

ಬೆಂಗಳೂರು: ಮೂರು ದಿನಗಳ ಹಿಂದೆ ನಗರದಲ್ಲಿ ಬೆಜೆಪಿ ಪರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಲು ಬಂದಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ನಟ ಪುನೀತ್ ರಾಜಕುಮಾರ್ ದಂಪತಿ ಭೇಟಿ ಮಾಡಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದಕ್ಕೆ ಸಾಕಷ್ಟು ಚರ್ಚೆ, ಪರ-ವಿರೋಧ ವ್ಯಕ್ತವಾಗಿತ್ತು. ಚುನಾವಣೆ ಸಂದರ್ಭದಲ್ಲಿ ಭೇಟಿಯಾಗಿರುವುದು ಸಾಕಷ್ಟು ಊಹಾಪೋಹಗಳನ್ನು ಸಹ ಸೃಷ್ಟಿಸಿತ್ತು.
ಆದರೆ ಇದೀಗ ಭೇಟಿಯ ಬಗ್ಗೆ ಸ್ವತಃ ಪುನೀತ್ ರಾಜಕುಮಾರ್ ಅವರೇ ಸ್ಪಷ್ಟೀಕರಣ ನೀಡಿದ್ದಾರೆ. ಇದು ದೇಶದ ಪ್ರಧಾನಿಗೆ ಗೌರವ ಸಲ್ಲಿಸಲು ಸಿಕ್ಕ ಅವಕಾಶ, ಯಾವುದೇ ರಾಜಕೀಯ ಉದ್ದೆಶದಿಂದ ಅವರನ್ನು ಭೇಟಿ ಮಾಡಿಲ್ಲ ಎಂದು ಹೇಳಿದ್ದಾರೆ.
‘ಮೋದಿಯವರು ಸಾಕಷ್ಟು ಕಾರ್ಯಕ್ರಮಗಳಲ್ಲಿ ಅಪ್ಪಾಜಿಯವರ ಹೆಸರನ್ನು ಹೇಳಿ, ಅವರಿಗೆ ಗೌರವ ಸಲ್ಲಿಸಿದ್ದರು. ಅಪ್ಪಾಜಿಯವರಿಗೆ ದೇಶದ ಪ್ರಧಾನಿ ಗೌರವ ಸಲ್ಲಿಸಿದಾಗ ಅವರಿಗೆ ನಾವೂ ಗೌರವ ಸಲ್ಲಿಸಬೇಕು ಎಂಬ ಉದ್ದೇಶದಿಂದ ನಾನು ಮತ್ತು ನನ್ನ ಪತ್ನಿ ಭೇಟಿ ಮಾಡಿದೆವು. ಅಲ್ಲದೇ ಅವರಿಗೆ ನಾನು ಬರೆದಿದ್ದ ಅಪ್ಪಾಜಿಯವರ ಪುಸ್ತಕ ನೀಡಬೇಕೆಂದು ಕೊಂಡಿದ್ದೆ, ಅದನ್ನು ನೀಡಿದ್ದೇನೆ. ಇದು ಯಾವುದೇ ರೀತಿಯಲ್ಲೂ ರಾಜಕೀಯ ಭೇಟಿಯಲ್ಲ,’ ಎಂದಿದ್ದಾರೆ ಪುನೀತ್ ಸ್ಪಷ್ಟಪಡಿಸಿದ್ದಾರೆ.