

ತಮ್ಮ ವಿಶಿಷ್ಟ ಧ್ವನಿಯಿಂದಲೇ ಎದುರು ನಿಂತ ಹೀರೋಗಳ ಮೈ ಬೆವರು ಇಳಿಸುವ ಖದರ್ಫುಲ್ ಖಳನಾಯಕ ರವಿಶಂಕರ್. ಸದ್ಯ ಈ ರವಿಶಂಕರ್ ಇತ್ತೀಚೆಗೆ ಚಿತ್ರವೊಂದರಲ್ಲಿ ವಿಶೇಷ ಪಾತ್ರವನ್ನು ಮಾಡಿದ್ದಾರೆ.
ಓಂ ಸಾಯಿಪ್ರಕಾಶ್ ನಿರ್ದೇಶನದ, ಬಂಗಾರು ಹನುಮಂತು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ `ಮನಮೆಚ್ಚಿದ ಬಂಗಾರು' ಚಿತ್ರದಲ್ಲಿ ಹೆಣ್ಣಿನ ಪಾತ್ರದಲ್ಲಿ ರವಿಶಂಕರ್ ಕಾಣಿಸಿಕೊಂಡಿದ್ದಾರೆ! ಈ ಪಾತ್ರಕ್ಕಾಗಿ ಅತಿ ಹೆಚ್ಚು ಸಂಭಾವನೆ ಕೊಟ್ಟಿರುವುದು ಚಿತ್ರತಂಡದ ಹೆಗ್ಗಳಿಕೆ. ಅಂದಹಾಗೆ ಇಲ್ಲಿ ರವಿಶಂಕರ್ ಅವರ ಪಾತ್ರದ ಹೆಸರು, ಮಹಾರಾಣಿ. ವಿಶೇಷವಾದ ತಯಾರಿ ಮಾಡಿಕೊಂಡೇ ಈ ಪಾತ್ರವನ್ನು ಮಾಡಿಸಲಾಗಿದ್ದು, ಇಡೀ ಚಿತ್ರಕ್ಕೆ ರವಿಶಂಕರ್ ಅವರ ಈ ಗೆಟಪ್ ಹೈಲೈಟ್ ಆಗಿ ಉಳಿದುಕೊಳ್ಳುತ್ತದೆ ಎಂಬುದು ನಿರ್ದೇಶ ಓಂ ಸಾಯಿಪ್ರಕಾಶ್ ಅವರ ಮಾತು.
`ನಾನು ತುಂಬಾ ಇಷ್ಟಪಟ್ಟು ಈ ಪಾತ್ರ ಮಾಡಿದ್ದೇನೆ. ಈ ಹಿಂದೆ ಯಾವತ್ತೂ ಇಂಥ ಪಾತ್ರ ಮಾಡಿರಲಿಲ್ಲ. ಮುಂದೆ ಮಾಡುತ್ತೇನೋ ಇಲ್ಲವೋ ಗೊತ್ತಿಲ್ಲ. ನಾನು ಚಿತ್ರದಲ್ಲಿ ಮಹಾರಾಣಿಯಾಗಿ ಕಾಣಿಸಿಕೊಂಡಿದ್ದೇನೆ ಅಂದರೆ ನನಗೇ ನಗು ಬರುತ್ತದೆ. ಸಿನಿಮಾ ನೋಡಿ ನಿಮಗೂ ಇಷ್ಟವಾಗುತ್ತದೆ' ಎನ್ನುತ್ತಾರೆ ರವಿಶಂಕರ್. ಇನ್ನು ಬಳ್ಳಾರಿಯ ಬಂಗಾರು ಹನುಮಂತು ಇಲ್ಲಿ ನಾಯಕನಾಗಿ ಕಾಣಿಸಿಕೊಳ್ಳುವ ಜತೆಗೆ ತಾವೇ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. `ಚಿತ್ರವನ್ನು ತುಂಬಾ ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಸಾಯಿ ಪ್ರಕಾಶ್ ಸಿನಿಮಾ ಅಂದ್ರೆ ಸೆಂಟಿಮೆಂಟ್ ಕತೆ ಅನ್ನುವವರೇ ಹೆಚ್ಚು.
ಆದರೆ, ಎಲ್ಲರ ನಿರೀಕ್ಷೆಯನ್ನೂ ಮೀರಿ ಪಕ್ಕಾ ಮಾಸ್ ಆ್ಯಂಡ್ ಆ್ಯಕ್ಷನ್ ಚಿತ್ರವನ್ನು ಮಾಡಲಾಗಿದ್ದು, ಸಿನಿಮಾ ನೋಡಿದವರಿಗೆ ಇದೊಂದು ಹೊಸಬರ ಚಿತ್ರ ಅಂತ ಅನ್ನಿಸುವುದಿಲ್ಲ. ಇಲ್ಲಿ ರವಿಶಂಕರ್ ಪಾತ್ರಕ್ಕೆ ತುಂಬಾ ಮಹತ್ವವಿದೆ' ಎನ್ನುತ್ತಾರೆ ಬಂಗಾರು ಹನುಮಂತು. ಆರಡಿ ಕಟೌಟ್ ಅನ್ನೂ ಮೀರಿಸುವ ಎತ್ತರದ ಬಂಗಾರು, ರವಿಶಂಕರ್ ಅವರಿಂದ ಇಂಥ ಪಾತ್ರ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರಕ್ಕೆ ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ತೆರೆಗೆ ಬರಲಿದೆ.
Advertisement