'ಮಾಸ್ತಿಗುಡಿ' ದುರಂತ: ಆರೋಪಿ ತಪ್ಪಿಸಿಕೊಳ್ಳಲು ನೆರವಾದ ಆರೋಪ, ನಟ ದುನಿಯಾ ವಿಜಿ ವಿರುದ್ಧ ಎಫ್ ಐಆರ್

ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ನಟರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿರ್ಮಾಪಕ ಸುಂದರ್ ಪಿ ಗೌಡ ಪರಾರಿಯಾಗಲು ನೆರವಾದ ಆರೋಪದ ಮೇರೆಗೆ ನಟ ದುನಿಯಾ ವಿಜಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಮಾಸ್ತಿಗುಡಿ ಚಿತ್ರದ ಚಿತ್ರೀಕರಣದ ವೇಳೆ ಇಬ್ಬರು ನಟರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಿರ್ಮಾಪಕ ಸುಂದರ್ ಪಿ ಗೌಡ ಪರಾರಿಯಾಗಲು ನೆರವಾದ ಆರೋಪದ ಮೇರೆಗೆ ನಟ ದುನಿಯಾ ವಿಜಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ತಾವರಕೆರೆ ಠಾಣೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ನಟ ದುನಿಯಾ ವಿಜಯ್ ವಿರುದ್ಧ ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಸಂಬಂಧ ಹೆಡ್ ಕಾನ್‌ಸ್ಟೆಬಲ್‌ ಗೋವಿಂದರಾಜು ದೂರು ದಾಖಲಿಸಿದ್ದು, ಚನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ (ಐಪಿಸಿ ಸೆಕ್ಷನ್ 353) ಹಾಗೂ ಬಂಧನದಲ್ಲಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಸಹಕಾರ (ಐಪಿಸಿ 225) ಆರೋಪದಡಿ ವಿಜಯ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 
2016ರ ನವೆಂಬರ್ 7ರಂದು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ 'ಮಾಸ್ತಿಗುಡಿ' ಸಿನಿಮಾ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಕಲಾವಿದರಾದ ಅನಿಲ್ ಹಾಗೂ ರಾಘವ್ ಉದಯ್ ಮೃತಪಟ್ಟಿದ್ದರು. ಸಿನಿಮಾ ನಿರ್ಮಾಪಕ ಪಿ.ಸುಂದರ್‌ ಗೌಡ, ನಿರ್ದೇಶಕ, ಸಾಹಸ ನಿರ್ದೇಶಕ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ತಾವರಕೆರೆ ಪೊಲೀಸರು, ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ರಾಮನಗರ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದು, ವಿಚಾರಣೆಗೆ ನಿರ್ಮಾಪಕ ಪಿ.ಸುಂದರ್‌ ಗೌಡ ನಿರಂತರವಾಗಿ ಗೈರಾಗಿದ್ದರು. ಅದೇ ಕಾರಣಕ್ಕೆ ಅವರನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.
ಈ ಹಿನ್ನಲೆಯಲ್ಲಿ ವಾರಂಟ್ ಸಮೇತ ಚನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಪಿ.ಸುಂದರ್‌ಗೌಡ ಮನೆಗೆ ಪೊಲೀಸರು ಬುಧವಾರ ರಾತ್ರಿ 10.30 ಗಂಟೆ ಸುಮಾರಿಗೆ ಹೋಗಿದ್ದರು. ಆದರೆ ಅದೇ ವೇಳೆ ಸುಂದರ್‌ ಗೌಡ, ದುನಿಯಾ ವಿಜಯ್‌ ಹಾಗೂ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ವಿಜಯ್, ಪೊಲೀಸರನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದರು. ಈ ವೇಳೆ ವಿಜಯ್, 'ಸುಂದರ್‌ ಗೌಡ ತಾಯಿಗೆ ಹುಷಾರಿಲ್ಲ. ರಾತ್ರಿಯೇ ಆತನನ್ನು ಬಂಧಿಸಿ ಕರೆದೊಯ್ದರೆ, ಆಕೆಗೆ ತೊಂದರೆ ಆಗುತ್ತದೆ. ನಾಳೆ ನಾನೇ ಆತನನ್ನು ಠಾಣೆಗೆ ಕರೆದುಕೊಂಡು ಬರುತ್ತೇನೆ. ಈಗ ವಾಪಸ್‌ ಹೋಗಿ' ಎಂದು ವಿಜಯ್‌ ಹೇಳಿದ್ದರು. ಅದಕ್ಕೆ ಪೊಲೀಸರು ಒಪ್ಪದಿದ್ದಾಗ, ಮನವೊಲಿಸಲು ಯತ್ನಿಸಿದ್ದರು.
ಇದೇ ಸಂದರ್ಭದಲ್ಲಿ ಆರೋಪಿ ಸುಂದರ್‌ಗೌಡ, ಮನೆಯ ಹಿಂದಿನ ಬಾಗಿಲಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ. ಅದು ಗೊತ್ತಾಗುತ್ತಿದ್ದಂತೆ ವಿಜಯ್‌ ಅವರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು. ರಾತ್ರಿ 3 ಗಂಟೆಗೆ ಠಾಣೆಗೆ ಬಂದು ದೂರು ದಾಖಲಿಸಿದರು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ವಿವರಿಸಿದ್ದಾರೆ. 'ಗುರುವಾರ ಬೆಳಿಗ್ಗೆ ಸುಂದರ್‌ಗೌಡ ಹಾಗೂ ವಿಜಯ್‌ ಮನೆಗೆ ಹೋಗಿ ಪರಿಶೀಲನೆ ನಡೆಸಿದೆವು. ಆದರೆ, ಅವರು ಮನೆಯಲ್ಲಿರಲಿಲ್ಲ. ಅವರ ಸಂಬಂಧಿಕರು ಹಾಗೂ ಸ್ನೇಹಿತರಿಂದ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ' ಎಂದು ಪೊಲೀಸರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com