
ಬೆಂಗಳೂರು: ಕನ್ನಡ ಚಿತ್ರರಂಗ ಡಾ.ರಾಜ್ ಕುಮಾರ್ ಅವರ ಜನ್ಮದಿನದ ಆಚರಣೆಯಲ್ಲಿ ಮುಳುಗಿದ್ದರೆ ಅತ್ತ ರಾಜ್-ವಿಷ್ಣು ಚಿತ್ರ ತಂಡ ದಿವಂಗತ ಲೆಜೆಂಡರಿ ನಟರಿಗೆ ಗೌರವ ಸಮರ್ಪಣೆಗಾಗಿ ವಿಶೇಷ ಹಾಡೊಂದನ್ನು ಚಿತ್ರೀಕರಿಸುತ್ತಿದೆ.
ರಾಜ್ ವಿಷ್ಣು ಚಿತ್ರವನ್ನು ಖ್ಯಾತ ನಿರ್ದೇಶಕ ಕೆ ಮಾದೇಶ್ ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ರಾಮು ಪ್ರೊಡಕ್ಷನ್ಸ್ ಸಂಸ್ಥೆ ಬಂಡವಾಳ ಹೂಡಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ರಾಜ್ ಕುಮಾರ್ -ವಿಷ್ಣು ವರ್ಧನ್ ಕುರಿತ ವಿಶೇಷ ಹಾಡಿಗೆ ಮುರಳಿ ಮಾಸ್ಚರ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಖ್ಯಾತ ನಿರ್ದೇಶಕ ಯೋಗರಾಜ್ ಭಟ್, ವಿ ನಾಗೇಂದ್ರ ಪ್ರಸಾದ್, ಕವಿರಾಜ್ ಅವರು ಚಿತ್ರಕ್ಕೆ ಸಾಹಿತ್ಯ ಬರೆದಿದ್ದಾರೆ.
ಇಡೀ ಚಿತ್ರವನ್ನು ರಾಜ್ ಕುಮಾರ್ ಮತ್ತು ವಿಷ್ಣು ವರ್ಧನ್ ಅವರಿಗೆ ಸಮರ್ಪಿಸಲಾಗಿದ್ದು, ನಾಗೇಂದ್ರ ಪ್ರಸಾದ್ ಅವರು ರಚಿಸಿರುವ ವಿಶೇಷ ಹಾಡಿನಲ್ಲಿ ಚಿಕ್ಕಣ್ಣ ಮತ್ತು ಶರಣ್ ಜೋಡಿ ರಾಜ್ ಕುಮಾರ್ ಮತ್ತು ವಿಷ್ಣು ವರ್ಧನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ವಿಶೇಷ ಹಾಡೊಂದರಲ್ಲಿ ರಾಜ್-ವಿಷ್ಣು ಅವರ ಸುಮಾರು ಅರ್ಧ ಡಜನ್ ಗೂ ಹೆಚ್ಚು ಕಾಸ್ಯ್ಚೂಮ್ ಗಳಲ್ಲಿ ಶರಣ್-ಚಿಕ್ಕಣ್ಣ ಕಾಣಿಸಿಕೊಂಡಿದ್ದು, ಈ ಹಾಡು ಚಿತ್ರಕ್ಕೆ ವಿಶೇಷ ಮೆರುಗು ನೀಡಲಿದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಈ ಚಿತ್ರದಲ್ಲಿ ಬರೀ ರಾಜ್ ಕುಮಾರ್ ಹಾಗೂ ವಿಷ್ಣುವರ್ಧನ್ ಮಾತ್ರವಲ್ಲ, 'ಕಟ್ಟಪ-ಬಾಹುಬಲಿ'ಯ ಪಾತ್ರಗಳು ಬರಲಿವೆಯಂತೆ. ಚಿತ್ರದ ಸನ್ನಿವೇಶವೊಂದರಲ್ಲಿ ಚಿಕ್ಕಣ್ಣ ಕಟ್ಟಪ್ಪನಾಗಿ, ಶರಣ್ ಬಾಹುಬಲಿಯಾಗಿ ಕಾಣಿಸಿಕೊಂಡಿದ್ದಾರೆ. 'ರಾಜ್-ವಿಷ್ಣು' ಚಿತ್ರದಲ್ಲಿ ರೋರಿಂಗ್ ಸ್ಟಾರ್ ಶ್ರೀಮುರುಳಿ ಅತಿಥಿ ಪಾತ್ರವನ್ನ ನಿರ್ವಹಿಸಿದ್ದು, ಈಗಾಗಲೇ ಶೂಟಿಂಗ್ ಕೂಡ ಮುಗಿಸಿದ್ದಾರೆ. ಮುಂಬೈ ಮೂಲದ ನಟಿ ವೈಭವಿ, ರಾಜ್ ವಿಷ್ಣು ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಉಳಿದಂತೆ ಸಾಧುಕೋಕಿಲಾ, ರವಿಶಂಕರ್, ವೀಣಾ ಸುಂದರ್, ಮಿಮಿಕ್ರಿ ಗೋಪಿ, ರಮೇಶ್ ಪಂಡಿತ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.
ಇನ್ನು ಈ ವಿಶೇಷ ಹಾಡಿನ ಬಗ್ಗೆ ಹೆಮ್ಮೆಯಿಂದಲೇ ಹೇಳಿಕೊಳ್ಳುವ ನಟ ಶರಣ್, ಇಬ್ಬರೂ ನಟ ಅತೀ ದೊಡ್ಡ ಅಭಿಮಾನಿ ನಾನು. ಅವರು ಮಾಡಿದ ವಿಶೇಷ ಪಾತ್ರಗಳ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿರುವುದು ನನಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
Advertisement