

ಸ್ಯಾಂಡಲ್ ವುಡ್ ನ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ನಟಿಸಲು ಅವಕಾಶ ಸಿಕ್ಕಿದರೆ ಯಾರು ಬಿಡ್ತಾರೆ ಹೇಳಿ, ನಾಗತಿಹಳ್ಳಿ ಅವರ ಸಿನಿಮಾದಲ್ಲಿ ಒಂದು ಚಾನ್ಸ್ ಸಿಕ್ಕಿದರೆ ಸಾಕು ಅಂತಾ ಕಾಯುವವರು ಅದೆಷ್ಟು ಮಂದಿ ಇಲ್ಲ? ಕಿರಿತೆರೆ ದಾರಾವಾಹಿ ಅಗ್ನಿಸಾಕ್ಷಿ ನಟ ವಿಜಯ್ ಸೂರ್ಯ ಹಾಗೂ ಅಶ್ವಿನಿ ನಕ್ಷತ್ರದ ಮಯೂರಿಗೆ ನಾಗತಿಹಳ್ಳಿ ಚಂದ್ರಶೇಖರ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ನಿಗದಿಯಾಗಿರುವ ಎಲ್ಲಾ ಕಾರ್ಯಕ್ರಮಗಳನ್ನೂ ಎರಡು ತಿಂಗಳೊಳಗೆ ಪೂರ್ಣಗೊಳಿಸಲಿದ್ದು, 50 ದಿನಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರ ನಿರ್ದೇಶನದಲ್ಲಿ ನಟಿಸಲೆಂದೇ ಮೀಸಲಿಟ್ಟಿದ್ದಾರೆ ಮಯೂರಿ ಹಾಗೂ ವಿಜಯ್ ಸೂರ್ಯ. ಕಾವ್ಯಾ ಶೆಟ್ಟಿ ಕೂಡಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಹೊಸ ಸಿನಿಮಾಗೆ ಇನ್ನೂ ಹೆಸರಿಟ್ಟಿಲ್ಲ.
ನಾಗತಿಹಳ್ಳಿ ಚಂದ್ರಶೇಖರ್ 2 ವರ್ಷಗಳ ನಂತರ ನಿರ್ದೇಶನ ಮಾಡುತ್ತಿದ್ದು, ವಿನೂತನ ಪ್ರೇಮಕಥೆಯನ್ನು ಸಿನಿಮಾ ಮಾಡುತಿರುವುದಾಗಿ ತಿಳಿಸಿದ್ದಾರೆ. ದೊಡ್ಡೇರಿ ವೆಂಕಟಗಿರಿ ರಾವ್ ಅವರು ಬರೆದಿದ್ದ 1980 ರ ಪ್ರಖ್ಯಾತ ಇಷ್ಟಕಾಮ್ಯ ಎಂಬ ಕಾದಂಬರಿ ಕಥೆಯನ್ನಾಧರಿಸಿ ಈ ಸಿನಿಮಾ ತಯಾರಾಗುತ್ತಿದೆ. ಈ ಕಥೆ ಇಂಗಿದೂ ಪ್ರಸ್ತುತವಾಗಿದ್ದು, ಸುಧಾ ನಿಯತಕಾಲಿಕದಲ್ಲಿ ಈ ಕಥೆಯನ್ನು ದಾರಾವಾಹಿಯಾಗಿ ಪ್ರಕಟಿಸಲಾಗಿತ್ತು. ಸೆಪ್ಟೆಂಬರ್ ವೇಳೆಗೆ ಚಿತ್ರೀಕರಣ ಪ್ರಾರಂಭವಾಗಲಿದ್ದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಚಿತ್ರೀಕರಣ ನಡೆಯಲಿದೆ. 35 ವರ್ಷಗಳಷ್ಟು ಹಳೆಯದಾದ ತಮ್ಮ ಸ್ನೇಹಿತನ ಎಸ್ಟೇಟ್ ನಲ್ಲಿ, ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಣ ನಡೆಸುತ್ತೇನೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.
ನಿರ್ದೇಶನ ಮಾಡದೇ ಇದ್ದ 2 ವರ್ಷಗಳ ಅವಧಿಯಲ್ಲಿ ರೀಮೇಕ್ ಮಾಡುವಂತೆ ಹಲವು ಅವಕಾಶಗಳು ಬಂದಿತ್ತಾದರೂ ರೀಮೇಕ್ ಗೆ ವಿರುದ್ಧವಾಗಿರುವುದರಿಂದ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಶಂಕರೆ ಗೌಡ ನಿರ್ಮಾಪಕರಾಗಿದ್ದು, ತಮ್ಮೊಂದಿಗೆ ಸಿನಿಮಾ ಮಾಡಲು ಕಳೆದ 2 ವರ್ಷಗಳಿಂದ ಕಾಯುತ್ತಿದ್ದರು ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ. ಇಷ್ಟ ಕಾಮ್ಯ ಕಾದಂಬರಿಯನ್ನು ಓದಿದವರನ್ನು ತಮ್ಮ ಸಿನಿಮಾಗೆ ಸೂಕ್ತ ಹೆಸರು ನೀಡುವಂತೆಯೂ ಚಿತ್ರ ಪ್ರೇಮಿಗಳಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಫೇಸ್ ಬುಕ್ ಮೂಲಕ ಮನವಿ ಮಾಡಿದ್ದಾರೆ.