
ಬಳ್ಳಾರಿ: ವಿವಿಧ ಭಾಷೆಗಳಲ್ಲಿ ಬಾಹುಬಲಿ ಚಿತ್ರ ಭಾರಿ ಯಶಸ್ಸು ಕಂಡ ಬೆನ್ನಲ್ಲೇ ಚಿತ್ರದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು ಕನ್ನಡದಲ್ಲೂ ಡಬ್ಬಿಂಗ್ ಬರಬೇಕು ಎಂದು ಡಬ್ಬಿಂಗ್ ಪರ ಬ್ಯಾಟ್ ಬೀಸಿದ್ದಾರೆ.
ಈ ಹಿಂದೆ ‘ಬಾಹುಬಲಿ' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವ ಪ್ರಯತ್ನಗಳು ವಿಫಲವಾದ ಬೆನ್ನಲ್ಲೆ ಟಾಲಿವುಡ್ ನಿರ್ದೇಶಕ ರಾಜಮೌಳಿ, ಡಬ್ಬಿಂಗ್ ಪರವಾಗಿ ಬ್ಯಾಟ್ ಬೀಸಿದ್ದು, "ಪ್ರೇಕ್ಷಕರು ಡಬ್ಬಿಂಗ್ ಸಿನಿಮಾ ಬಯಸುತ್ತಾರೆ. ಹೀಗಾಗಿ ಕನ್ನಡದಲ್ಲೂ ಡಬ್ಬಿಂಗ್ ಚಿತ್ರಗಳು ಬರಬೇಕು ಎಂಬುದು ನನ್ನ ಬಯಕೆ" ಎಂದು ಹೇಳಿದ್ದಾರೆ. ಬಳ್ಳಾರಿಗೆ ಕುಟುಂಬ ಸಮೇತರಾಗಿ ಆಗಮಿಸಿದ್ದ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರು, ನಗರದ ರಾಧಿಕಾ ಚಿತ್ರಮಂದಿರದಲ್ಲಿ ಬಾಹುಬಲಿ-2 ಚಿತ್ರ ವೀಕ್ಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡದಲ್ಲೂ ಡಬ್ಬಿಂಗ್ ಬರಬೇಕು. ಆದರೆ, ಈ ವಿಚಾರದಲ್ಲಿ ಕರ್ನಾಟಕ ಫಿಲಂ ಚೇಂಬರ್ ತೀರ್ಮಾನ ಅಂತಿಮವಾಗಿದೆ. ಡಬ್ಬಿಂಗ್ ಸಿನಿಮಾ ಮಾಡಿದ್ರೆ ಚೆನ್ನಾಗಿರುತ್ತದೆ ಎಂಬುದು ನನ್ನ ವೈಯುಕ್ತಿಕ ನಿಲುವು. ಆದರೆ, ಕರ್ನಾಟಕದ ಚಲನಚಿತ್ರ ವಾಣಿಜ್ಯ ಮಂಡಳಿ ಒಪ್ಪಬೇಕಲ್ಲವೇ? ಈ ವಿಚಾರದಲ್ಲಿ ನಾನು ಅಸಹಾಯಕನಾಗಿದ್ದೇನೆ. ತಮಿಳು, ತೆಲುಗು, ಮಲೆಯಾಳಂನಲ್ಲಿ ವಾಯ್ಸ್ ಡಬ್ ಮಾಡಲು ಅವಕಾಶವಿದೆ. ಅಂತೆಯೇ ಕನ್ನಡದಲ್ಲೂ ಈ ರೀತಿಯ ಅವಕಾಶಗಳು ಇರಬೇಕಿತ್ತು. ಪ್ರಾದೇಶಿಕ ಭಾಷೆಗಳಿಗೆ ಡಬ್ಬಿಂಗ್‌ನಿಂದ ಹೆಚ್ಚು ಅನುಕೂಲವೇ ಇದೆ ಎಂದರು. ಪೈರಸಿ ಬಗ್ಗೆ ಮಾತನಾಡಿದ ಅವರು, ಕಾನೂನು ಎಷ್ಟುಗಟ್ಟಿಯಾಗಿದ್ದರೂ ಪೈರಸಿ ನಿಲ್ಲುವುದಿಲ್ಲ. ಇದು ದೊಡ್ಡ ಸಮಸ್ಯೆಯಾಗಿಯೇ ಉಳಿದಿದೆ. ಪೈರಸಿ ಸಮಸ್ಯೆ ಮುಗಿಯದ ಕಥೆ. ಕಾನೂನು ಮತ್ತಷ್ಟು ಬಿಗಿಯಾಗಬೇಕು. ಆಗ ಮಾತ್ರ ನಿಯಂತ್ರಣ ಸಾಧ್ಯ ಎಂದು ಸಲಹೆ ನೀಡಿದರು.
ಇದೇ ವೇಳೆ ಬಾಹುಬಲಿ ಚಿತ್ರದ ಬಗ್ಗೆ ಮಾತನಾಡಿದ ಅವರು, "ಬಾಹುಬಲಿಯ ಚಿತ್ರದ ಪಾತ್ರಗಳು ಹಾಗೂ ಅವರ ನಟನೆಯೇ ಚಿತ್ರ ಯಶಸ್ವಿಯಾಗಲು ಸಾಧ್ಯವಾಗಿದೆ. ಕಲೆಕ್ಷನ್ ಬಗ್ಗೆ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ ಸಿನಿಮಾ ಜನರಿಗೆ ಇಷ್ಟವಾಗಿದೆ. ಜನರು ಥಿಯೇ ಟರ್‌ನಿಂದ ಹೊರಬರುವಾಗ ಸಂತಸದಿಂದ ಹೊರ ಬರುವುದನ್ನು ನಾವು ಕಾಣುತ್ತೇವೆ. ಚಿತ್ರ ನಿರ್ದೇಶಕ ಬಯಸುವುದು ಕೂಡ ಇದನ್ನೇ ಹೊರತು, ಕಲೆಕ್ಷನ್‌ನ್ ಬಗ್ಗೆ ಅಲ್ಲ. ನನ್ನ ನಿರೀಕ್ಷೆಯಂತೆಯೇ ಚಿತ್ರಮೂಡಿ ಬಂದಿದ್ದು, ಚಿತ್ರ ಪ್ರೇಕ್ಷಕರ ಮನಸ್ಸು ಗೆದ್ದಿರುವುದು ನನಗೆ ಹೆಚ್ಚು ಸಂತಸ ತಂದಿದೆ' ಎಂದು ಹೇಳಿದರು.
Advertisement