ಮಹೇಶ್ ಬಾಬು ಚಿತ್ರವನ್ನೇ ತೆಗಳಿದ್ದ ತೆಲಂಗಾಣ ಸಿಎಂ ಪುತ್ರ 'ಕೆಜಿಎಫ್' ನೋಡಿ ಹೇಳಿದ್ದೇನು ಗೊತ್ತಾ?

ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ತೆಲಂಗಾಣ ಸಚಿವ ಕೆಟಿ ರಾಮಾರಾವ್ ಅವರು ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ವೀಕ್ಷಿಸಿ ಚಿತ್ರ ತಂಡದ ಪರಿಶ್ರಮಕ್ಕೆ ಮಾರು ಹೋಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಹೈದರಾಬಾದ್: ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರ ಪುತ್ರ ಹಾಗೂ ತೆಲಂಗಾಣ ಸಚಿವ ಕೆಟಿ ರಾಮಾರಾವ್ ಅವರು ನಟ ಯಶ್ ಅಭಿನಯದ ಕೆಜಿಎಫ್ ಚಿತ್ರ ವೀಕ್ಷಿಸಿ ಚಿತ್ರ ತಂಡದ ಪರಿಶ್ರಮಕ್ಕೆ ಮಾರು ಹೋಗಿದ್ದಾರೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಕೆಟಿಆರ್ ಎಂದೇ ಖ್ಯಾತಿ ಗಳಿಸಿರುವ ಕೆಟಿ ರಾಮಾರಾವ್ ಅವರು, ಈ ಬಗ್ಗೆ ಸ್ವತಃ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ನಾನು ತಡವಾಗಿ ಚಿತ್ರ ನೋಡಿರ ಬಹುದು. ಆದರೆ ಒಂದು ಒಳ್ಳೆಯ ಚಿತ್ರ ನೋಡಿದ ಖುಷಿಯಿದೆ. ತಾಂತ್ರಿಕವಾಗಿ ಕೆಜಿಎಫ್ ಚಿತ್ರ ಉನ್ನತ ಮಟ್ಟದಲ್ಲಿದ್ದು, ಚಿತ್ರಕಥೆಯ ನಿರೂಪಣೆ ಮತ್ತು ಶೈಲಿ ಹೊಸದಾಗಿದೆ. ಪ್ರಶಾಂತ್ ನೀಲ್ ನಿರ್ದೇಶನ ಅತ್ಯುತ್ತಮವಾಗಿದ್ದು, ಇಡೀ ಚಿತ್ರಕ್ಕೆ ಹಿನ್ನಲೆ ಸಂಗೀತ ಬೆನ್ನೆಲುಬಾಗಿದೆ. ಅಂತೆಯೇ ರಾಕಿಂಗ್ ಸ್ಟಾರ್ ಯಶ್ ಅಭಿನಯ ಕೂಡ ರಾಕಿಂಗ್ ಆಗಿದೆ ಎಂದು ಚಿತ್ರತಂಡದ ಬೆನ್ನು ತಟ್ಟಿದ್ದಾರೆ.
ಇನ್ನು ಈ ಹಿಂದೆ ಇದೇ ಕೆಟಿಆರ್ ತಮ್ಮ ಆಪ್ತ ಮಿತ್ರ ಮತ್ತು ತೆಲುಗು ಸಿನಿಮಾ ರಂಗದ ಸೂಪರ್ ಸ್ಚಾರ್ ಮಹೇಶ್ ಬಾಬು ಅವರ ಚಿತ್ರವನ್ನೇ ಟೀಕಿಸಿ ಸುದ್ದಿಯಾಗಿದ್ದರು. ಮಹೇಶ್ ಬಾಬು ಅಭಿನಯದ ಆಗಡು ಚಿತ್ರ ಬಿಡುಗಡೆ ಬಳಿಕ ಮಹೇಶ್ ತಮ್ಮ ಮಿತ್ರ ಕೆಟಿಆರ್ ಗೆ ಕರೆ ಮಾಡಿ ಚಿತ್ರದ ಕುರಿತು ಪ್ರತಿಕ್ರಿಯೆ ಕೇಳಿದ್ದರಂತೆ. ಆಗ ಕೆಟಿಆರ್ ಇಂತಹ ಕೆಟ್ಟ ಚಿತ್ರ ಮಾಡಬೇಡ ಎಂದು ನೇರವಾಗಿಯೇ ಮಹೇಶ್ ಗೆ ಕಿವಿಮಾತು ಹೇಳಿದ್ದರಂತೆ. ಈ ವಿಚಾರವನ್ನು ಸ್ವತಃ ಮಹೇಶ್ ಬಾಬು ಅವರೇ ತಮ್ಮ ಭರತ್ ಅನೆ ನೇನು ಚಿತ್ರದ ಪ್ರಚಾರದ ವೇಳೆ ಬಹಿರಂಗ ಪಡಿಸಿದ್ದರು.
ಒಟ್ಟಾರೆ ಕೆಜಿಎಫ್ ಚಾಪ್ಟರ್ 1 ಸಕ್ಸಸ್ ಬೆನ್ನಲ್ಲೇ ಚಿತ್ರತಂಡ ಚಾಪ್ಟರ್ 2ಗೆ ತಯಾರಿ ನಡೆಸಿಕೊಂಡಿದ್ದು, ಚಾಪ್ಟರ್ 2 ಇನ್ನೂ ಉತ್ತಮವಾಗಿರಲಿದೆ ಎಂದು ಅಭಿಮಾನಿಗಳು ಆಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com