ಯಾವುದೇ ಕಾರಣಕ್ಕೂ ವಿಜಿಗೆ ವಿಚ್ಛೇದನ ನೀಡುವುದಿಲ್ಲ, ನನಗೆ ನ್ಯಾಯಕೊಡಿಸಿ: ಮಹಿಳಾ ಆಯೋಗಕ್ಕೆ ನಾಗರತ್ನ ಮನವಿ

ಯಾವುದೇ ಕಾರಣಕ್ಕೂ ತಾವು ದುನಿಯಾ ವಿಜಯ್ ಗೆ ವಿಚ್ಛೇದನ ನೀಡುವುದಿಲ್ಲ ಎಂದು ಅವರ ಪತ್ನಿ ನಾಗರತ್ನ ಅವರು ಹೇಳಿದ್ದಾರೆ.
ಮಹಿಳಾ ಆಯೋಗಕ್ಕೆ ನಾಗರತ್ನ ಮನವಿ
ಮಹಿಳಾ ಆಯೋಗಕ್ಕೆ ನಾಗರತ್ನ ಮನವಿ
ಬೆಂಗಳೂರು: ಯಾವುದೇ ಕಾರಣಕ್ಕೂ ತಾವು ದುನಿಯಾ ವಿಜಯ್ ಗೆ ವಿಚ್ಛೇದನ ನೀಡುವುದಿಲ್ಲ ಎಂದು ಅವರ ಪತ್ನಿ ನಾಗರತ್ನ ಅವರು ಹೇಳಿದ್ದಾರೆ.
ಸೋಮವಾರ ಮಹಿಳಾ ಆಯೋಗದ ಕಚೇರಿಗೆ ಭೇಟಿ ನೀಡಿದ್ದ ಅವರು, ಈ ವೇಳೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರನ್ನು ಭೇಟಿ ಮಾಡಿದರು. ಈ ವೇಳೆ ನಾಗರತ್ನಾ ಅವರು ತಮ್ಮ ಪರ ವಕೀಲೆ ಮೀರಾ ರಾಘವೇಂದ್ರ ಅವರಿಂದ ತಮ್ಮ ಮನವಿ ಸಲ್ಲಿಸಿದರು. ಅರ್ಜಿಯಲ್ಲಿ ನಾಗರತ್ನ ಅವರು, ದುನಿಯಾ ವಿಜಯ್ ಅವರು ದುರುದ್ದೇಶ ಪೂರ್ವಕವಾಗಿ ವಿಚ್ಛೇದನ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ ತಾವು ಯಾವುದೇ ಕಾರಣಕ್ಕೂ ವಿಚ್ಛೇದನ ನೀಡುವುದಿಲ್ಲ. ದಯವಿಟ್ಟು ನಮಗೆ ನ್ಯಾಯಕೊಡಿಸಿ ಎಂದು ನಾಗರತ್ನ ಮನವಿ ಮಾಡಿಕೊಂಡಿದ್ದಾರೆ.
ಅಂತೆಯೇ, 'ನಾನು ಉಳಿದುಕೊಂಡಿದ್ದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪ್ರದೇಶದ ನಿವಾಸವನ್ನು ವಿಜಯ್ ಅವರ ಸ್ನೇಹಿತ ಹಾಗೂ ನಿರ್ಮಾಪಕ ಸುಂದರ್ ಗೌಡ ಅವರಿಗೆ ನೀಡಿದ್ದಾರೆ. ಆ ಮನೆ ತಮಗೇ ದಕ್ಕಬೇಕು.  ಚೆನ್ನಮ್ಮನ ಕೆರೆ ಅಚ್ಚುಕಟ್ಟು ಏರಿಯಾದಲ್ಲಿರುವ ವಿಜಿಯವರ ಮತ್ತೊಂದು ಮನೆಯಲ್ಲಿ ವಿಜಿ ಆಪ್ತ ನಿರ್ಮಾಪಕ ಸುಂದರ್​ ಗೌಡ ವಾಸಿಸುತ್ತಿದ್ದಾರೆ. ಆ ಮನೆಯನ್ನು ನಮಗೆ ಗೊತ್ತಿಲ್ಲದಂತೆ ವಿಜಯ್​, ಸುಂದರ್​ ಗೌಡರಿಗೆ ಮಾರಿದ್ದಾರೆ ಎಂದು ನಾಗರತ್ನಾ ಆರೋಪಿಸಿದ್ದಾರೆ.
ಇನ್ನು ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಅವರು, ನಟ ದುನಿಯಾ ವಿಜಿ ಪತ್ನಿ ನಾಗರತ್ನಾ ದೂರು ಕೊಟ್ಟಿದ್ದಾರೆ. ದೂರಿನ ಜೊತೆಗೆ ಒಂದು ಗಂಟೆ ಕಾಲ ಮಾತನಾಡಿದ್ದಾರೆ. ಇದು ಕೋರ್ಟ್ ಕೇಸ್ ಆಗಿದ್ದು,ಗಂಭೀರ ಪ್ರಕರಣವಾಗಿದೆ. ಯಾವುದೇ ಕಾರಣಕ್ಕೂ ಡಿವೋರ್ಸ್ ಕೊಡುವುದಿಲ್ಲ, ಹೀಗಾಗಿ ನನಗೆ ನ್ಯಾಯ ಕೊಡಿಸಿ. ಮಕ್ಕಳು ಡಿಪ್ರೆಷನ್ ಗೆ ಹೋಗಿದ್ದಾರೆ. ಹೀಗಾಗಿ ದಯವಿಟ್ಟು ನ್ಯಾಯ ಕೊಡಿಸಿ ಎಂದು ನಾಗರತ್ನಾ ಮನವಿ ಮಾಡಿದ್ದಾರೆ. ಹೀಗಾಗಿ ಕೆಲವೇ ದಿನಗಳಲ್ಲಿ ದುನಿಯಾ ವಿಜಿಯವರನ್ನ ಕರೆಸಿ ವಿಚಾರಣೆ ನಡೆಸುತ್ತೇವೆ ಎಂದು ಹೇಳಿದರು. 
ಮತ್ತೊಂದೆಡೆ ದುನಿಯಾ ವಿಜಿ ಅವರು ಜೀವನಾಂಶದ ಸಮಯದಲ್ಲಿ ಎಲ್ಲವನ್ನೂ ಕೊಡುತ್ತೇನೆ ಎಂದು ಹೇಳಿದ್ದರು. ಆದರೀಗ ಸುಂದರ್ ಗೌಡ ಅವರಿಗೆ ಮನೆ ಯಾಕೆ ಕೊಟ್ರು ಅನ್ನೋದು ಗೊತ್ತಿಲ್ಲ. ನಮಗೆ ಸಮಸ್ಯೆಯಾಗಿರೋದನ್ನ ಬಗೆಹರಿಸಿ ಎಂದು ನಾಗರತ್ನಾ ಮನವಿ ಮಾಡಿದರು. ಹಾಗಾಗಿ, ಇದೇ ತಿಂಗಳ 13ರಂದು ವಿಜಯ್​ ಅವರನ್ನು ಕರೆಸಿ ಸಂಧಾನ‌ ನಡೆಸಲು ನಿರ್ಧರಿಸಲಾಗಿದೆ ಎಂದು ನಾಗಲಕ್ಷ್ಮೀ ಬಾಯಿ ಹೇಳಿದರು.
ಇದೇ ವೇಳೆ ಮಾತನಾಡಿದ ನಾಗರತ್ನಾ ಪರ ವಕೀಲೆ ಮೀರಾ ರಾಘವೇಂದ್ರ, ಮಹಿಳಾ ಆಯೋಗ ಅಂದ್ರೇನೆ ಮಹಿಳೆಯರ ಸಮಸ್ಯೆ ಹೇಳಿಕೊಳ್ಳೋದು. ಪರಿಶೀಲಿಸಿ, ನ್ಯಾಯ ಕೊಡಿಸ್ತೀವಿ ಅಂದಿದ್ದಾರೆ.  ನ್ಯಾಯ ದಕ್ಕುವ ವಿಶ್ವಾಸ ಇದೆ. ಅವರ ಪರವಾಗಿ ನಾನು ನಿಂತಿದ್ದೇನೆ. ಮನೆ ಬಗ್ಗೆ ನಾವು ಏನೂ ಹೇಳಲಾಗಲ್ಲ. ಅದು ಸಿವಿಲ್ ಪ್ರಕರಣ. ಹಾಗಾಗಿ ಸುಮ್ಮನಿದ್ದೇವೆ. ಆದರೆ ವಿಜಯ್ ಜೀವನಾಂಶ ಕೊಡ್ತೀನಿ ಅಂದಿದ್ದಾರೆ. ಆದರೆ ಈಗ ಮೂರು ತಿಂಗಳಿನಿಂದ ಜೀವನಾಂಶ ಕೊಟ್ಟಿಲ್ಲ. ಮಕ್ಕಳು ಕೂಡ ನಾಗರತ್ನಾ ಜೊತೆ ಇದ್ದಾರೆ, ಮನೆ‌ ನಡೆಸಲು ಕಷ್ಟವಾಗ್ತಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com