ಸ್ಯಾಂಡಲ್ವುಡ್ ನ ರಾಕಿಂಗ್ ಸ್ಟಾರ್ ಯಶ್ ಸಹಾಯದ ಋಣವನ್ನು ತೀರಿಸುವ ಸೌಭಾಗ್ಯ ಕೆಜಿಎಫ್ ಚಿತ್ರದ ಮೂಲಕ ಬಂದಿದೆ ಎಂದು ತಮಿಳಿನ ನಟ ವಿಶಾಲ್ ಹೇಳಿದ್ದಾರೆ.
2015ರಲ್ಲಿ ಜಲಪ್ರಳಯದಿಂದಾಗಿ ಮಹಾನಗರಿ ಚೆನ್ನೈ ನೀರಿನಲ್ಲಿ ಮುಳುಗಿಹೋಗಿತ್ತು. ಆಗ ಜನರಿಗೆ ತಿನ್ನಲು ಆಹಾರವಿಲ್ಲದೆ, ತೊಡಲು ಬಟ್ಟೆಯಿಲ್ಲದೆ ಬೀದಿಗೆ ಬಂದಿದ್ದರು. ಇಂತಹ ಸಂದರ್ಭದಲ್ಲಿ ಯಶ್ ಚೆನ್ನೈ ಜನತೆಯ ಸಹಾಯಕ್ಕೆ ನಿಂತಿದ್ದರು.
ಅಂದು ನಾನು ಜನರಿಗೆ ಸಹಾಯ ಬೇಕು ಎಂದು ಕೇಳಿದ್ದೆ. ಆಗ ನಟ ಯಶ್ ಒಂದು ಟ್ರಕ್ ತುಂಬ ವಸ್ತುಗಳನ್ನು ಕಳುಹಿಸಿದ್ದರು. ಅದು ಕರ್ನಾಟಕದಿಂದ ಬಂದ ಮೊದಲ ಟ್ರಕ್ ಆಗಿತ್ತು. ನಾನು ಕರೆ ಮಾಡಿದ 12 ಗಂಟೆಗಳಲ್ಲಿ ಅಲ್ಲಿಂದ ಟ್ರಕ್ ಬಂದಿತ್ತು. ಅದನ್ನು ನಾವು ಚೆನ್ನೈನ ಹಲವು ಭಾಗಗಳಲ್ಲಿ ಹಂಚಿದ್ದೇವು ಎಂದು ವಿಶಾಲ್ ಹೇಳಿದ್ದಾರೆ.
ಅಂದು ಯಶ್ ಮಾಡಿದ್ದ ಸಹಾಯವನ್ನು ಇವತ್ತಿಗೂ ಮರೆತಿಲ್ಲ. ಆದ್ದರಿಂದ ಅವರ ಋಣವನ್ನು ತೀರಿಸಬೇಕು ಎಂದುಕೊಂಡಿದ್ದೆ. ಆ ಅವಕಾಶ ಈಗ ಬಂದಿದ್ದು ಕೆಜಿಎಫ್ ಚಿತ್ರವನ್ನು ನಾವು ಬಿಡುಗಡೆ ಮಾಡಿ ಯಶಸ್ಸು ನೀಡಬೇಕು ಅಂತ ತೀರ್ಮಾನಿಸಿದೆ ಎಂದು ವಿಶಾಲ್ ಹೇಳಿದ್ದಾರೆ.