವೆಲ್ ಯಾವಾಗ? ಮೈ ನೇಮ್ ಇಸ್ ಕಿರಾತಕ ಸಿನಿಮಾ ಬಗ್ಗೆ ಮನದಾಸೆ ಬಿಚ್ಚಿಟ್ಟ ರಾಜಾಹುಲಿ ಯಶ್
ಕಿರಾತಕ 2 ಮಾಡುವ ಆಸೆ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ — Online Desk
Published On :

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಕಿರಾತಕ ಸಿನಿಮಾ ಮೂಲಕ ಮಂಡ್ಯದ ಭಾಷೆಯ ಸೊಗಡು ಮತ್ತು ಹಾಸ್ಯದ ಕಚಗುಳಿ ಇಟ್ಟು ಅಭಿಮಾನಿಗಳ ಮನಗೆದ್ದಿದ್ದ ರಾಕಿಂಗ್ ಸ್ಟಾರ್ ಯಶ್, ಇದೀಗ ತಮ್ಮ ಸೂಪರ್ ಹಿಟ್ ಚಿತ್ರದ ಸೀಕ್ವೆಲ್ ಬಗ್ಗೆ ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ 'ರಾಜಾಹುಲಿ', ಕಿರಾತಕ ಚಿತ್ರದ ಮುಂದುವರಿದ ಭಾಗವನ್ನು ಮಾಡುವ ಆಸೆ ತಮಗಿದೆ ಎಂದು ಹಂಚಿಕೊಂಡಿದ್ದಾರೆ. ಹಿಂದೆ ಈ ಚಿತ್ರದ ಸ್ಕ್ರಿಪ್ಟ್ ಸಿದ್ಧವಾಗಿ ಚಿತ್ರೀಕರಣವೂ ಆರಂಭವಾಗಿತ್ತು, ಆದರೆ 'ಕೆಜಿಎಫ್' ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ಆ ಪ್ರಾಜೆಕ್ಟ್ ತಾತ್ಕಾಲಿಕವಾಗಿ ನಿಂತುಹೋಗಿತ್ತು. ಇದೀಗ ಸ್ವತಃ ಯಶ್ ಅವರೇ ಸೀಕ್ವೆಲ್ ಬಗ್ಗೆ ಮಾತನಾಡಿರುವುದು ಸಿನಿಪ್ರಿಯರಲ್ಲಿ ಹಾಗೂ ಅಭಿಮಾನಿಗಳಲ್ಲಿ 'ಕಿರಾತಕ 2' ಯಾವಾಗ ಸೆಟ್ಟೇರಲಿದೆ ಎಂಬ ಹೊಸ ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ. ಆ ಕುರಿತ ವರದಿ ಇಲ್ಲಿದೆ:

'ಕಿರಾತಕ 2' ಬಗ್ಗೆ ಯಶ್ ಹೇಳಿದ್ದೇನು?

ರಾಮಾಯಣ ಸಿನಿಮಾದ ಪ್ರಚಾರದ ಸಂದರ್ಶನದಲ್ಲಿ, ನಿರೂಪಕಿ ಯಾವ ಪಾತ್ರಕ್ಕೆ ಪ್ರಿಕ್ವೆಲ್ ಅಥವಾ ಸ್ಪಿನ್ ಆಫ್ ಬರಬೇಕು ಅಂತ ಕೇಳಿದಾಗ, ಸಾಯಿ ಪಲ್ಲವಿ ಗಾರ್ಗಿ ಹೆಸರು ಹೇಳಿದರೆ, ಯಶ್ ಕಿರಾತಕ ಹೆಸರು ಹೇಳಿದ್ದಾರೆ. "ನಾನು ಕಿರಾತಕ ಸಿನಿಮಾ ಮಾಡಿದ್ದೆ. ವಾಸ್ತವವಾಗಿ ಅದರ ಸೀಕ್ವೆಲ್ ಮಾಡಬೇಕು ಎಂದುಕೊಂಡಿದ್ದೆ. ಅದಕ್ಕಾಗಿ ಸ್ಕ್ರಿಪ್ಟ್ ಕೂಡ ಬರೆದಿದ್ದೆವು ಮತ್ತು ಚಿತ್ರೀಕರಣವನ್ನೂ ಆರಂಭಿಸಿದ್ದೆವು. ಅದನ್ನು ಮಾಡಲು ನನಗೆ ತುಂಬಾ ಇಷ್ಟ. ಅದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ಸಿನಿಮಾ" ಎಂದು ಉತ್ತರಿಸಿದ್ದಾರೆ.

ಅರ್ಧಕ್ಕೆ ನಿಂತ ಸಿನಿಮಾ!

2011ರಲ್ಲಿ ತೆರೆಕಂಡಿದ್ದ ಕಿರಾತಕ ಸಿನಿಮಾ ಯಶ್ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಭದ್ರ ಬುನಾದಿ ಹಾಕಿಕೊಟ್ಟಿತ್ತು. ಅದರಂತೆ, ಕೆಜಿಎಫ್ ಚಾಪ್ಟರ್ 1' ಚಿತ್ರೀಕರಣ ಮುಗಿದ ಬೆನ್ನಲ್ಲೇ 2018ರಲ್ಲಿ ನಿರ್ದೇಶಕ ಅನಿಲ್ ಕುಮಾರ್ ('ರಾಂಬೋ 2' ಖ್ಯಾತಿ) ನಿರ್ದೇಶನದಲ್ಲಿ 'ಮೈ ನೇಮ್ ಇಸ್ ಕಿರಾತಕ' ಹೆಸರಿನಲ್ಲಿ ಸಿನಿಮಾ ಆರಂಭವಾಗಿತ್ತು. ಯಶ್ ತಮ್ಮ ಉದ್ದನೆಯ ಗಡ್ಡಕ್ಕೆ ಕತ್ತರಿ ಹಾಕಿ ಸುಮಾರು 20 ದಿನಗಳ ಕಾಲ ಚಿತ್ರೀಕರಣದಲ್ಲೂ ಭಾಗವಹಿಸಿದ್ದರು.

ಆದರೆ 'ಕೆಜಿಎಫ್ 1' ದೇಶಾದ್ಯಂತ ಐತಿಹಾಸಿಕ ಯಶಸ್ಸು ಕಂಡು, 'ಕೆಜಿಎಫ್ 2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾದ ಕಾರಣ ಯಶ್ ಈ ಸಿನಿಮಾವನ್ನು ತಾತ್ಕಾಲಿಕವಾಗಿ ಮುಂದೂಡಿದ್ದರು. ಏತನ್ಮಧ್ಯೆ, ಯಶ್ ಅವರು ಕಥೆಯನ್ನು ಯಾರಿಗೂ ಕೊಡದಂತೆ ನಿರ್ದೇಶಕರಿಗೆ ತಿಳಿಸಿದ್ದು, ಮುಂದೆ ಖಂಡಿತವಾಗಿಯೂ ಈ ಸಿನಿಮಾ ಮಾಡುವ ಭರವಸೆ ನೀಡಿದ್ದಾರೆ. ಆದರೆ, ಚಿತ್ರ ಯಾವಾಗ ಪುನರಾರಂಭವಾಗಲಿದೆ ಅಥವಾ ಬಿಡುಗಡೆಯಾಗಲಿದೆ ಎಂಬ ಬಗ್ಗೆ ಯಾವುದೇ ನಿಖರ ದಿನಾಂಕ ಇನ್ನೂ ಪ್ರಕಟವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.