ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
ಒಬ್ಬರು ಮೂಗು.. ಮತ್ತೊಬ್ಬರು ತಲೆಕತ್ತರಿಸಬೇಕೆಂದಿದ್ದಾರೆ..ಆದರೂ ಅಸಹಿಷ್ಣುತೆ ಇಲ್ಲ?: ನಟ ಪ್ರಕಾಶ್ ರೈ ಕಿಡಿ
'ಪದ್ಮಾವತಿ' ಚಿತ್ರತಂಡದ ಮೂಗು ತಲೆ ಕಡಿಯಬೇಕು ಎಂದು ಹೇಳಿರುವ ರಜಪೂತ ಕರ್ಣಿ ಸೇನಾ ಹೇಳಿಕೆಯನ್ನು ನಟ ಪ್ರಕಾಶ್ ರೈ ಕಟುವಾಗಿ ಟೀಕಿಸಿದ್ದಾರೆ.
ಬೆಂಗಳೂರು: 'ಪದ್ಮಾವತಿ' ಚಿತ್ರತಂಡದ ಮೂಗು ತಲೆ ಕಡಿಯಬೇಕು ಎಂದು ಹೇಳಿರುವ ರಜಪೂತ ಕರ್ಣಿ ಸೇನಾ ಹೇಳಿಕೆಯನ್ನು ನಟ ಪ್ರಕಾಶ್ ರೈ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಪ್ರಕಾಶ್ ರೈ, ಪದ್ಮಾವತಿ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದು, ಚಿತ್ರ ತಂಡದ ಮೇಲೆ ದಾಳಿ ಮಾಡಬೇಕು ಎನ್ನುವ ಸಂಘಟನೆಯ ನಡೆ ಸರಿಯಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಪೋಸ್ಟ್ ಒಂದರಲ್ಲಿ, "ಒಬ್ಬರು ಮೂಗು ಕತ್ತರಿಸಬೇಕೆಂದಿದ್ದರೆ, ಇನ್ನೊಬ್ಬರು ಕಲಾವಿದರೊಬ್ಬರ ತಲೆ ಕಡಿಯಬೇಕೆಂದಿದ್ದಾರೆ, ಮತ್ತೊಬ್ಬರು ನಟರೊಬ್ಬರನ್ನು ಗುಂಡಿಕ್ಕಬೇಕೆಂದಿದ್ದಾರೆ, ತೀರ್ಪುಗಾರರಿಂದ ಆರಿಸಲ್ಪಟ್ಟ ಕೆಲ ಚಲನಚಿತ್ರಗಳನ್ನು ಚಿತ್ರೋತ್ಸವದಿಂದ ತೆಗೆದು ಹಾಕಬೇಕೆಂದು ವ್ಯವಸ್ಥೆ ಬಯಸಿದೆ. ಆದರೂ ಅಸಹಿಷ್ಣುತೆಯ ಕೃತ್ಯಗಳಿಲ್ಲವೆಂದು ನಾವು ನಂಬಬೇಕೆಂದು ನೀವು ಬಯಸಿದ್ದೀರಿ, ಧ್ವನಿಗಳ ಅಡಗಿಸುವ ಕಾರ್ಯ ನಡೆಯುತ್ತಿದ್ದು, ಭಯಭೀತಗೊಳಿಸಲಾಗುತ್ತಿದೆ.. #ಜಸ್ಟ್ ಆಸ್ಕಿಂಗ್'' ಎಂದು ರೈ ಟ್ವೀಟ್ ಮಾಡಿದ್ದಾರೆ.
ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆಯ ಮೂಗನ್ನು ಶೂರ್ಪನಖಿಯಂತೆ ಕತ್ತರಿಸಲಾಗುವುದು ಎಂದು ರಜಪೂತ ಕರ್ಣಿ ಸೇನಾ ಈ ಹಿಂದೆ ಬೆದರಿಕೆ ಹಾಕಿತ್ತು. ಅಲ್ಲದೆ ಚಿತ್ರವನ್ನು ನಿಷೇಧಿಸಬೇಕೆಂಬ ಬೇಡಿಕೆಯನ್ನೂ ಮುಂದಿಟ್ಟಿದೆ. ಅಂತೆಯೇ ಪದ್ಮಾವತಿ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಮತ್ತು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ತಲೆ ಕತ್ತರಿಸಿದರೆ 5 ಕೋಟಿ ರು. ಬಹುಮಾನ ನೀಡುವುದಾಗಿ ಮೀರತ್ ನ ಕ್ಷತ್ರಿಯ ಸಮುದಾಯ ಬೆದರಿಕೆ ಹಾಕಿದೆ.
ಏತನ್ಮಧ್ಯೆ ಪದ್ಮಾವತಿ ವಿವಾದ ತಾರಕಕ್ಕೇರಿರುವಂತೆಯೇ ಅತ್ತ ರವಿ ಜಾಧವ್ ಅವರ ಮರಾಠಿ ಚಿತ್ರ ನ್ಯೂಡ್ ಹಾಗೂ ಸನಲ್ ಕುಮಾರ್ ಶಶಿಧರನ್ ಅವರ ಮಲಯಾಳಿ ಚಿತ್ರ ಎಸ್ ದುರ್ಗಾ ಎರಡನ್ನೂ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಿಂದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಕೈ ಬಿಟ್ಟಿದೆ. ಭಾರತೀಯ ಪನೋರಮಾ ವಿಭಾಗದಲ್ಲಿ ಈ ಚಿತ್ರಗಳು ಪ್ರದರ್ಶನಗೊಳ್ಳಬೇಕೆಂದು 13 ಮಂದಿ ತೀರ್ಪುಗಾರರ ತಂಡ ಆಯ್ಕೆ ಮಾಡಿತ್ತು.

