ಸಂಗ್ರಹ ಚಿತ್ರ
ಸಿನಿಮಾ ಸುದ್ದಿ
ಚಿತ್ರರಂಗಕ್ಕೆ ಒಬ್ಬರೇ 'ಯಜಮಾನ', ಅದು ಡಾ. ವಿಷ್ಣುದಾದ ಮಾತ್ರ: ನಟ ದರ್ಶನ್
ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನ ಅದು, ಡಾ.ವಿಷ್ಟುವರ್ಧನ್ ಅವರು ಮಾತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಯಜಮಾನ ಅದು, ಡಾ.ವಿಷ್ಟುವರ್ಧನ್ ಅವರು ಮಾತ್ರ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.
ತಮ್ಮ ಬಹು ನಿರೀಕ್ಷಿತ ಯಜಮಾನ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಚಿತ್ರದ ಟೈಟಲ್ ವಿವಾದ ಕೂಡ ಸುದ್ದಿಯಾಗುತ್ತಿದೆ. ದರ್ಶನ್ ತಮ್ಮ ಚಿತ್ರಕ್ಕೆ ಯಜಮಾನ ಎಂಬ ಶೀರ್ಷಿಕೆ ಇಟ್ಟಿರುವುದು ವಿಷ್ಣು ವರ್ಧನ್ ಅವರ ಹಲವು ಅಭಿಮಾನಿಗಳಲ್ಲಿ ಅಸಮಾಧಾನ ಹುಟ್ಟುಹಾಕಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಟೈಟಲ್ ಕುರಿತು ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದು, ಟೈಟಲ್ ಸಂಬಂಧ ಕೆಲ ವಿಷ್ಣು ದಾದಾ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೇ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಯಜಮಾನ ಚಿತ್ರಕ್ಕೆ ಹೋಲಿಕೆ ಮಾಡಿ ಸ್ಯಾಂಡಲ್‍ವುಡ್ ಯಜಮಾನ ಯಾರು ಎಂಬ ಮಾತು ಕೇಳಿ ಬಂದಿತ್ತು. ಇದೀಗ ಈ ಎಲ್ಲ ಚರ್ಚೆಗಳಿಗೂ ನಟ ದರ್ಶನ್ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಕನ್ನಡ ಚಿತ್ರರಂಗದ ನಿಜವಾದ ಯಜಮಾನ ಡಾ. ವಿಷ್ಣುವರ್ಧನ್ಅವರೇ. ಅಂದೂ ಅವರೇ, ಇವತ್ತಿಗೂ ಅವರೇ. ಕಥೆಗಾಗಿ ನಾವು ಆ ಟೈಟಲ್ ಬಳಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ. ಇನ್ನೂ ಯಜಮಾನ ಚಿತ್ರ ಮಾರ್ಚ್ 1ರಂದು ಬಿಡುಗಡೆ ನನ್ನ ಯಜಮಾನ ಸಿನಿಮಾಗೂ ವಿಷ್ಣುದಾದ ಅವರಿಗೂ ಸಂಬಂಧ ಇಲ್ಲ. ಸುಖಾ ಸುಮ್ಮನೇ ಸಿನಿಮಾದ ಬಗ್ಗೆ ಗೊಂದಲ ಮೂಡಿಸುವುದು ಬೇಡ. ಸಿನಿಮಾ ರಂಗದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಅದ್ದರಿಂದ ಮತ್ತೊಮ್ಮೆ ಹೇಳುತ್ತಿದ್ದೇವೆ. ಚಿತ್ರರಂಗಕ್ಕೆ ಒಬ್ಬರೇ ಯಜಮಾನ ಅದು ವಿಷ್ಣುದಾದ ಮಾತ್ರ ಎಂದು ದರ್ಶನ್ ಹೇಳಿದ್ದಾರೆ.
ಇನ್ನು ಯಜಮಾನ ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ್ ಅವರ ಹೊಸ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದು, ಸಿನಿಮಾದಲ್ಲಿ ದರ್ಶನ್ ಜೊತೆ ನಟಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಚಿತ್ರ ಟ್ರೈಲರ್, ಹಾಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ್ದು, ಹಲವು ದಾಖಲೆಗಳನ್ನ ನಿರ್ಮಾಣ ಮಾಡಿದೆ. ಇನ್ನು ಚಿತ್ರ ಇದೇ ಮಾರ್ಚ್ 1ರಂದು ತೆರೆಗೆ ಅಪ್ಪಳಿಸಲಿದೆ.

