ಪ್ರೀತಿ-ಪ್ರತಿಕ್ರಿಯೆಗೆ ವಿನೀತನಾದ ಹಂಬಲ್ ನೊಗರಾಜ್

ರೇಡಿಯೋ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಮಾತುಗಾರನಾಗಿ ಜನಪ್ರಿಯರಾಗಿದ್ದ ಡ್ಯಾನಿಶ್ ಸೈಟ್, ಈಗ ಬೆಳ್ಳಿ ತೆರೆಯಲ್ಲಿ ಮಾಡಿರುವ ಪ್ರಯೋಗದ ತುಣುಕು ಕೂಡ ಈಗ ಫಲ ನೀಡಿದೆ.
ಡ್ಯಾನಿಶ್ ಸೈಟ್
ಡ್ಯಾನಿಶ್ ಸೈಟ್
ಬೆಂಗಳೂರು: ರೇಡಿಯೋ, ಟಿವಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಮಾತುಗಾರನಾಗಿ ಜನಪ್ರಿಯರಾಗಿದ್ದ ಡ್ಯಾನಿಶ್ ಸೈಟ್, ಈಗ ಬೆಳ್ಳಿ ತೆರೆಯಲ್ಲಿ ಮಾಡಿರುವ ಪ್ರಯೋಗದ ತುಣುಕು ಕೂಡ ಈಗ ಫಲ ನೀಡಿದೆ. ರಾಜಕೀಯ ವಿಡಂಬನಾ ಚಿತ್ರ 'ಹಂಬಲ್ ಪೊಲಿಟಿಶಿಯನ್ ನೊಗರಾಜ್' ಟೀಸರ್ ಉತ್ತಮ ಪ್ರತಿಕ್ರಿಯೆ ದೊರಕಿಸಿಕೊಂಡಿದೆ. 
ಮೇ ೧ ರಂದು ಬಿಡುಗಡೆಯಾದ ಈ ಟೀಸರ್ ಅನ್ನು ೨೪ ಘಂಟೆಗಳಲ್ಲಿಯೇ ಜನ ೨ ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದಾರೆ. ಬೇರೆ ಚಿತ್ರರಂಗದ ನಟರು ಕೂಡ ಈ ಟೀಸರ್ ಅನ್ನು ಪ್ರಶಂಸಿಸಿರುವುದು ವಿಶೇಷ! 
ಈ ಸಿನೆಮಾ ಟೀಸರ್ ಬಗ್ಗೆ ಮೊದಲು ಟ್ವೀಟ್ ಮಾಡಿದ ನಟ ರಕ್ಷಿತ್ ಶೆಟ್ಟಿ "ಇಲ್ಲಿದೆ ಅಧಿಕೃತ ಟೀಸರ್. ಕಡ್ಡಾಯವಾಗಿ ಕುರ್ಚಿ ಮೇಲೆ ಕುಳಿತೆ ನೋಡಬೇಕು" ಎಂದು ಬರೆದಿದ್ದರು. 
ಬಾಹುಬಲಿ೨ ಯಶಸ್ಸಿನಲ್ಲಿ ತೇಲುತ್ತಿರುವ ತೆಲುಗು ನಟ ರಾಣಾ ದಗ್ಗುಬಾಟಿ ಕೂಡ ಟ್ವೀಟ್ ಮಾಡಿದ್ದು "ಹಂಬಲ್ ನೊಗರಾಜ್ ಇಲ್ಲಿದ್ದಾನೆ. ಡ್ಯಾನಿಶ್ ಸೈಟ್ ಅದ್ಭುತ ರೀ" ಎಂದು ಬರೆದಿದ್ದಕ್ಕೆ ಪ್ರತಿಕ್ರಿಯಿಸಿರುವ ಡ್ಯಾನಿಶ್ "ರಾಣಾ ದಗ್ಗುಬಾಟಿ ಧನ್ಯವಾದಗಳು. ನಮ್ಮ ಐಡಿಯಾದಲ್ಲಿ ಮೊದಲು ನಂಬಿಕೆಯಿಟ್ಟವರು ನೀವು. ಅನಂತ ಪ್ರೀತಿಗಳು" ಎಂದಿದ್ದಾರೆ. 
ಇನ್ನು ಈ ಟೀಸರ್ ಬಗ್ಗೆ ನಿರ್ದೇಶಕ ಪವನ್ ಕುಮಾರ್, ನಟಿ ಶ್ರುತಿ ಹರಿಹರನ್, ನಟ ಚಿರಂಜೀವಿ ಸರ್ಜಾ ಕೂಡ ಟ್ವೀಟ್ ಮಾಡಿ ಪ್ರಶಂಸಿಸಿದ್ದಾರೆ.
ಹಲವು ಕಡೆಯಿಂದ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿರುವುದಕ್ಕೆ ತೀವ್ರ ಸಂತಗೊಂಡಿರುವ ನಟ ಡ್ಯಾನಿಷ್ "ಇದು ನಮ್ಮೆಲ್ಲರಿಂದ ಮೂಡಿರುವ ಪ್ರಾಮಾಣಿಕ ಕೆಲಸ. ಈ ಪ್ರತಿಕ್ರಿಯೆಗಳಿಂದ ವಿನೀತನಾಗಿದ್ದೇನೆ" ಎನ್ನುತ್ತಾರೆ. 
ಸಾದ್ ಖಾನ್ ಈ ಸಿನೆಮಾದ ನಿರ್ದೇಶಕ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com