
ಬೆಂಗಳೂರು: ಕುಡಿದ ಮತ್ತಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಜೊತೆ ಜೊತೆ ಅನುಚಿತವಾಗಿ ವರ್ತಿಸಿದ್ದ ಟಿವಿ ಧಾರಾವಾಹಿ ನಟನೋರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.
ಖ್ಯಾತ ಧಾರಾವಾಹಿ ಪುಟ್ಟಗೌರಿ ಮದುವೆ ಧಾರಾವಾಹಿಯ ಮಹೇಶ್ ಖ್ಯಾತಿಯ ಕಿರುತೆರೆ ನಟ ರಕ್ಷಿತ್ ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಕಾರು ಚಲಾಯಿಸುತ್ತಿದ್ದರು. ಈ ವೇಳೆ ಕಾರನ್ನು ನಿಲ್ಲಿಸಿದ ಪೊಲೀಸರು ರಕ್ಷಿತ್ ನನ್ನು ಮದ್ಯಪಾನ ಮಾಡಿದ ಕುರಿತು ತಪಾಸಣೆ ಮಾಡಲು ಮುಂದಾದರು. ಈ ವೇಳೆ ರಕ್ಷಿತ್ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೆ ಕಲಾಸಿಪಾಳ್ಯ ಪೊಲೀಸ್ ಠಾಣೆಯ ಎಸ್ ಐ ನಾಗರಾಜ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. "ರೀ...ನಾನ್ಯಾರು ಅಂತ ಗೊತ್ತೇನ್ರಿ ಅಂತ ರಕ್ಷಿತ್ ಎಸ್ ಐಗೆ ಅವಾಜ್ ಹಾಕಿದ್ದು, ವಾಗ್ವಾದದ ಬಳಿಕ ಪೊಲೀಸರು ನಟ ರಕ್ಷಿತ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕಲಾಸಿಪಾಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ರಕ್ಷಿತ್ ವಿರುದ್ಧ ಮದ್ಯಪಾನ ಮಾಡಿ ಕಾರು ಚಾಲನೆ ಮಾಡಿದ ಆರೋಪ ಮತ್ತು ಕರ್ತವ್ಯನಿರತ ಪೊಲೀಸ್ ಅಧಿಕಾರಿಯೊಂದಿಗೆ ಅನುಚಿತರ ವರ್ತನೆ ಕುರಿತಂತೆ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುವ ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿ ನಟ ರಕ್ಷಿತ್ ಅವರು ಮಹೇಶ್ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಇದೀಗ ಪುಟ್ಟಗೌರಿ ಮದುವೆ ಸೀರಿಯಲ್ ನಟ ರಕ್ಷಿತ್ ಪೊಲೀಸರ ಅತಿಥಿಯಾಗಿದ್ದಾರೆ.
Advertisement