

ಬೆಂಗಳೂರು: ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸುವ 100 ಪ್ರಭಾವಿಗಳ ಪಟ್ಟಿಯಲ್ಲಿ ನಟರಾದ ಪುನೀತ್ ರಾಜ್‌ಕುಮಾರ್ ಹಾಗೂ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ಐವರು ಸ್ಥಾನ ಪಡೆದಿದ್ದಾರೆ.
ಮನರಂಜನೆ, ಕ್ರೀಡೆ ಹಾಗೂ ಉದ್ಯಮಕ್ಕೆ ಸಂಬಂಧಿಸಿದ ವರ್ಷದ ಪ್ರಭಾವಿ 100 ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸುತ್ತದೆ. ಅದರಲ್ಲಿ ಈ ಬಾರಿ ಕನ್ನಡ ಚಿತ್ರರಂಗದ ಪುನೀತ್, ಸುದೀಪ್, ಪ್ರಿಯಾಮಣಿ, ಸಂಗೀತ ನಿರ್ದೇಶಕ ಹಾಗೂ ಗಾಯಕ ರಘು ದೀಕ್ಷಿತ್, ಗಾಯಕ ವಿಜಯ್ ಪ್ರಕಾಶ್ ಅವರು ಸ್ಥಾನ ಪಡೆದಿದ್ದಾರೆ.
ಡಿಸೆಂಬರ್ 11ರಂದು ಫೋರ್ಬ್ಸ್‌ನ 100 ಪ್ರಭಾವಿಗಳ ಪಟ್ಟಿ ಅಧಿಕೃತವಾಗಿ ಪ್ರಕಟವಾಗಲಿದ್ದು, ಅಂದು ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದು ತಿಳಿಯಲಿದೆ.
2013ರಲ್ಲಿ ಪ್ರಕಟವಾದ ಫೋರ್ಬ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಸುದೀಪ್ ಹಾಗೂ ದರ್ಶನ್ 62 ಮತ್ತು 65ನೇ ಸ್ಥಾನ ಪಡೆದಿದ್ದರು. ಆದರೆ 2014ರಲ್ಲಿ ಕನ್ನಡದ ಯಾವುದೇ ನಟ, ನಟಿಯರು ಸ್ಥಾನ ಪಡೆದಿರಲಿಲ್ಲ.