ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣ: ಕೇರಳದಲ್ಲಿ ನಟ ದಿಲೀಪ್ ಬಂಧನ!

ದಕ್ಷಿಣ ಭಾರತದ ಖ್ಯಾತ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ ಖ್ಯಾತ ನಟ ದಿಲೀಪ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರಂ: ದಕ್ಷಿಣ ಭಾರತದ ಖ್ಯಾತ ನಟಿ ಅಪಹರಣ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂನ  ಖ್ಯಾತ ನಟ ದಿಲೀಪ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆಯಷ್ಟೇ ಇದೇ ಪ್ರಕರಣ ಸಂಬಂಧ ಬಂಧಿತ ಆರೋಪಿ ಪಲ್ಸರ್ ಸುನಿ ನೀಡಿದ್ದ ಹೇಳಿಕೆ ಮೇರೆಗೆ ನಟ ದಿಲೀಪ್ ಮತ್ತು ನಿರ್ಮಾಪಕ ನಾದಿರ್ಶಾ ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಲಾಗಿತ್ತು. ಇದರ ಬೆನ್ನಲ್ಲೇ ಇಂದು ಕೇರಳ ಪೊಲೀಸರು ನಟ ದಿಲೀಪ್ ರನ್ನು ವಶಕ್ಕೆ ಪಡೆದಿದ್ದಾರೆ. ಮೂಲಗಳ ಪ್ರಕಾರ ನಟ ದಿಲೀಪ್ ತಮ್ಮ ಪತ್ನಿ ದಿವ್ಯಾ ಮಾಧವನ್ ನಿವಾಸದಲ್ಲಿರುವಾಗಲೇ ಮನೆಗೆ ಬಂದ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್ ಸುನಿ ಹೇಳಿಕೆಯಷ್ಟೇ ಅಲ್ಲದೆ ಪ್ರಕರಣ ಸಂಬಂಧ ಇತ್ತೀಚೆಗೆ ಪೊಲೀಸರು ನಡೆಸಿದ ತನಿಖೆ ವೇಳೆ ಪತ್ತೆಯಾದ ಸಾಕ್ಷ್ಯಾಧಾರಗಳ ಅನ್ವಯ ಪ್ರಕರಣದಲ್ಲಿ ದಿಲೀಪ್ ಅವರ ಪಾತ್ರವಿರುವು ಕುರಿತು ಮಾಹಿತಿ ಲಭ್ಯವಾಗಿದ್ದು, ಸಂಚು ರೂಪಿಸಿದ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ರಹಸ್ಯ ಪ್ರದೇಶಕ್ಕೆ ನಟ ದಿಲೀಪ್ ರನ್ನು ಕರೆದೊಯ್ದಿದ್ದು, ಅಲ್ಲಿ ಸತತ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕಳೆದ ಫೆಬ್ರವರಿಯಲ್ಲಿ ಚಿತ್ರೀಕರಣ ಮುಗಿಸಿ ರೂಮಿಗೆ ಆಗಮಿಸುತ್ತಿದ್ದ ನಟಿಯನ್ನು ಆಕೆಯ ಕಾರುಚಾಲಕ ಸಹಾಯದಿಂದ ಅಪಹರಿಸಿ, ಚಲಿಸುತ್ತಿದ್ದ ಕಾರಿನಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಈ ವಿಚಾರ ವ್ಯಾಪಕ ಸುದ್ದಿಯಾದ ಬೆನ್ನಲ್ಲೇ ವ್ಯಾಪಕ ಟೀಕೆಗೂ ಗುರಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com