
ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಸಿಆರ್ ಮನೋಹರ್ ಇದೀಗ ಬಹುಭಾಷಾ ನಿರ್ಮಾಪಕರಾಗುವತ್ತ ಹೆಜ್ಜೆ ಇಟ್ಟಿದ್ದು, ಅವರ ನಿರ್ಮಾಣದ ಎರಡು ಬಹು ನಿರೀಕ್ಷಿತ ಚಿತ್ರಗಳು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಏಕಕಾಲದಲ್ಲಿ ನಿರ್ಮಾಣಗೊಳ್ಳುತ್ತಿದೆ.
ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹುತಾರಾಗಣದ ಚಿತ್ರ ಕಲಿ ಮತ್ತು ವಿವೇಕ್ ಒಬೇರಾಯ್ ಅಭಿನಯದ "ರೈ" ಚಿತ್ರವನ್ನು ಇದೇ ಮನೋಹರ್ ಅವರು ನಿರ್ಮಾಣ ಮಾಡುತ್ತಿದ್ದು, ಎರಡೂ ಚಿತ್ರಗಳು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ತೆರೆಗೆ ಬರಲಿವೆ ಎಂದು ಹೇಳಲಾಗುತ್ತಿದೆ. ಇದಲ್ಲದೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶನದ "ರೋಗ್" ಚಿತ್ರಕ್ಕೂ ಇದೇ ಮನೋಹರ್ ಬಂಡವಾಳ ಹಾಕುತ್ತಿದ್ದು, ಆ ಮೂಲಕ ಮನೋಹರ್ ಬಹುಭಾಷಾ ನಿರ್ಮಾಪಕರೆಂಬ ಖ್ಯಾತಿ ಪಡೆದಿದ್ದಾರೆ.
ಇನ್ನು ರಾಮ್ ಗೋಪಾಲ್ ವರ್ಮಾ ನಿರ್ದೇಶಿಸುತ್ತಿರುವ ರೈ ಚಿತ್ರವನ್ನು ತಮ್ಮದೇ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವುದಕ್ಕೆ ಮನೋಹರ್ ಅವರು ಹರ್ಷ ವ್ಯಕ್ತಪಡಿಸಿದ್ದು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಮನೋಹರ್ ಹೇಳಿಕೊಂಡಿದ್ದಾರೆ. ಮೊದಲು ಚಿತ್ರದ ರೈ ಪಾತ್ರಕ್ಕೆ ಕಿಚ್ಚ ಸುದೀಪ್ ಅವರನ್ನು ಅಂತಿಮ ಮಾಡಲಾಗಿತ್ತು. ಆದರೆ ಸುದೀಪ್ ತಮ್ಮದೇ ಬ್ಯಾನರ್ ನ ಕಲಿ ಚಿತ್ರದಲ್ಲಿ ಬಿಸಿಯಾಗಿರುವುದರಿಂದ ಅನಿವಾರ್ಯವಾಗಿ ವಿವೇಕ್ ಒಬೆರಾಯ್ ಅವರನ್ನು ಕರೆತರಲಾಗಿದೆ ಎಂದು ಮನೋಹರ್ ತಿಳಿಸಿದರು.
ಆರ್ ಜಿವಿ ಮತ್ತು ವಿವೇಕ್ ಒಬೆರಾಯ್ ಅವರು ಈ ಹಿಂದೆ ಸರ್ಕಾರ್, ಡಿ ಕಂಪನಿ ಮತ್ತು ರಕ್ತಚರಿತ್ರ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಈ ಮೂರು ಚಿತ್ರಗಳಲ್ಲಿ ವಿವೇಕ್ ಮನೋಜ್ಞವಾಗಿ ಅಭಿನಯಿಸಿದ್ದರು. ಇದೇ ಕಾರಣಕ್ಕಾಗಿ ಆರ್ ಜಿವಿ ಮತ್ತೆ ವಿವೇಕ್ ರನ್ನು ಕರೆತಂದಿದ್ದಾರೆ ಎಂದು ಮನೋಹರ್ ಹೇಳಿದರು.
ರೈ ಚಿತ್ರಕ್ಕೆ ಮುತ್ತಪ್ಪ ರೈ ಅವರ ಕುರಿತಾದ ಚಿತ್ರಕಥೆಯನ್ನೇ ತೆಗೆದುಕೊಳ್ಳಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮನೋಹರ್, ರಾಮ್ ಗೋಪಾಲ್ ವರ್ಮಾ ಭೂಗತ ಜಗತ್ತಿನ ಸಾಕಷ್ಟು ಡಾನ್ ಗಳ ಕುರಿತಂತೆ ತಿಳಿದುಕೊಂಡಿದ್ದಾರೆ. ಕೆಲವರು ವಿದೇಶಗಳಲ್ಲಿ ಅವಿತಿದ್ದರೆ, ಮತ್ತೆ ಕೆಲವರು ಜೀವಭಯದಿಂದ ತಲೆಮರೆಸಿಕೊಂಡು ತಿರುಗಾಡುತ್ತಿದ್ದಾರೆ. ಆದರೆ ಭೂಗತ ಲೋಕವನ್ನು ಬಿಟ್ಟು ಓರ್ವ ಸಾಮಾನ್ಯ ವ್ಯಕ್ತಿಯಾಗಿ ಜೀವನ ಸಾಗಿಸುತ್ತಿರುವ ಮುತ್ತಪ್ಪ ರೈ ವಿಶೇಷವಾಗಿ ಕಾಣಿಸುತ್ತಾರೆ. ಹೀಗಾಗಿ ಆರ್ ಜಿವಿ ಅವರ ಕಥೆಯನ್ನೇ ಚಿತ್ರವನ್ನಾಗಿ ತೆರೆ ಮೇಲೆ ತರಲು ಮುಂದಾಗಿದ್ದಾರೆ ಎಂದು ಮನೋಹರ್ ಹೇಳಿದರು.
ಚಿತ್ರದ ಸಂಬಂಧ ಆರ್ ಜಿವಿ ಈಗಾಗಲೇ ಮುತ್ತಪ್ಪ ರೈ ರೊಂದಿಗೆ ಚರ್ಚಿಸಿದ್ದು, ರೈ ಕೂಡ ಚಿತ್ರಕ್ಕೆ ಒಪ್ಪಿಗೆ ನೀಡಿದ್ದಾರೆ. ಅಂತೆಯೇ ನಾನು ಮತ್ತು ಆರ್ ಜಿವಿ ಚಿತ್ರದ ಬಜೆಟ್, ಶೂಟಿಂಗ್ ಶೆಡ್ಯೂಲ್ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈಗಾಗಲೇ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಈ ಕುರಿತು ಮತ್ತಷ್ಟು ಮಾಹಿತಿ ನೀಡುತ್ತೇನೆ ಎಂದು ಮನೋಹರ್ ತಿಳಿಸಿದರು.
Advertisement