ಮಧುರ ಸ್ವಪ್ನ ಆಡಿಯೋ ಬಿಡುಗಡೆ

ಪ್ರೀತಿ, ಪ್ರೇಮ, ಕನಸು ಮತ್ತು ಅಪ್ಪ- ಅಮ್ಮ... ಇಷ್ಟು ಅಂಶಗಳೊಂದಿಗೆ ಒಂದು ಶುದ್ಧವಾದ ಪ್ರೇಮ ಕಥೆ...
ಮಧುರ ಸ್ವಪ್ನ ಚಿತ್ರ ತಂಡದಿಂದ ಆಡಿಯೋ ಬಿಡುಗಡೆ
ಮಧುರ ಸ್ವಪ್ನ ಚಿತ್ರ ತಂಡದಿಂದ ಆಡಿಯೋ ಬಿಡುಗಡೆ

ಪ್ರೀತಿ, ಪ್ರೇಮ, ಕನಸು ಮತ್ತು ಅಪ್ಪ- ಅಮ್ಮ... ಇಷ್ಟು ಅಂಶಗಳೊಂದಿಗೆ ಒಂದು ಶುದ್ಧವಾದ ಪ್ರೇಮ ಕಥೆ ಮಾಡಿರುವುದಾಗಿ ನಿರ್ದೇಶಕ ರವಿರತ್ನಂ ಹೇಳುತ್ತಾರೆ.

ಅಂದಹಾಗೆ ರವಿರತ್ನಂ ನಿರ್ದೇಶನದ ಚಿತ್ರದ ಹೆಸರು `ಮಧುರ ಸ್ವಪ್ನ'. ತುಳು ರಂಗಭೂಮಿಯ ಪ್ರತಿಭೆ ಅರ್ಜುನ್ ಕಾಪಿಕಾಡ್ ನಾಯಕನಾಗಿ ಅಭಿನಯಿಸಿರುವ ಈ ಚಿತ್ರಕ್ಕೆ ಇಬ್ಬರು ನಾಯಕಿಯರು. ಮಹಾಲಕ್ಷ್ಮಿ ಹಾಗೂ ಕೀರ್ತನಾ ಪೌಡ್‍ವಾಲ್. ಎಚ್.ಎಂ.ಸಂಜೀವ್‍ಕುಮಾರ್ ನಿರ್ಮಾಣ ಮಾಡಿದ್ದು, ರವಿಕಲ್ಯಾಣ್ ಸಂಗೀತ ಸಂಯೋಜಿಸಿದ್ದಾರೆ. ರವಿರತ್ನಂ ಕರಮಲ ಅವರಿಗೆ ಇದು ಮೊದಲ ನಿರ್ದೇಶನದ ಸಿನಿಮಾ.

ಹೀಗಾಗಿ ಸಾಕಷ್ಟು ಅಡೆತಡೆಗಳನ್ನು ಎದುರಿಸುತ್ತಲೇ ಅಂದುಕೊಂಡಂತೆ ಸಿನಿಮಾ ಮುಗಿಸಿಕೊಂಡು ಬಂದಿದ್ದಾರೆ ನಿರ್ದೇಶಕರು. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆ ನಡೆಯಿತು. ಆನಂದ್ ಆಡಿಯೋ ಸಂಸ್ಥೆಯಿಂದ ಬಿಡುಗಡೆಯಾಗುತ್ತಿರುವ ಈ ಚಿತ್ರದ ಆಡಿಯೋ ಸಿಡಿಗಳನ್ನು ಚಿತ್ರತಂಡ ಮಾರುಕಟ್ಟೆಗೆ ಬಿಟ್ಟಿದೆ. `ಚಿತ್ರದ ಹೆಸರಿಗೆ ತಕ್ಕಂತೆ ಒಳ್ಳೆಯ ಹಾಗೂ ಪರಿಪೂರ್ಣವಾದ ಪ್ರೇಮ ಕಥೆ ಇಲ್ಲಿದೆ. ಪ್ರೀತಿ, ಪ್ರೇಮ ವಿಚಾರ ಬಂದಾಗ ಜೀವನಕ್ಕಿಂತ ಯಾವುದು ಮುಖ್ಯ ಎಂದು ಕೇಳುವ ಈ ಕಥೆಯಲ್ಲಿ ಹೆತ್ತವರಿಗಾಗಿ ಮಕ್ಕಳ ತ್ಯಾಗ ಹಾಗೂ ಮಕ್ಕಳಿಗಾಗಿ ಹೆತ್ತವರ ತ್ಯಾಗದ ಕಥೆ ಈ ಚಿತ್ರದ್ದು. ನನ್ನ ನಿರೀಕ್ಷೆಯಂತೆ ಇಡೀ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಎಲ್ಲ ಪಾತ್ರಗಳು ನಟನೆ ಸೂಪರ್. ನಿರ್ಮಾಪಕರು ಯಾವುದರಲ್ಲೂ ಕೊರತೆ ಮಾಡದೆ ಕೊಟ್ಟಿದ್ದರಿಂದ ಸಿನಿಮಾ ತುಂಬಾ ರಿಚ್ ಆಗಿ ಬಂದಿದೆ' ಎಂದರು ನಿರ್ದೇಶಕ ರವಿರತ್ನಂ ಕರಮಲ.

ಚಿತ್ರದ ನಾಯಕಿಯರಿಬ್ಬರ ಪೈಕಿ ಮಹಾಲಕ್ಷ್ಮಿಗೆ ಇಲ್ಲಿ, ಹಳ್ಳಿ ಬಜಾರಿ ಪಾತ್ರವಂತೆ. ಅಭಿನಯಕ್ಕೆ ಹೆಚ್ಚು ಸ್ಕೋಪ್ ಇದೆಯಂತೆ. ಇನ್ನು ಕೀರ್ತನಾ ಅವರದ್ದು ಮಾರ್ಡನ್ ಪಾತ್ರ. ಆದರೆ, ಇಬ್ಬರು ತಮ್ಮ ಪಾತ್ರದ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಧನ್ಯವಾದ ಅರ್ಪಿಸುವುದಕ್ಕೆ ಇವರ ಮಾತು ಸೀಮಿತವಾಯಿತು. ನಿರ್ದೇಶಕರು ಕೂಡ ತಾನೇನು ಕಮ್ಮಿ ಇಲ್ಲ ಎನ್ನುವಂತೆ
ಸಾಕಷ್ಟು ಸಲ ವಂದನಾರ್ಪನೆ ಸಮರ್ಪಿಸಿಕೊಂಡರು. ಚಿತ್ರದ ನಾಯಕ ಅರ್ಜುನ್ ಕಾಪಿಕಾಡ್ ಅವರಿಗೆ ಇದು ಮೊದಲ ಚಿತ್ರವಾದರೂ ತುಳು ರಂಗಭೂಮಿಯಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತ. ಅಲ್ಲದೆ ಹಲವು ತುಳು ಸಿನಿಮಾಗಳಲ್ಲೂ ಅಭಿನಯಿಸಿರುವ ಅರ್ಜುನ್, ಪೂರ್ಣ ಪ್ರಮಾಣದ ನಾಯಕನಾಗಿ ಈ ಚಿತ್ರದ ಮೂಲಕ ಗಾಂಧಿನಗರಕ್ಕೆ ಬಂದಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿವೆ. ರವಿಕಲ್ಯಾಣ್ ಮೊದಲ ಬಾರಿಗೆ ಸಂಗೀತ ಸಂಯೋಜಿಸಿದ್ದರೂ ಚಿತ್ರದ ಎಲ್ಲ ಹಾಡುಗಳು ತುಂಬಾ ಚೆನ್ನಾಗಿ  ಬಂದಿವೆ ಎಂಬುದು ತಂಡದ ಅಭಿಪ್ರಾಯ.

`ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ. ರಮ್ಯ ಬೆಹರಾ, ದಿನ್‍ಕರ್, ದೀಪು, ಅಪ್ಸಿಕಾ, ರಂಜಿತ್, ಉಮಾ ನೇಹ, ಜೈ ಶ್ರೀನಿವಾಸ್ ಮುಂತಾದವರು ಹಾಡಿದ್ದು, ರವಿರತ್ನಂ ಹಾಗೂ ಹೃದಯಶಿವ ಚಿತ್ರದ ಹಾಡುಗಳನ್ನು ಬರೆದಿದ್ದಾರೆ. ಮೆಲೋಡಿ ಜತೆಗೆ ಎಲ್ಲ ರೀತಿಯ ಹಾಡುಗಳು ಇಲ್ಲಿವೆ' ಎಂದರು ರವಿಕಲ್ಯಾಣ್. ಒಟ್ಟಿನಲ್ಲಿ ರವಿರತ್ನಂ ಅವರಿಗೆ ಸಿನಿಮಾ ನಿರ್ದೇಶಿಸಬೇಕೆಂಬ ಕನಸು ಈ ಚಿತ್ರದಿಂದ ಈಡೇರಿದೆ ಎಂದು ಹೇಳಿಕೊಳ್ಳುವಲ್ಲಿಗೆ `ಮಧುರ ಸ್ವಪ್ನ' ಚಿತ್ರದ ಆಡಿಯೋ ಬಿಡುಗಡೆ ಮಾತು ಮುಕ್ತಾಯವಾಯಿತು..?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com