ರಾಜರಥ ನೋಡದವರು 'ಕಚಡಾ ನನ್ಮಕ್ಕಳು' ಹೇಳಿಕೆ: ಕ್ಷಮೆ ಯಾಚಿಸಿದ ಭಂಡಾರಿ ಬ್ರದರ್ಸ್!

ನಮ್ಮ ಸಿನಿಮಾ ನೋಡದವರು ‘ಕಚಾಡಾ ನನ್ಮಕ್ಳು’ ಎಂದು ಪ್ರೇಕ್ಷಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜರಥ ಸಿನಿಮಾದ ನಿರ್ದೇಶಕ ಅನೂಪ್​ ಭಂಡಾರಿ ಹಾಗೂ ನಟ ನಿರೂಪ್​ ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ನಮ್ಮ ಸಿನಿಮಾ ನೋಡದವರು ‘ಕಚಾಡಾ ನನ್ಮಕ್ಳು’ ಎಂದು ಪ್ರೇಕ್ಷಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜರಥ ಸಿನಿಮಾದ ನಿರ್ದೇಶಕ ಅನೂಪ್​ ಭಂಡಾರಿ ಹಾಗೂ ನಟ ನಿರೂಪ್​ ಭಂಡಾರಿ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆ ಯಾಚಿಸಿದ್ದಾರೆ.
ಖಾಸಗಿ ಸಂದರ್ಶನ ವೊಂದರಲ್ಲಿ ನಿರ್ದೇಶಕ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಹಾಗು ನಟಿ ಆವಂತಿಕಾ ಶೆಟ್ಟಿ ಪಾಲ್ಗೊಂಡಿದ್ದರು. ಈ ವೇಳೆ ನಿರೂಪಕರು ಕೇಳಿದ ರಾಜರಥ ಸಿನಿಮಾ ವೀಕ್ಷಿಸದ ಪ್ರೇಕ್ಷಕರು ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಅನೂಪ್ ಭಂಡಾರಿ, ಕಚಡಾ ನನ್ನ ಮಕ್ಕಳು ಎಂದು ಹೇಳಿಕೆ ನೀಡಿದ್ದರು. ಈ ಮಾತಿನ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿ, ಭಂಡಾರಿ ಸಹೋದರರ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿತ್ತು. 
ಆರ್​ಜೆ ರಾಪಿಡ್ ರಶ್ಮಿ ಟಾಕ್ ಶೋನಲ್ಲಿ ಪ್ರೇಕ್ಷಕರ ಕುರಿತು ‘ಕಚಡಾ’, ‘ಕಚಡಾ ನನ್ಮಕ್ಳು’ ಎಂದು ರಾಜರಥ ಚಿತ್ರದ ನಿರ್ದೇಶಕ ಅನೂಪ್​ ಭಂಡಾರಿ, ನಟಿ ಅವಂತಿಕಾ ಶೆಟ್ಟಿ ಹಾಗೂ ನಟ ನಿರೂಪ್​ ಭಂಡಾರಿ ತಿಳಿಸಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿತ್ತು. 
'ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗೂ ನೋವುಂಟು ಮಾಡಿರುವುದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ಈ ಸಂದರ್ಶನಕ್ಕೂ ಮುಂಚೆ ಹಲವಾರು ಒಳ್ಳೆಯ ಕನ್ನಡ ಸಿನಿಮಾ ಬಂದರು ಕೆಲವರು ಕನ್ನಡ ಸಿನಿಮಾ ನೋಡುವುದಿಲ್ಲ ಎಂಬ ಚರ್ಚೆಗಳಾಗಿತ್ತು. ಈ ಹಿನ್ನೆಲೆಯಲ್ಲಿ ಬಂದ ಆ ಪ್ರಶ್ನೆಗೆ ನಾವು ತಪ್ಪು ಉತ್ತರ ಕೊಟ್ಟಿದ್ದೇವೆ. ಇದು ಖಂಡಿತವಾಗಿಯೂ ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ. ನಾವು ಏನೇ ಯಶಸ್ಸು ಕಂಡಿದ್ದರೂ ಅದಕ್ಕೆ ಪ್ರೇಕ್ಷಕರೇ ಕಾರಣ’ ಎಂದು ಅವರು ಅನೂಪ್ ಭಂಡಾರಿ ಟ್ವೀಟ್​ ಮಾಡುವ ಮೂಲಕ ಕ್ಷಮೆ ಕೋರಿದ್ದಾರೆ.
‘ಕನ್ನಡ ಮತ್ತು ಕನ್ನಡ ಸಿನಿಮಾ ಬಗ್ಗೆ ನಮಗೆ ಅಪಾರ ಅಭಿಮಾನ, ಅದಕ್ಕಾಗಿಯೇ ಪ್ರತಿ ಹಾಡಿನಲ್ಲೂ ಅಚ್ಚ ಕನ್ನಡವನ್ನೇ ಬಳಸುತ್ತೇವೆ. ಕಾರ್ಯಕ್ರಮದಲ್ಲಿ ತಪ್ಪಾಗಿ ಆಡಿದ ಮಾತುಗಳನ್ನು ದಯವಿಟ್ಟು ಮನ್ನಿಸಿ. ಯಾರಿಗೂ ನೋವುಂಟು ಮಾಡಬೇಕು ಎನ್ನುವ ಉದ್ದೇಶ ನಮ್ಮದಲ್ಲ. ನಿಮ್ಮ ಆಶಿರ್ವಾದ ನಮ್ಮ ಮೇಲೆ ಸದಾ ಇರಲಿ’ ಎಂದು ನಿರೂಪ್ ಭಂಢಾರಿ ಕೂಡ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com