

ಬೆಂಗಳೂರು: ಪ್ಯಾರ್ ಗೆ ಆಗ್ಬುಟೈತೆ ಹಾಡಿನ ಖ್ಯಾತಿಯ ನಟಿ ಪಾರುಲ್ ಯಾದವ್ ಮೇಲೆ ಆರು ಬೀದಿ ನಾಯಿಗಳು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿವೆ.
ಸೋಮವಾರ ಸಂಜೆ ತಮ್ಮ ಸಾಕುನಾಯಿಯೊಂದಿಗೆ ಮುಂಬಯಿನ ತಮ್ಮ ಅಪಾರ್ಟ್ ಮೆಂಟ್ ಬಳಿಯಿರುವ ಜೋಗೇಶ್ವರಿ ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದರು. ಈ ವೇಳೆ ಸಾಕು ನಾಯಿಯ ಮೇಲೆ ಅಲ್ಲಿದ್ದ ಬೀದಿ ನಾಯಿಗಳು ದಾಳಿ ನಡೆಸಿವೆ. ಸಾಕು ನಾಯಿಯನ್ನು ರಕ್ಷಿಸಲು ಮುಂದಾದ ಪಾರೂಲ್ರನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ತಲೆ, ಕೈ, ಕಾಲುಗಳಿಗೆ ತೀವ್ರ ಗಾಯಗಳಾಗಿವೆ.
ಈ ವೇಳೆ ಆಕೆಯನ್ನು ರಕ್ಷಿಸಲು ಯಾರೊಬ್ಬರು ಸಹಾಯಕ್ಕೆ ಬರಲಿಲ್ಲ. ಮುಖದ ಮೇಲೆ 7 ಕಡೆ ನಾಯಿ ಗಾಯಗೊಳಿಸಿವೆ. ಕತ್ತು, ಕಾಲು ಮತ್ತು ಕೈ ಗಳಿಗೆ ತೀವ್ರವಾದ ಗಾಯಗಳಾಗಿದ್ದು, ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಲೆಯಲ್ಲಿ 3 ಸೆ.ಮಿ ನಷ್ಟು ಗಾಯವಾಗಿದ್ದು, ವೈದ್ಯರು ಆಕೆಗೆ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಮುಂಬಯಿ ಮೂಲದ ಪಾರುಲ್ ತಮಿಳು ಮತ್ತು ಮಲಯಾಳಂ ನಲ್ಲಿ ಸಿನಿಮಾ ವೃತ್ತಿ ಆರಂಭಿಸಿದರು, ಕನ್ನಡದ ಗೋವಿಂದಾಯ ನಮಃ, ವಾಸ್ತು ಪ್ರಕಾರ, ಉಪ್ಪಿ2, ಕಿಲ್ಲಿಂಗ್ ವೀರಪ್ಪನ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.