ಬೆಂಗಳೂರು: ನಟನೆಯಷ್ಟೇ ಅಲ್ಲ ಪ್ರತಿಭಾವಂತ ಗಾಯಕ ಎಂದು ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಪುನೀತ್ ರಾಜಕುಮಾರ್ ಕಿರುತೆರೆಯಲ್ಲಿಯೂ ಮೊದಲ ಬಾರಿಗೆ ಹಾಡೊಂದನ್ನು ಹಾಡಿದ್ದಾರೆ.
ಉದಯ ವಾಹಿನಿಯಲ್ಲಿ ಮೂಡಿ ಬರುತ್ತಿರುವ ನೃತ್ಯ ರಿಯಾಲಿಟಿ ಕಾರ್ಯಕ್ರಮ 'ಕಿಕ್'ಗಾಗಿ ಪುನೀತ್ ಹಾಡೊಂದನ್ನು ಹಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅವರ ಸಹೋದರ ಶಿವರಾಜ್ ಕುಮಾರ್, ನೃತ್ಯ ನಿರ್ದೇಶಕ ಹರ್ಷ ಮತ್ತು ನಟಿ ರಚಿತಾ ರಾಮ್ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.
ಪುನೀತ್ ಹಾಡಿರುವ ಈ ರಿಪ್ ಹಾಡನ್ನು ರಚಿಸಿ ಸಂಗೀತ ಸಂಯೋಜಿಸಿರುವುದು ಚಂದನ್ ಶೆಟ್ಟಿ. ಸದ್ಯಕ್ಕೆ ಮೈಸೂರಿನಲ್ಲಿ ಸಂತೋಷ್ ಆನಂದರಾಮ್ ನಿರ್ದೇಶನದ 'ರಾಜಕುಮಾರ' ಚಿತ್ರೀಕರಣದಲ್ಲಿ ನಿರತರಾಗಿರುವ ಪುನೀತ್ ಈ ಹಾಡಿನ ರೆಕಾರ್ಡಿಂಗ್ ಗಾಗಿ ಸಮಯ ಮಾಡಿಕೊಂಡಿದ್ದಾರೆ.
"ಕೈಕಾಲು ನಿಂತ ಕಡೆ ನಿಲ್ಲೋದಿಲ್ಲ.. ಸ್ಟೆಪ್ ಹಾಕದಿದ್ರೆ ನಮಗೆ ನೆಮ್ಮದಿ ಇಲ್ಲ" ಎಂಬ ಸಾಹಿತ್ಯ ಇರುವ ಈ ಶಕ್ತಿಯುತ ಹಾಡು ಕಾರ್ಯಕ್ರಮದ ಸ್ಪರ್ಧಿಗಳಿಗೆ ಸ್ಫುರ್ತಿ ತುಂಬಲಿದೆ ಎನ್ನುತ್ತಾರೆ ಸಂಗೀತ ನಿರ್ದೇಶಕ.
ಜುಲೈ 16 ರಿಂದ ಪ್ರಾರಂಭವಾಗಿರುವ ಈ ಕಾರ್ಯಕ್ರಮ ಇಂದಿನ ಶನಿವಾರ ಪ್ರಸಾರವಾಗುವ ಭಾಗದಲ್ಲಿ ಈ ಹಾಡು ಕೇಳಿಬರಲಿದೆ.