ಕೊರೋನಾ ವೈರಸ್ ಹಿನ್ನೆಲೆ: ನಟ ಬುಲೆಟ್ ಪ್ರಕಾಶ್ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ: ಸಚಿವ ಆರ್​ ಅಶೋಕ್

ರಾಜ್ಯದಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಿನ್ನೆ ವಿಧಿವಶರಾದ ಖ್ಯಾತ ನಟ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಸಚಿವ ಆರ್ ಆಶೋಕ್ - ನಟ ಬುಲೆಟ್ ಪ್ರಕಾಶ್
ಸಚಿವ ಆರ್ ಆಶೋಕ್ - ನಟ ಬುಲೆಟ್ ಪ್ರಕಾಶ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ನಿನ್ನೆ ವಿಧಿವಶರಾದ ಖ್ಯಾತ ನಟ ಬುಲೆಟ್ ಪ್ರಕಾಶ್ ಅವರ ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್ ಅವರು, 'ಕೊರೋನಾ ವೈರಸ್ ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ​ನಟ ಬುಲೆಟ್ ಪ್ರಕಾಶ್ ಪಾರ್ಥಿವ ಶರೀರದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನಿರಾಕರಿಸಲಾಗಿದೆ. ಇದೇ ರೀತಿಯಾಗಿ ಸೆಲೆಬ್ರಿಟಿಗಳು ಸಹ  ಅಂತಿಮ ದರ್ಶನ ಪಡೆಯುವಂತಿಲ್ಲ. ಆದರೆ, ಸಂಬಂಧಿಕರಿಗಷ್ಟೇ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಲಾಕ್ ಡೌನ್ ಮುಗಿದ ನಂತರ ಕಡಿಮೆ ಜನರು ಪೂಜೆ ಸಂಸ್ಕಾರದಲ್ಲಿ ಭಾಗಿಯಾಗಬಹುದು. ದೂರದಿಂದಲೇ ನಟ ಬುಲೆಟ್​​ ಪ್ರಕಾಶ್​ ಅವರಿಗೆ ನಮನ ಸಲ್ಲಿಸುವಂತೆ ಅಭಿಮಾನಿಗಳಲ್ಲಿ ಸಚಿವರು  ಮನವಿ ಮಾಡಿದ್ದಾರೆ.

ಬುಲೆಟ್ ಪ್ರಕಾಶ್ ನನ್ನ ಒಳ್ಳೆಯ ಗೆಳೆಯ: ಆರ್ ಅಶೋಕ್
ಬುಲೆಟ್ ಪ್ರಕಾಶ್ ನನ್ನ ಒಳ್ಳೆಯ ಗೆಳೆಯ ಎಂದು ಹೇಳಿದ ಸಚಿವ ಆರ್ ಅಶೋಕ್, 'ಪ್ರತಿ ತಿಂಗಳು ಇಬ್ಬರು ಭೇಟಿ ಮಾಡುತ್ತಿದ್ವಿ. ಕಿಡ್ನಿ ಟ್ರಾನ್ಸ್‌ಫಾರ್ಮೇಷನ್ ಆಗಬೇಕು ಸಹಾಯ ಮಾಡುವಂತೆ ಕೇಳಿದ. ನಾನು ಒಪ್ಪಿಕೊಂಡಿದ್ದೆ. ಮುಖ್ಯಮಂತ್ರಿಗಳು ಎರಡು ಲಕ್ಷ ರೂಪಾಯಿಯನ್ನು  ಆಪರೇಷನ್​​ಗೆ ಕೊಡುವುದಾಗಿ ಒಪ್ಪಿದ್ದರು. ಆದರೆ ಈಗ ಅವರೇ ಇಲ್ಲ. ಅವರು ಇವತ್ತು ನಮ್ಮೊಂದಿಗೆ ಇಲ್ಲ ಅನ್ನೋದು ದುಃಖ ತಂದಿದೆ. ಇವತ್ತು ಅವರ ದೇಹವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿಲ್ಲ. ಬದಲಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಅಂತ್ಯಕ್ರಿಯೆ  ಹೆಬ್ಬಾಳದಲ್ಲಿ ನಡೆಯಲಿದೆ. ಆದರೆ, ಅಂತಿಮ ದರ್ಶನಕ್ಕೆ ಯಾವುದೇ ವ್ಯವಸ್ಥೆ ಮಾಡಲಾಗುವುದಿಲ್ಲ ಎಂದು ಹೇಳಿದರು.

ಆಸ್ಪತ್ರೆ ಬಿಲ್ ಕ್ಲೀಯರ್ ಮಾಡಿದ ಅಶೋಕ್
ಇನ್ನು ಬುಲೆಟ್ ಪ್ರಕಾಶ್ ಅವರ ಆಸ್ಪತ್ರೆ ಬಿಲ್ ಗಳನ್ನು ಸಚಿವ ಆರ್.ಅಶೋಕ್ ಅವರೇ ಕಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ನಟ ದುನಿಯಾ ವಿಜಿ ಮಾಹಿತಿ ನೀಡಿದ್ದು, 'ಆರ್.ಅಶೋಕ್ ಅವರಿಗೆ ಧನ್ಯವಾದ.‌ ಆಸ್ಪತ್ರೆಯ ಬಿಲ್ ಕ್ಲಿಯರ್ ಮಾಡಿದ್ದಾರೆ. ಇಷ್ಟೊತ್ತಲ್ಲಿ ದೇಹವನ್ನು ಮನೆಗೆ  ತೆಗೆದುಕೊಂಡು ಹೋಗೋದು ಬೇಡ ಅಂತಾ ನಾನು ಮತ್ತು ಪ್ರೇಮ್ ಕುಟುಂಬದ ಮನವೊಲಿಸಿದ್ದೇವೆ. ಹೀಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡುವ ವ್ಯವಸ್ಥೆ ನಡೀತಿದೆ. ನಾಳೆ ಮನೆಯ ಹತ್ತಿರ ತೆಗೆದುಕೊಂಡು ಹೋಗಲಿದ್ದೇವೆ.  ನಾಳೆ ಅಂತ್ಯ ಸಂಸ್ಕಾರ ಎಷ್ಟು ಗಂಟೆಗೆ  ಅಂತಾ ತೀರ್ಮಾನ ಮಾಡಲಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com