#MeToo ಎಫೆಕ್ಟ್: ಶೃತಿ ಮೇಲೆ ಸಿಟ್ಟು ನಾತಿಚರಾಮಿಗೆ ಪೆಟ್ಟು!

ಇತ್ತೀಚಿನ ಚಿತ್ರ 'ನಾತಿಚರಾಮಿ' ಮೇಲೆ ನಟಿ ಶೃತಿ #ಮೀಟೂ ಆರೋಪ ಪರಿಣಾಮ ಬೀರಿದ್ದು ಖ್ಯಾತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣ ಬುಕ್ ಮೈ ಶೋದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಹಿರಿಯ ನಟ ಅರ್ಜುನ್ ಸರ್ಜಾ ಅವರ ವಿರುದ್ಧ ಮೀಟೂ ಆರೋಪ ಮಾಡಿ ಸುದ್ದಿಗೆ ಗ್ರಾಸವಾಗಿದ್ದ ನಟಿ ಶೃತಿ ಹರಿಹರನ್ ವಿರುದ್ಧ ಕೆಲವರ ಕೋಪ ಇನ್ನೂ ತಣ್ಣಗಾಗಿಲ್ಲ.. ಅವರ ಇತ್ತೀಚಿನ ಚಿತ್ರ 'ನಾತಿಚರಾಮಿ' ಮೇಲೆ ಇದು ಪರಿಣಾಮ ಬೀರಿದ್ದು ಖ್ಯಾತ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ತಾಣ ಬುಕ್ ಮೈ ಶೋದಲ್ಲಿ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿವೆ.
ಯುವ ನಿರ್ದೇಶಕ ಮಂಸೋರೆ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ 'ನಾತಿಚರಾಮಿ' ವಿಭಿನ್ನ ಕಥಾ ಹಂದರದ ಚಿತ್ರ ಎನ್ನುವುದರ ಜತೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕಲಾವಿದರ ಚಿತ್ರ ಎನ್ನುವುದಕ್ಕೂ ಇದು ತೀವ್ರ ಕುತೂಹಲ ಮೂಡಿಸಿತ್ತು. ಅಲ್ಲದೆ ಈ ಹಿಂದೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದಾಗ ಟ್ರೈಲರ್ ಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿತ್ತು. ಇದೀಗ ಚಿತ್ರ ತೆರೆ ಕಂಡಿದ್ದು, ನಿರೀಕ್ಷೆಯಂತೆ ಚಿತ್ರಕ್ಕೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆಯೂ ಸಿಕ್ಕಿದೆ.
ಅಲ್ಲದೆ ಖ್ಯಾತನಾಮ ಸಿನಿಮಾ ವಿಮರ್ಶಕರೂ ಮಂಸೋರೆ ನಿರ್ದೇಶನ ಮತ್ತು ನಟರಾದ ಸಂಚಾರಿ ವಿಜಯ್ ಮತ್ತು ಶೃತಿಹರಿಹರನ್ ಅವರ ನಟನೆಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಅಂತೆಯೇ ಚಿತ್ರ ನೋಡಿದ ಪ್ರೇಕ್ಷಕರು ಒಂದೊಳ್ಳೆಯ ಪ್ರಯತ್ನ ಎನ್ನುವ ಮಾತುಗನ್ನು ಹೇಳಿ ಬೆನ್ನುತಟ್ಟಿದ್ದಾರೆ. ಕತೆಯ ಜತೆಗೆ ಕಲಾವಿದರ ಅಭಿನಯವೂ ಪ್ರೇಕ್ಷಕರಿಗೆ ಹಿಡಿಸಿದೆ. ಆದರೆ ಖ್ಯಾತ ಆನ್ ಲೈನ್ ಸಿನಿಮಾ ಟಿಕೆಟ್ ಬುಕ್ಕಿಂಗ್ ತಾಣ ಬುಕ್ ಮೈ ಶೋನ ಯೂಸರ್ಸ್ ರಿವ್ಯೂ ನಲ್ಲಿ ಚಿತ್ರದ ಕುರಿತು ಕೆಲವರು ನಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದು, ಮೀಟೂ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ವಿರುದ್ದ ಆಕ್ರೋಶ ಮುಂದುವರೆಸಿದ್ದಾರೆ.
 ಆದರೆ, ಬುಕ್ ಮೈ ಷೋನ ಯೂಸರ್ಸ್ ರಿವ್ಯೂನಲ್ಲಿ ಕೆಲವರು ಚಿತ್ರದ ನಾಯಕಿ ಶ್ರುತಿ ಅವರನ್ನು ಗುರಿಯಾಗಿಸಿಕೊಂಡು ಚಿತ್ರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ.  ಮೀಟೂ ಆರೋಪವನ್ನು ಗುರಿಯಾಗಿಸಿಕೊಂಡು ಶ್ರುತಿ ಹರಿಹರನ್ ಅವರಿದ್ದಾರೆನ್ನುವ ಕಾರಣಕ್ಕಾಗಿಯೇ 'ನಾತಿಚರಾಮಿ' ಚಿತ್ರದ ವಿರುದ್ಧವೂ ಮಾತನಾಡುತ್ತಿದ್ದಾರೆ. ಇನ್ನೂ ಕೆಲವರು ಮಂಸೋರೆ ನಿರ್ದೇಶನ ಮತ್ತು ಸಂಚಾರಿ ವಿಜಯ್ ನಟನೆಗೆ ಅಭಿನಂದನೆ ಸಲ್ಲಿಸಿದ್ದಾರೆಯಾದರೂ ನಟಿ ಶೃತಿ ಹರಿಹರನ್ ಇದ್ದಾರೆ ಎನ್ನುವ ಕಾರಣಕ್ಕೇ ತಾವು ಸಿನಿಮಾ ವೀಕ್ಷಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಆದರೆ ಶ್ರುತಿ ಹರಿಹರನ್ ವಿರುದ್ಧದ ಸಿಟ್ಟನ್ನು ಚಿತ್ರದ ಮೇಲೆ ತೀರಿಸಿಕೊಳ್ಳುತ್ತಿರುವುದು ಚಿತ್ರತಂಡಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದೇ ಕಾರಣಕ್ಕೆ ಇದರ ವಿರುದ್ಧ ಚಿತ್ರತಂಡ ಧ್ವನಿ ಎತ್ತಿದ್ದು, 'ಯಾರೋದೋ ಮೇಲಿನ ದ್ವೇಷಕ್ಕೆ ಇನ್ಯಾರನ್ನೋ ಟಾರ್ಗೆಟ್ ಮಾಡುವುದು ಸರಿಯಲ್ಲ. ಕಷ್ಟ ಪಟ್ಟು ಬಂಡವಾಳ ಹಾಕಿ, ಸಿನಿಮಾ ಮಾಡಿವರಿಗೆ ಅವರ ಕಷ್ಟ ಏನು ಅನ್ನೋದು ಮಾತ್ರ ಗೊತ್ತಿರುತ್ತದೆ. ಯಾರೋ ಇನ್ನಾವುದೋ ಸಂದರ್ಭದಲ್ಲಿ ಮಾತನಾಡಿದರು ಎನ್ನುವ ಕಾರಣಕ್ಕೆ ಒಂದು ಚಿತ್ರದ ವಿರುದ್ಧವೇ ಮಾತನಾಡುವುದು, ಚಿತ್ರವೇ ಸರಿಯಿಲ್ಲ, ನೋಡಬೇಡಿ ಅಂತ ಅಪಪ್ರಚಾರ ಮಾಡುವುದು ಸರಿಯಲ್ಲ' ಎಂದು ಪ್ರತಿಕ್ರಿಯಿಸಿದೆ.
ಒಟ್ಟಾರೆ ಯಾರದ್ದೋ ಮೇಲಿನ ಕೋಪಕ್ಕೆ ಇಡೀ ಚಿತ್ರವನ್ನು ಗುರಿಯಾಗಿಸಿಕೊಂಡು ಕೆಲವರು ಮಾಡುತ್ತಿರುವ ಟೀಕೆಗಳು ಮತ್ತು ಆಕ್ರೋಶ ಕನ್ನಡ ಚಿತ್ರರಂಗ ಅಭಿವೃದ್ಧಿ ನಿಟ್ಟಿನಲ್ಲಿ ಸರಿಯಲ್ಲ, ಚಿತ್ರೋಧ್ಯಮದ ಬೆಳವಣಿಗೆಗೆ ಇವು ಖಂಡಿತಾ ನಕಾರಾತ್ಮಕ ಅಂಶಗಳಾಗುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com