

ಧನಂಜಯ್ ಅಭಿನಯದ ಬಾಕ್ಸರ್ ಚಿತ್ರ ನ.20 ರಂದು ಬಿಡುಗಡೆಯಾಗಲಿದ್ದು, ಚಿತ್ರದ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ನಟ ಧನಂಜಯ್. ಬಾಕ್ಸರ್ ಗಾಗಿ ಧನಂಜಯ್ ಒಂದು ವರ್ಷ ಶ್ರಮಪಟ್ಟಿದ್ದು, ಭಾವನೆಗಳಿಗಿಂತ ಕಾರ್ಯಕ್ಷಮತೆ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ ಎಂಬುದನ್ನು ಚಿತ್ರೀಕರಣದ ಅವಧಿಯಲ್ಲಿ ಮನದಟ್ಟಾಗಿದೆ ಎಂದು ಧನಂಜಯ್ ಹೇಳಿದ್ದಾರೆ.
ಬಾಕ್ಸಿಂಗ್ ಕ್ರೀಡೆಯನ್ನು ಕಥಾವಸ್ತುವಾಗಿಟ್ಟುಕೊಂಡಿರುವ ಚಿತ್ರದಲ್ಲಿ ಅಭಿನಯಿಸಲು ಮಾನಸಿಕವಾಗಿ ಹಾಗೂ ದೈಹಿಕವಾಗಿ ಪಾತ್ರದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳಬೇಕಾಗುತ್ತದೆ. ಪಾತ್ರಕ್ಕೆ ತಕ್ಕಂತಕೆ ತಯಾರಾಗಲು ಸತತ ಒಂದು ವರ್ಷ ಶ್ರಮಿಸಿದ್ದೇನೆ. ಆರು ತಿಂಗಳುಗಳ ಕಾಲ ಬಾಕ್ಸಿಂಗ್ ತರಬೇತಿ ಪಡೆದಿದ್ದು, ಪ್ರೇಕ್ಷಕರ ಪ್ರತಿಕ್ರಿಯೆಗೆ ಕಾತುತರಾಗಿದ್ದೇನೆ ಎಂದಿದ್ದಾರೆ ಧನಂಜಯ್.
ಪ್ರೀತಿ ಹಾಗು ಬಾಕ್ಸಿಂಗ್ ಎರಡನ್ನೂ ಹೊಂದಿರುವ ಚಿತ್ರದಲ್ಲಿ ಧನಂಜಯ್ ಓರ್ವ ಸಾಮಾನ್ಯ ಬಾಕ್ಸರ್ ನ ಪಾತ್ರದಲ್ಲಿ ನಟಿಸಿದ್ದಾರೆ. ಬೆಂಗಳೂರಿನಲ್ಲೇ ನಡೆಯುವ ಘಟನೆ ಚಿತ್ರಕಥೆಯಾಗಿದ್ದು, ನಗರದಲ್ಲಿ ಬಾಕ್ಸಿಂಗ್ ಗೆ ಇರುವ ಜನಪ್ರಿಯತೆ ಚಿತ್ರೀಕರಣದ ವೇಳೆಯಲ್ಲಷ್ಟೇ ತಿಳಿಯಿತು. ಬಹುಶಃ, ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡೆಯಾಗಿರುವುದರಿಂದ ಅತಿ ಹೆಚ್ಚು ಸದ್ದು ಮಾಡುವುದಿಲ್ಲ ಎಂದು ಧನಂಜಯ್ ಅಭಿಪ್ರಾಯಪಟ್ಟಿದ್ದಾರೆ.
"ಚಿತ್ರೀಕರಣದ ವೇಳೆ, ಸ್ವಿಡನ್ ನ ಬಾಕ್ಸರ್ ರೋನ್ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತ್ತು. ರೋನ್ ಜಾಕಿ ಚಾನ್ ಅವರೊಂದಿಗೆ ನಟಿಸಿದ್ದಾರೆ, ಮೊದಲನೇ ಬಾರಿಗೆ ರೋನ್ ಅವರನ್ನು ಭೇಟಿ ಮಾಡಲು ಸಿದ್ಧನಿರಲಿಲ್ಲ. ಆದರೆ ನಂತರದ ದಿನಗಳಲ್ಲಿ ಚಿತ್ರೀಕರಣಕ್ಕಾಗಿ ಒಂದು ತಿಂಗಳು ತರಬೇತಿ ನೀಡಿದರು. ಸ್ವತಃ ರೋನ್ ಅವರೂ ಮೊದಲ ಬಾರಿಗೆ ಜಾಕಿ ಚಾನ್ ಅವರನ್ನು ಭೇಟಿ ಮಾಡಲು ಒಪ್ಪಿರಲಿಲ್ಲವಂತೆ ಎಂದು ಧನಂಜಯ್ ಹೇಳಿದ್ದಾರೆ.
ಒಟ್ಟಾರೆ ಬಾಕ್ಸರ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಯಶಸ್ವಿ ನಟನಾಗುವ ನಿರೀಕ್ಷೆಯಲ್ಲಿದ್ದಾರೆ ಧನಂಜಯ್