

ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ರಾಷ್ಟ್ರಗೀತೆ ಹಾಡುವುದನ್ನು ನೋಡಬೇಕೆಂದು ಬಾಲಿವುಡ್ ನಟ ಅನುಪಮ್ ಖೇರ್ ಅವರು ಸೋಮವಾರ ಹೇಳಿದ್ದಾರೆ.
ವಡೋದರಾದಲ್ಲಿ ನಡೆದ ವಿಸಿಸಿಐ ಎಕ್ಸ್'ಪೋದಲ್ಲಿ ಮಾತನಾದಿರುವ ಅವರು, ನನಗೆ ರಾಹುಲ್ ಗಾಂಧಿಯವರ ಭಾರತೀಯತೆ ಬಗ್ಗೆ ಸಂಶಯವಿಲ್ಲ. ಆದರೆ, ರಾಹುಲ್ ಗಾಂಧಿಯವರು ರಾಷ್ಟ್ರಗೀತೆ ಹಾಡುವುದನ್ನು ನೋಡಬೇಕು. ರಾಹುಲ್'ಗೆ ರಾಷ್ಟ್ರಗೀತೆ ಗೊತ್ತಿದೆಯೋ, ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ನೋಟು ನಿಷೇಧ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವ ಅವರು, ರು.500 ಹಾಗೂ 1,000 ಮುಖಬೆಲೆ ನೋಟಿನ ಮೇಲಿನ ನಿಷೇಧ ಖಾಸಗಿಯಾಗಿದ್ದು, ಹೀಗಾಗಿಯೇ ನಿಷೇಧ ಹೇರಿಕೆಗೂ ಮುನ್ನ ಎಲ್ಲಿಯೂ ವಿಚಾರವನ್ನು ಬಹಿರಂಗಪಡಿಸಿಲ್ಲ. ನೋಟು ನಿಷೇಧ ಕುರಿತಂತೆ ವಿಪಕ್ಷಗಳ ಪ್ರತಿಭಟನೆ ಅಸಹಿಷ್ಣುತೆ ಸೃಷ್ಟಿಸುತ್ತಿರುವುದನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.