ವಾಣಿಜ್ಯ ಮಂಡಳಿ ಎಚ್ಚರಿಕೆ ನಡುವೆಯೂ ಮಲ್ಟಿಪ್ಲೆಕ್ಸ್ ಉದ್ಧಟತನ; "ರಾಗ"ಕ್ಕಿಲ್ಲ ಸ್ಥಾನ!

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನಡುವೆಯೂ ಮಲ್ಟಿಪ್ಲೆಕ್ಸ್ ಗಳಲ್ಲಿ ರಾಗ ಚಿತ್ರ ಪ್ರದರ್ಶನ ಮಾಡಲು ನಕಾರಾ ವ್ಯಕ್ತಪಡಿಸಲಾಗುತ್ತಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಆರೋಪಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಗ್ ಬಜೆಟ್ ಚಿತ್ರ ಬಾಹುಬಲಿಗಾಗಿ ಕನ್ನಡದ ರಾಗಾ ಚಿತ್ರ ಎತ್ತಂಗಡಿ ವಿಚಾರ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎಚ್ಚರಿಕೆ ನಡುವೆಯೂ ಮಲ್ಟಿಪ್ಲೆಕ್ಸ್ ಗಳಲ್ಲಿ ರಾಗ ಚಿತ್ರ  ಪ್ರದರ್ಶನ ಮಾಡಲು ನಕಾರಾ ವ್ಯಕ್ತಪಡಿಸಲಾಗುತ್ತಿದೆ ಎಂದು ನಿರ್ದೇಶಕ ಪಿಸಿ ಶೇಖರ್ ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಫೇಸ್ ಬುಕ್ ಲೈವ್ ನಲ್ಲಿ ಚಿತ್ರದ ಎತ್ತಂಗಡಿ ಕುರಿತಂತೆ ನಿರ್ದೇಶಕ ಪಿಸಿ ಶೇಖರ್ ತಮ್ಮ ಅಳಲು ತೋಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾಗೋವಿಂದು ಅವರು  ಮಧ್ಯಸ್ಥಿಕೆ ವಹಿಸಿ ರಾಗಾ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ ನಲ್ಲಿ ಅವಕಾಶ ನೀಡುವಂತೆ ಕೋರಿದ್ದರು. ಸಂಧಾನದ ಬಳಿಕ ಚಿತ್ರಕ್ಕೆ ಅವಕಾಶ ನೀಡುವುದಾಗಿ ಹೇಳಿಕೊಂಡಿದ್ದ ಮಲ್ಟಿಪ್ಲೆಕ್ ಗಳು ಇದೀಗ ತಮ್ಮ ವರಸೆ ಬದಲಿಸಿ, ರಾಗ ಚಿತ್ರ  ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂದು ನಿರ್ದೇಶಕ ಪಿಸಿ ಶೇಖರ್ ಅಳಲು ತೋಡಿಕೊಂಡಿದ್ದಾರೆ.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಅವರು, "ರಾಗ ಚಿತ್ರಕ್ಕೆ ಥಿಯೇಟರ್ ಇಲ್ಲ ಅಂತಾದಾಗ, ನನ್ನ 14 ವರ್ಷಗಳ ಚಿತ್ರರಂಗದ ಬದುಕಿನಲ್ಲಿ ರೆಕಗ್ನಿಷನ್ ಸಿಗಲಿಲ್ಲವೇ ಎಂದು ಬೇಸರದಿಂದ ನುಡಿದಿದ್ದೆ. ಆದರೆ, ನಾನು  ನೋವಿನಿಂದ ಮಾತಾಡಿದ್ದಕ್ಕೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ನೀವೆಲ್ಲಾ ತಕ್ಷಣ ಪ್ರತಿಕ್ರಿಯಿಸಿದ್ದನ್ನು ನೋಡಿ ನನ್ನ ಹೃದಯ ತುಂಬಿ ಬಂತು. ನೀವೆಲ್ಲರೂ, ಮಾಧ್ಯಮ ಮತ್ತು ವಾಣಿಜ್ಯ ಮಂಡಳಿ ನೀಡಿದ ಬೆಂಬಲಕ್ಕೆ ನಾನು ಋಣಿ.  ಇದರ ಪರಿಣಾಮ ರಾಗಕ್ಕೆ ಮತ್ತೆ ಜೀವ ಬಂತು ಅಂಧುಕೊಂಡೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಸಾ.ರಾ.ಗೋವಿಂದು ವಿಶೇಷ ಕಾಳಜಿಯಿಂದ ಮಲ್ಟಿಪ್ಲೆಕ್ಸ್ ನಲ್ಲಿ ಕೆಲ ಶೋ ಕೊಡಿಸಿದರು. ಕಾರ್ನಿವಾಲ್, ಗೋಪಾಲನ್  ಮಾಲ್. ಗೋಫಾಲನ್ ಸಿನಿಮಾಸ್ ಗಳಲ್ಲಿ ಒಂದೊಂದು ಶೋ ಫಿಕ್ಸ್ ಆಯ್ತು. ಆದರೆ, ಆಧ್ಯಕ್ಷರಿಗೆ ಮಾತು ಕೊಟ್ಟ ಐನಾಕ್ಸ್ ಮತ್ತು ಪಿವಿಆರ್, ಸಿನಿ ಪೊಲೀಸ್, ರಾಗ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಇವತ್ತು ಶೋ ಆಗಲಿಲ್ಲ  ಅಂದ್ರೆ ಮತ್ತೆ ಇವರು ರಾಗ ಪ್ರದರ್ಶಿಸೋದೇ ಇಲ್ಲ. ಇದು ನನ್ನಲ್ಲಿ ಆತಂಕವನ್ನುಂಟು ಮಾಡ್ತಿದೆ. ನಿನ್ನೆ ಸಿಕ್ಕ ಭರವಸೆ ಕರಗಿ ಹೋಗ್ತಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರ ಮಾತಿಗೆ ಬೆಲೆಯೇ ಇಲ್ಲವೇ? ಕನ್ನಡ ಚಿತ್ರರಂಗದಲ್ಲಿ ಕನ್ನಡ  ಚಿತ್ರಗಳ ಹಿತ ಕಾಪಾಡೋದ್ರಲ್ಲಿ ವಾಣಿಜ್ಯ ಮಂಡಳಿ ನ್ಯಾಯ ಮಂಡಳಿ ತರ ಕೆಲಸ ಮಾಡ್ತಿದೆ. ಹೀಗಿರುವಾಗ ಮಂಡಳಿಯನ್ನ ಮಲ್ಟಿ ಪ್ಲೆಕ್ಸ್ ಕೇರ್ ಮಾಡೋಲ್ಲ ಅಂದ್ರೆ ಮುಂದೆ ಬರೋ ಕನ್ನಡ ಚಿತ್ರಗಳನ್ನು ಕಾಪಾಡೋರು ಯಾರು?  ಎಂದು ತೀವ್ರ ನೋವಿನಿಂದ ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com