ಹೀಗೇ ಮಾಡಿ ಎಂದು ಹೇಳಲು ನಾನೇನು ಸುಪ್ರೀಂ ಅಲ್ಲ, ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ: ಅಂಬರೀಶ್

ಮೀಟೂ ಪ್ರಕರಣಕ್ಕೆ ಇತ್ಯರ್ಥ ಹಾಡಬೇಕು ಎಂದು ನಟ ಅಂಬರೀಶ್ ನಡೆಸಿದ್ದ ಸಂಧಾನ ಸಭೆ ವಿಫಲವಾಗಿದ್ದು, ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ ಎನ್ನುವ ಮೂಲಕ ನಟ ಅಂಬರೀಶ್ ಕೂಡ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಟ ಅಂಬರೀಶ್
ಸುದ್ದಿಗೋಷ್ಠಿಯಲ್ಲಿ ನಟ ಅಂಬರೀಶ್
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ತಾರಕಕ್ಕೇರಿರುವ ನಟ ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಪ್ರಕರಣ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಪ್ರಕರಣಕ್ಕೆ ಇತ್ಯರ್ಥ ಹಾಡಬೇಕು ಎಂದು ನಟ ಅಂಬರೀಶ್ ನಡೆಸಿದ್ದ ಸಂಧಾನ ಸಭೆ ಕೂಡ ವಿಫಲವಾಗಿದ್ದು, ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ ಎನ್ನುವ ಮೂಲಕ ನಟ ಅಂಬರೀಶ್ ಕೂಡ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಇಂದು ನಡೆದ ಸಭೆ ಬಳಿಕ ಮಾತನಾಡಿದ ನಟ ಅಂಬರೀಶ್ ಅವರು, 'ಇದು ಕೂಡಲೇ ಬಗೆಹರಿಯುವಂತಹ ಪ್ರಕರಣ ಅಲ್ಲ. ಇಬ್ಬರ ಮನಸ್ಸಿಗೂ ನೋವಾಗಿದೆ. ಸಂಧಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸ್ವಲ್ಪ ಸಮಯವಕಾಶ ನೀಡಬೇಕಿದೆ. ಪ್ರಕರಣದ ಒಂದು ಹೆಜ್ಜೆ ಈಗಾಗಲೇ ನ್ಯಾಯಾಲಯದಲ್ಲಿದೆ. ಹಾಗಾಗಿ ತುಂಬಾ ಎಚ್ಚರಿಕೆಯಿಂದ ಎಲ್ಲವನ್ನು ನೋಡಬೇಕಿದೆ. ನಾನು ಹೇಳಿದ್ದು ಒಂದೇ ಮಾತು. ಶೇಖ್ ಹ್ಯಾಂಡ್ ಮಾಡಿ, ಒಬ್ಬರಿಗೊಬ್ಬರು ಮಾತನಾಡಿಸಬೇಡಿ. ಬೇರೆ ಬೇರೆಯಾಗಿ ಹೋಗಿ, ನಿಮ್ಮಿಬ್ಬರ ಮಧ್ಯೆ ನಾನು ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
'ಚಿತ್ರರಂಗದಲ್ಲಿ ಮೀಟೂ ಆಂತಾ ಬಂದಿದೆ. ಮೀಟೂ ಕ್ಲಾಸ್ (ಕಾನೂನು ನಿಯಮ) ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುತ್ತೇನೆ. ಸಂಧಾನ ಮಾಡೋದು ನನ್ನ ಆಸೆ. ಹಿರಿಯ ಎಂದು ನನ್ನನ್ನು ಕರೆಸ್ತಾರೆ. ಕಿರಿಯ ನಟರಿಗೆ ನನ್ನ ಅನುಭವದ ನಾಲ್ಕು ಮಾತುಗಳನ್ನು ಹೇಳುತ್ತೇನೆ. ಇಬ್ಬರಿಗೂ ಒಂದೊಂದು ಆಯ್ಕೆ ನೀಡಿದ್ದೇವೆ. ಕೋರ್ಟ್, ಕಾನೂನು ವಿಚಾರದಲ್ಲಿ ನಾವು ತಲೆ ಹಾಕೋದಕ್ಕೆ ಆಗಲ್ಲ. ನಿಮ್ಮ ತೀರ್ಮಾನವನ್ನು ನಮಗೆ ತಿಳಿಸಿ ಹೇಳಿ ಅಂತಾ ಕಳುಹಿಸಿದ್ದೇವೆ. ಮೀಡಿಯಾದಲ್ಲಿ ನಾಲ್ಕೈದು ದಿನಗಳಿಂದ ಇದೇ ಬರುತ್ತಿರೋದನ್ನು ನೋಡಿದ್ದೇನೆ. ಎರಡೂ ಕುಟುಂಬದ ಸದಸ್ಯರು ಮಾನಸಿಕವಾಗಿ ನೊಂದಿದ್ದಾರೆ. ನಾನು ಸುಪ್ರೀಂ ಅಲ್ಲ, ಇಬ್ಬರಿಗೂ ಸಮಯ ನೀಡಿದ್ದೇವೆ. ಪ್ರಕರಣ ನ್ಯಾಯಾಲಯಕ್ಕೆ ಹೋಗಿದ್ದರಿಂದ ಸ್ವಲ್ಪ ಎಚ್ಚರಿಕೆಯಿಂದ ನಿಭಾಯಿಸಬೇಕಿದೆ ಎಂದು ಅಂಬರೀಶ್ ಹೇಳಿದ್ದಾರೆ.
ಆರೋಪ-ಪ್ರತ್ಯಾರೋಪ ಸಂಬಂಧ ದಾಖಲೆ ನೀಡಿಲ್ಲ
ಇದೇ ವೇಳೆ ಶೃತಿ ಮತ್ತು ಅರ್ಜುನ್ ಸರ್ಜಾ ಇಬ್ಬರು ಯಾವುದೇ ದಾಖಲಾತಿಗಳನ್ನು ನೀಡಿಲ್ಲ. ಈ ಪ್ರಕರಣದಿಂದ ಚಿತ್ರರಂಗಕ್ಕೆ ಯಾವುದೇ ತೊಂದರೆ ಆಗಲ್ಲ. ಚಿಕ್ಕದರಲ್ಲಿಯೇ ಮುಗಿದ್ರೆ ನಮಗೂ ಖುಷಿ. ಚಿತ್ರರಂಗದವರಿಗೆ ಯಾವುದೇ ಜಾತಿ ಇಲ್ಲ. ಈ ಪ್ರಕರಣದಲ್ಲಿ ಯಾವುದೇ ಎಡ-ಬಲ ಅಂತಾ ಇಲ್ಲ. ಎಲ್ಲವನ್ನು ರಾಜಕೀಯ ಮಾಡೋದಕ್ಕೆ ಹೋಗಲಾಗುತ್ತಿದೆ. ನನ್ನ ಸಿನಿಮಾ ಜೀವನದಲ್ಲಿ ಇಂತಹ ಪ್ರಕರಣವನ್ನೇ ನೋಡಿಲ್ಲ. ನಿಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರ ಜೊತೆ ಮಾತನಾಡಿ ಯೋಚಿಸಿ ಹೇಳಿ ಅಂತಾ ಕಳುಹಿಸಿದ್ದೇವೆ ಎಂದು ನಟ ಅಂಬರೀಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com