'ಕೆಜಿಎಫ್' ಅ​ನ್ನೇ ಅಡವಿಟ್ಟಿದ್ದರು ಪ್ರಧಾನಿ ಜವಹರ್ ಲಾಲ್ ನೆಹರು!

ಅರೇ ಇದೇನಿದೂ ಎಲ್ಲಿನ ಕೆಜಿಎಫ್ ಚಿತ್ರ..? ಎಲ್ಲಿನ ವಿಶ್ವಬ್ಯಾಂಕ್..? ಎಲ್ಲಿನ ನೆಹರು..? ಎಂಬುದು ನಿಮ್ಮ ಪ್ರಶ್ನೆಯಾದರೆ ಇದಕ್ಕೆ ಉತ್ತರ ಇಲ್ಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬ್ರಿಟೀಷ್ ಆಡಳಿತದಿಂದ ಆಗ ತಾನೇ ಸ್ವತಂತ್ರಗೊಂಡಿದ್ದ ಭಾರತಕ್ಕೆ ವಿಶ್ವಬ್ಯಾಂಕ್ ಸಾಲ ನೀಡಲು ನಿರಾಕರಿಸಿದ್ದಾಗ ಅಂದಿನ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರೂ ಕೆಜಿಎಫ್ ಅನ್ನು ವಿಶ್ವಬ್ಯಾಂಕ್ ಗೆ ಅಡವಿಟ್ಟಿದ್ದರು.
ಅರೇ ಇದೇನಿದೂ ಎಲ್ಲಿನ ಕೆಜಿಎಫ್ ಚಿತ್ರ..? ಎಲ್ಲಿನ ವಿಶ್ವಬ್ಯಾಂಕ್..? ಎಲ್ಲಿನ ನೆಹರು..? ಎಂಬುದು ನಿಮ್ಮ ಪ್ರಶ್ನೆಯಾದರೆ ಇದಕ್ಕೆ ಉತ್ತರ ಇಲ್ಲಿದೆ. ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಯಾವ ಮಟ್ಟಿಗೆ ಅಂದರೆ, ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಕನ್ನಡದ ಚಿತ್ರವೊಂದು ಇಷ್ಟೊಂದು ಪ್ರಚಾರ ಪಡೆದದ್ದು ಇದೇ ಮೊದಲು. ನಿಜ ಹೇಳಬೇಕು ಅಂದ್ರೆ, ಕೆಜಿಎಫ್ ಚಿತ್ರದಂತೆಯೇ ಆ ಊರಿನ ಹೆಸರು ಭಾರತೀಯ ಇತಿಹಾಸದಲ್ಲಿ ಅತ್ಯಂತ ವೈಭವೋಪೇತ ಹೆಸರಾಗಿ ಉಳಿದಿದೆ. ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇ ಕೆಜಿಎಫ್​.
ಭಾರತೀಯ ಇತಿಹಾಸಕ್ಕೆ ಬಂಗಾರದ ಯುಗವನ್ನ ತಂದು ಕೊಟ್ಟ ಹೆಸರು ಕೆಜಿಎಫ್​. ಹೀಗಾಗಿಯೇ ಕೆಜಿಎಫ್​ನ್ನ ಬಂಗಾರದ ಊರು ಎಂದೇ ಕರೆಯಲಾಗಿತ್ತು. ಇಲ್ಲಿನ ಮಣ್ಣಿನ ಕಣ ಕಣದಲ್ಲೂ ಬಂಗಾರ ಬೆರೆತು ಹೋಗಿತ್ತು. ಇದೇ ಕಾರಣಕ್ಕೆ ಕೆಜಿಎಫ್​ನ್ನ ಬ್ರಿಟೀಷರು ಮಿನಿ ಲಂಡನ್​ ಎನ್ನುವ ಹೆಸರಿನಿಂದ ಕರೆದರು. ಕೆಜಿಎಫ್​ನ ಇತಿಹಾಸವೇ ರೋಮಾಂಚನಗೊಳಿಸುವಂಥಾದ್ದು. ಪ್ರತಿ ಕನ್ನಡಿಗ ಕೂಡ ಹೆಮ್ಮೆ ಪಡುವಂಥಾದ್ದು.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರಕ್ಕೆ ಕೆಜಿಎಫ್ ಎಂದು ಹೆಸರಿಟ್ಟ ಬಳಿಕ ಈಗ ಈ ಜಾಗದ ಹೆಸರು ಹೆಚ್ಚು ಚಾಲ್ತಿಯಲ್ಲಿದೆ. ಆದರೆ ದಶಕಗಳ ಹಿಂದೆ ಇಡೀ ಭಾರತ ದೇಶವೇ ಕಡು ಬಡತನದ ಬೇಗುದಿಯಲ್ಲಿ ಬೇಯುತ್ತಿದ್ದಾಗ ಆಗ ನೆರವಾಗಿದ್ದು ಇದೇ ಕೆಜಿಎಫ್.
ಕೆಜಿಎಫ್ ಅ​ನ್ನೇ ಅಡವಿಟ್ಟಿದ್ದರು ಪ್ರಧಾನಿ ಜವಹರ್ ಲಾಲ್ ನೆಹರು
1947 ಆಗಸ್ಟ್​ 15ರಂದು ಭಾರತ ಸ್ವಾತಂತ್ರ್ಯಗೊಂಡಾಗ ದೇಶದಲ್ಲಿ ಬಡತನ ತಾಂಡವವಾಡುತ್ತಿತ್ತು. ನಿರಂತರ ಬರಗಾಲ, ನಿರುದ್ಯೋಗ, ದೇಶ ವಿಭಜನೆಯಿಂದಾಗಿ ಎಲ್ಲೆಡೆ ದೊಂಬಿ ಗಲಾಟೆ, ಕೋಮು ಗಲಭೆಗಳು, ಇಂಥಹ ಸಾಲು ಸಾಲು ಸಮಸ್ಯೆಗಳು ಪ್ರಧಾನಿ ಜವಾಹರಲಾಲ್​ ನೆಹರು ಅವರಿಗೆ ದೊಡ್ಡ ಸವಾಲನ್ನೇ ಮುಂದಿಟ್ಟಿದ್ದವು. ಭಾರತ ದೇಶವನ್ನ ಕಟ್ಟಬೇಕು ಅಂದರೆ, ವಿಶ್ವಬ್ಯಾಂಕ್ ನಲ್ಲಿ ಸಾಲ ಪಡೆಯಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ಭಾರತಕ್ಕೆ ಸಾಲ ಕೊಡಲು ವಿಶ್ವ ಬ್ಯಾಂಕ್​ ಸಿದ್ಧವಿರಲಿಲ್ಲ. 
ಬಡತನದ ಬೇಗುದಿಯಲ್ಲಿ ಬೇಯುತ್ತಿದ್ದ ಭಾರತಕ್ಕೆ ಕೊಟ್ಟ ಸಾಲ ವಾಪಾಸ್​ ಬರುತ್ತೆ ಎನ್ನುವ ಯಾವುದೇ ಗ್ಯಾರಂಟಿ ವಿಶ್ವಬ್ಯಾಂಕ್ ಗೆ ಇರಲಿಲ್ಲ. ಇದೇ ಕಾರಣಕ್ಕೆ ಸಾಲ ನೀಡಲು ಶೂರಿಟಿ (ಜಾಮೀನು) ಕೇಳಿತ್ತು. ವಿಶ್ವಬ್ಯಾಂಕ್ ನಿಂದ ಸಾಲ ಪಡೆಯೋಕೆ ನೆಹರು, ದೇಶದ ಯಾವುದಾದರು ಬೆಲೆ ಬಾಳುವ ಪ್ರದೇಶವನ್ನ ಅಡವಿಡುವ ಚಿಂತನೆ ಮಾಡುತ್ತಾರೆ. ಆಗ ಅವರ ನೆನಪಿಗೆ ಬಂದಿದ್ದೇ ಬಂಗಾರದ ಮೊಟ್ಟೆಗಳನ್ನ ತನ್ನೊಡಲಿನಲ್ಲಿ ಇಟ್ಟುಕೊಂಡಿದ್ದ ಕೆಜಿಎಫ್​. ಕೋಲಾರ ಗೋಲ್ಡ್​ ಫೀಲ್ಡ್​​​​ ಎನ್ನುವ ಚಿನ್ನದ ಭೂಮಿಯನ್ನ ಅಡವಿಡಲು ಪ್ರಧಾನಿ ನೆಹರು ನಿರ್ಧರಿಸಿದ್ದರು. ಕೆಜಿಎಫ್​ ಹೆಸರು ಕೇಳುತ್ತಿದ್ದಂತೆ ವಿಶ್ವಬ್ಯಾಂಕ್ ಭಾರತಕ್ಕೆ ಸಾಲವನ್ನ ವಿತರಿಸಿತ್ತು. 
ಸ್ವತಂತ್ರ ಭಾರತದ ಅಭಿವೃದ್ಧಿಗೆ ಕೆಜಿಎಫ್​ನ ಪಾತ್ರ ಬಹಳಷ್ಟಿದೆ. ಕೆಜಿಎಫ್​ ಇಲ್ಲದೇ ಹೋಗಿದ್ದಿದ್ದರೆ, ಸ್ವತಂತ್ರ ಭಾರತಕ್ಕೆ ಸಾಲ ಕೂಡ ಸಿಗುತ್ತಿರಲಿಲ್ಲ. ಕನ್ನಡಿಗರ ಹೆಮ್ಮೆಯ ಭೂಮಿಯನ್ನ ಅಡವಿಟ್ಟಂತಾ ನೆಹರು ಅವರು ಸಾಲ ಪಡೆದು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು. ಜಲಾಶಯಗಳನ್ನ ನಿರ್ಮಿಸಿದರು, ರಸ್ತೆಗಳನ್ನ ನಿರ್ಮಾಣ ಮಾಡಿದರು. ಶಾಲೆ, ಆಸ್ಪತ್ರೆ, ವಿಜ್ಞಾನ, ತಂತ್ರಜ್ಞಾನ, ಒಂದಾ ಎರಡಾ.. ಭಾರತ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲೋಕೆ ಬೇಕಾದ ಅಡಿಪಾಯವನ್ನ ನೆಹರು ಅಂದೇ ಹಾಕಿ ಕೊಟ್ಟರು. ನಮ್ಮ ದೇಶದ ಅಡಿಪಾಯ ಭದ್ರಗೊಳ್ಳೋಕೆ ಕಾರಣವೇ ಕನ್ನಡಿಗರ ಕೆಜಿಎಫ್​ ಎನ್ನುವುದನ್ನ ದೇಶ ಮರೆಯುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com